Advertisement

ಯೂಟ್ಯೂಬ್‌ನಲ್ಲಿ IAS ಪಾಠ ಮಾಡಿ, 21ರ ಹರೆಯದಲ್ಲೇ 10 ಲಕ್ಷ ರೂ. ಕಾರು ಖರೀದಿಸಿದ ವಿದ್ಯಾರ್ಥಿ

06:48 PM Jun 30, 2024 | ಸುಹಾನ್ ಶೇಕ್ |

ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎನ್ನುವ ಮಾತಿಗೆ ಸಾಧನೆಯನ್ನು ಮಾಡಿ ಉತ್ತರಿಸಿದ ಸಾವಿರಾರು ಉದಾಹರಣೆಗಳನ್ನು ನಾವು ನೋಡಬಹುದು. ಇಲ್ಲೊಬ್ಬ ವಿದ್ಯಾರ್ಥಿ 21ರ ಹರೆಯದಲ್ಲೇ ತನ್ನ ಸ್ವಂತ ದುಡ್ಡಿನಿಂದಲೇ 10 ಲಕ್ಷ ರೂ. ಮೌಲ್ಯದ ಕಾರೊಂದನ್ನು ಖರೀದಿಸಿ ಕಾಲೇಜಿನ ಶಿಕ್ಷಕರನ್ನೇ ದಂಗಾಗಿಸಿದ್ದಾನೆ.!

Advertisement

ಕಾಸರಗೋಡಿನ(Kasargod) ಹಳ್ಳಿಗಾಡಿನ ರಾಜಪುರಂನಲ್ಲಿರುವ ಸೇಂಟ್ ಪಿಯಸ್ ಎಕ್ಸ್ ಕಾಲೇಜಿನಲ್ಲಿ ಬಿಎಸ್ಸಿಯ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿರುವ ಸಾಯೂಜ್ ಎಸ್ ಚಂದ್ರನ್(Sayooj S Chandran) ಓದಿನಲ್ಲಿ ಮುಂದಿರುವ ವಿದ್ಯಾರ್ಥಿ.

ಮಂಗಳವಾರ(ಜೂ.25 ರಂದು) ಕಾಲೇಜಿನ ಪ್ರಾಧ್ಯಾಪಕ ಶಿನೋಶ್ ಸ್ಕರಿಯಾಚನ್ ಅವರು ಸಾಯೂಜ್ ಅವರಿಗೆ ಕರೆಮಾಡಿ ಮೈಕ್ರೋಬಯಾಲಜಿ ರೆಕಾರ್ಡ್ ಸಲ್ಲಿಸಲು ಮರೆಯಬೇಡ ಎಂದು ಹೇಳಿದ್ದಾರೆ. ನಾನು ಕಾರು ಖರೀದಿಸಲು ತೆರಳುತ್ತಿದ್ದೇನೆ. ಈ ಕಾರಣದಿಂದ ಬುಧವಾರ(ಜೂ.27 ರಂದು) ಕಾಲೇಜಿಗೆ ಬರುತ್ತಿಲ್ಲ ಎಂದಿದ್ದಾರೆ. ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿ ಅಪ್ಪ – ಅಮ್ಮನ ಜೊತೆ ಕಾರು ಖರೀದಿಸಲು ಹೋಗುವುದಾಗಿ ಕಾಲೇಜಿಗೆ ರಜೆ ಹಾಕುವುದು ಎಷ್ಟು ಸರಿ ಎಂದು ಯೋಚಿಸಿ ಪ್ರಶ್ನೆ ಮಾಡಿದ್ದಾರೆ.

ಪ್ರಾಧ್ಯಾಪಕರ ಪ್ರಶ್ನೆಗೆ ಸಾಯೂಜ್‌ ಅವರು ಉತ್ತರಿಸಿದ್ದನ್ನು ಕೇಳಿ ಪ್ರಾಧ್ಯಾಪಕರು ದಂಗಾಗಿದ್ದಾರೆ. ನಾನು ನನ್ನ ತಂದೆ – ತಾಯಿಗೆ ಕಾರುಕೊಳ್ಳಲು ರಜೆ ಹಾಕುತ್ತಿಲ್ಲ. ನನಗಾಗಿ, ನನ್ನ ಸ್ವಂತ ದುಡ್ಡಿನಲ್ಲೇ(10 ಲಕ್ಷ ರೂ.) ಕಾರನ್ನು ಖರೀದಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಮರುದಿನವೇ ಕಾಲೇಜಿನ ಎಲ್ಲೆಡೆ ಸಾಯೂಜ್‌ ಅವರ ಮಾತೇ ಸುದ್ದಿಯಾಗಿ ಹಬ್ಬುತ್ತದೆ. ಆತ 21ರ ವಯಸ್ಸಿನಲ್ಲಿ 10 ಲಕ್ಷ ಮೌಲ್ಯದ ಕಾರು ಖರೀದಿಸಿದ ಎನ್ನುವ ಮಾತಿಗೆ ಬದಲಾಗಿ ಆತ ಕಾರು ಖರೀದಿಸಿದ್ದೇಗೆ ಎನ್ನುವ ಮಾತೇ ಎಲ್ಲೆಡೆ ಚರ್ಚೆಯ ವಿಚಾರವಾಗಿ ಹಬ್ಬುತ್ತದೆ.

Advertisement

ಸಾಯೂಜ್‌ ಅವರು ಸ್ಪೂರ್ತಿದಾಯಕ ಕಥೆಯ ಬಗ್ಗೆ ʼಆನ್‌ ಮನೋರಾಮಾʼ ವರದಿ ಮಾಡಿದೆ.

ಯಾರು ಈ ಸಾಯೂಜ್‌ ಚಂದ್ರನ್?:‌ ಕಾಸರಗೋಡಿನ ಸಾಯೂಜ್ ಆರಂಭಿಕ ಶಿಕ್ಷಣವನ್ನು ಚೆಮ್ನಾಡ್ ಪಂಚಾಯತ್‌ನ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆ ಮತ್ತು ಚೆಂಗಳ ಪಂಚಾಯತ್‌ನ ಎಡನೀರ್‌ನ ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರು.

ಸಾಯೂಜ್ ಅವರ ತಂದೆ, ಪಿ ಚಂದ್ರನ್ (59), ಮಾಜಿ ಸೈನಿಕರಾಗಿದ್ದರೆ, ಅವರ ತಾಯಿ, ಸತಿ ಚಂದ್ರನ್ (49) ಸಮಾಜ ಸೇವಕಿ ಮತ್ತು MNREGS ಮೇಲ್ವಿಚಾರಕರಾಗಿದ್ದಾರೆ.

ವೈದ್ಯನಾಗುವ ಕನಸನ್ನು ಹೊಂದಿದ್ದ ಸಾಯೂಜ್‌ ಪಿಯುಸಿ ಬಳಿಕ 2022ರ ನೀಟ್‌ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ ಯಶಸ್ಸು ಸಾಧಿಸಲು ಆಗುವುದಿಲ್ಲ.

ಇದಾದ ನಂತರ  2022ರಲ್ಲಿ ಅವರು ತಮ್ಮ ಮನೆಯಿಂದ ಸುಮಾರು 35 ಕಿಮೀ ದೂರದಲ್ಲಿರುವ ಕಲ್ಲರ್ ಪಂಚಾಯತ್‌ನ ರಾಜಪುರಂನಲ್ಲಿರುವ ಸೇಂಟ್ ಪಿಯಸ್ ಎಕ್ಸ್ ಕಾಲೇಜಿಗೆ ಸೇರುತ್ತಾರೆ.

ಮೈಕ್ರೋಬಯಾಲಜಿಯಲ್ಲಿ ಯುಜಿಯನ್ನು ನೀಡುವ ಏಕೈಕ ಕಾಲೇಜು ಇದಾಗಿದ್ದು ಸಾಯೂಜ್ ಮೆಡಿಕಲ್‌ ಸೈನ್ಸ್‌ ಮಾಡುವ ಉದ್ದೇಶದಿಂದ ಈ ಕಾಲೇಜಿಗೆ ದಾಖಲಾಗುತ್ತಾರೆ.

ಚಿಗುರಿದ ಐಎಎಸ್‌ ಕನಸು..: ಬಿಎಸ್ಸಿ ಪದವಿಗೆ ಸೇರಿದ ಬಳಿಕ ಸಾಯೂಜ್‌ ಅವರ ಕಲಿಕೆಯ ಆಸಕ್ತಿ ಐಎಎಸ್‌ ಆಯ್ಕೆಯತ್ತ ಸಾಗುತ್ತದೆ. ಕಾಲೇಜಿನಲ್ಲಿ ಬಿಎಸ್ಸಿ ಮನೆಯಲ್ಲಿ ಐಎಸ್‌ ನತ್ತ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಸಾಯೂಜ್‌ ಪ್ರತಿನಿತ್ಯ ಸಾಮಾನ್ಯ ಜ್ಞಾನದ ಪ್ರಶ್ನೆ ಹಾಗೂ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾರೆ. ಈ ಕಾರಣದಿಂದ ಎರಡು ಇಂಗ್ಲಿಷ್ ಪತ್ರಿಕೆಯ ಚಂದಾದಾರಿಕೆಯನ್ನು ಪಡೆದುಕೊಳ್ಳುತ್ತಾರೆ. ಇಂಗ್ಲಿಷ್‌ ಪತ್ರಿಕೆ ಸುದ್ದಿಯಲ್ಲಿನ ಶಬ್ದವನ್ನು ಅರ್ಥೈಸುವುದು ಕಷ್ಟವಾಗಿದ್ದರಿಂದ ಇಂಗ್ಲಿಷ್‌ ಭಾಷಣ, ಕಾದಂಬರಿ, ಸಿನಿಮಾ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಮಾತುಗಳನ್ನು ಆಲಿಸಲು ಶುರು ಮಾಡುತ್ತಾರೆ.

“ನಾನು ಜೈಶಂಕರ್ ಅವರ ಭಾಷಣಗಳನ್ನು ಪ್ರೀತಿಸುತ್ತೇನೆ. ಆದರೆ ನಾವು ಅವರಂತೆ ಮಾತನಾಡಬೇಕಾಗಿಲ್ಲ. ನಾವು ಚೆನ್ನಾಗಿ ಸಂವಹನ ನಡೆಸಬೇಕು. ವಿಷಯದ ಬಗ್ಗೆ ನಮ್ಮ ಗಮನವಿರಬೇಕು” ಎಂದು ಸಾಯೂಜ್‌ ಹೇಳುತ್ತಾರೆ.

ನಾಗರಿಕ ಸೇವೆಗಳ ಪರೀಕ್ಷೆ ತಯಾರಿಗಾಗಿ ಸಾಯೂಜ್‌ 2018 ರಲ್ಲಿ ಎರಡನೇ ರ್‍ಯಾಂಕ್ ಗಳಿಸಿದ ಅಕ್ಷತ್ ಜೈನ್ ಅವರ ಹಾದಿಯನ್ನು ಅನುಸರಿಸಲು ಶುರು ಮಾಡುತ್ತಾರೆ.‌ ಇಂಟರ್ ನೆಟ್‌ ನಲ್ಲಿ ಉಚಿತವಾಗಿ ಸಿಗುವ ವಿಷಯಗಳನ್ನು ಪರೀಕ್ಷೆಯ ತಯಾರಿಗೆ ಬಳಸಿಕೊಳ್ಳಲು ಅಕ್ಷತ್‌ ರಂತೆ ಸಾಯೂಜ್‌ ಮುಂದಾಗುತ್ತಾರೆ.

ಇದಾದ ನಂತರದ 8 ತಿಂಗಳು ಸಮಗ್ರವಾಗಿ ಇಂಟರ್‌ ನೆಟ್‌ ನಿಂದ ಸಾಯೂಜ್‌ ಪ್ರಸ್ತುತ ವ್ಯವಹಾರಗಳು, ಬಹು ಆಯ್ಕೆ ಪ್ರಶ್ನೆ(Aptitude tests), ಇತಿಹಾಸ, ಭೌಗೋಳಿಕತೆ ಮತ್ತು ಸಾಮಾನ್ಯ ಅಧ್ಯಯನಗಳ ಮಾಹಿತಿಯನ್ನು ‘ ಫಿಸಿಕ್ಸ್‌  ವಲ್ಲಾಹ್’ ಯೂಟ್ಯೂಬ್‌ ಚಾನೆಲ್‌ ನಿಂದ ಪಡೆದುಕೊಂಡು ಪರೀಕ್ಷೆಗೆ ತಯಾರಿ ನಡೆಸುತ್ತಾರೆ.

ಪ್ರತಿದಿನ ನ್ಯೂಸ್‌ ಪೇಪರ್ಸ್‌ ಗಳನ್ನು ಓದುವುದು, ಬಿಡುವಿನ ವೇಳೆ ಪರೀಕ್ಷಾ ಸಂಬಂಧಿತ ವಿಚಾರವನ್ನು ತಿಳಿದುಕೊಳ್ಳುವುದನ್ನು ಮಾಡುವ ಮೂಲಕ ಶಿಸ್ತಿನ ಚೌಕಟ್ಟನ್ನು ರೂಢಿಸಿಕೊಂಡಿರುತ್ತಾರೆ.

ಯೂಟ್ಯೂಬ್‌ ಚಾನೆಲ್‌ ಆರಂಭ..

ಸಾಯೂಜ್‌ ಅವರಿಗೆ ತಾನು ಏನು ಮಾಡಿದರೂ ಅದನ್ನೆಲ್ಲವನ್ನು ಬರೆದಿಟ್ಟು ಟಿಪ್ಪಣಿ ಮಾಡಿಕೊಳ್ಳುವ ಅಭ್ಯಾಸವಿರುತ್ತದೆ. ತಾನು ಕಲಿತ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆನ್ನುವ ಉದ್ದೇಶದಿಂದ ತಮ್ಮದೇ ಆದ ಯೂಟ್ಯೂಬ್‌ ಚಾನೆಲ್‌ ವೊಂದನ್ನು ಆರಂಭಿಸುತ್ತಾರೆ.

‘ಎಸ್‌ಸಿ ಐಎಎಸ್ ಅಕಾಡೆಮಿ’ ಎಂದು ತನ್ನ ಯೂಟ್ಯೂಬ್‌ ಚಾನೆಲ್‌ ಗೆ ಮೊದಲಿಗೆ ಹೆಸರಿಡುತ್ತಾರೆ. ಇದಾದ ಬಳಿಕ ಅದನ್ನು ಬದಲಾಯಿಸಿ ʼಐಎಎಸ್ ಹಬ್ ಮಲಯಾಳಂʼ  ಎಂದು ಹೆಸರಿಡುತ್ತಾರೆ.

ಈ ಚಾನೆಲ್‌ ನಲ್ಲಿ ಸಾಯೂಜ್‌ ತಾನು ಕಲಿತ ವಿಚಾರವನ್ನು ಹಂಚಿಕೊಳ್ಳುತ್ತಾರೆ. ನೋಟ್ಸ್‌ ಗಳನ್ನು ಪಿಪಿಟಿ ಮಾಡಿ ಹಂಚುತ್ತಾರೆ. ಆರಂಭದಲ್ಲಿ ಸಣ್ಣಮಟ್ಟದಲ್ಲಿ ಶುರುವಾದ ಇವರ ಚಾನೆಲ್‌ ದಿನಕಳೆದಂತೆ ಜನ ಬರಲು ಶುರು ಮಾಡುತ್ತಾರೆ.  ಎರಡು ತಿಂಗಳಿನಲ್ಲಿ 10 ಸಾವಿರ ವೀಕ್ಷಣೆ ಆಗಲು ಶುರುವಾಗುತ್ತದೆ. ಇದಾದ ಬಳಿಕ ಟೆಲಿಗ್ರಾಮ್‌ ನಲ್ಲಿ ನೋಟ್ಸ್‌ ಕಳುಹಿಸಲು ಒಂದು ಗ್ರೂಪ್‌ ಕ್ರಿಯೇಟ್‌ ಮಾಡುತ್ತಾರೆ. ಈ ಗ್ರೂಪ್ ನಲ್ಲಿ ಇನ್ನಷ್ಟು‌ ಮಂದಿ ಆಕಾಂಕ್ಷಿಗಳು ಜಾಯಿನ್‌ ಆಗುತ್ತಾರೆ. ಆನ್‌ ಲೈನ್‌ ನಲ್ಲಿ ಐಎಎಸ್‌ ಸಂಬಂಧಿತ ವಿಡಿಯೋಗಳನ್ನು ಯೂಟ್ಯೂಬ್‌ ಮೂಲಕ ಹಂಚಿಕೊಳ್ಳುವ ವೇಳೆ ಅವರ ಕಲಿಕಾ ಶೈಲಿಗೆ ಆಕಾಂಕ್ಷಿಗಳು ಹಣ ಕೊಟ್ಟು ಬರಲು ಮುಂದಾಗುತ್ತಾರೆ.

ಇದರಲ್ಲಿ ವಿದ್ಯಾರ್ಥಿಗಳು, ಪಾರ್ಟ ಟೈಮ್‌ ಕೆಲಸಗಾರರು ಸೇರಿದಂತೆ ಎಲ್ಲಾ ವರ್ಗದ ಜನರು ಸೇರಿಕೊಳ್ಳುತ್ತಾರೆ. ಈ ಕಾರಣದಿಂದ ಸಾಯೂಜ್‌ ತನ್ನ ಯೂಟ್ಯೂಬ್‌ ಚಾನೆಲ್‌ ನ್ನು ಪ್ರೈವೇಟ್‌ ಯನ್ನಾಗಿ ಮಾಡುತ್ತಾರೆ.

ಸಾಯೂಜ್‌ ಅವರ ಯೂಟ್ಯೂಬ್‌ ಚಾನೆಲ್‌ ಗೆ ಭೇಟಿ ನೀಡುವ ಬಹುತೇಕರು ಕೇರಳದ ದಕ್ಷಿಣ ಜಿಲ್ಲೆಯ ವಿದ್ಯಾರ್ಥಿಗಳು. ಆರಂಭದಲ್ಲಿ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ಕೇವಲ 500 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಅವರು ಪಾವತಿಸಲು ಸಾಧ್ಯವಾಗದಿದ್ದರೆ ಅಥವಾ ದೈಹಿಕ ಅಸಾಮರ್ಥ್ಯಗಳನ್ನು ಹೊಂದಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಯೂಟ್ಯೂಬ್‌ ಲಿಂಕ್‌ ಕಳುಹಿಸು ಕೊಡುತ್ತಾರೆ.

ಇತ್ತೀಚೆಗೆ ಅವರು ಹೊಸ ವಿದ್ಯಾರ್ಥಿಗಳಿಗೆ ಶುಲ್ಕವನ್ನು 1,000 ರೂ.ಗೆ ಹೆಚ್ಚಿಸಿದ್ದಾರೆ. ಏಕೆಂದರೆ ಅವರು ಪ್ರತಿದಿನ ಲಿಖಿತ ಪರೀಕ್ಷೆಗಳನ್ನು ನಡೆಸಿ ಅದನ್ನು ಮೌಲ್ಯಮಾಪನಗಳನ್ನು ಮಾಡುತ್ತಾರೆ.

ಸಾಯೂಜ್‌ ಅವರು ಯೂಟ್ಯೂಬ್‌ ಚಾನೆಲ್‌ ನಡೆಸಿಕೊಂಡು ಐಎಎಸ್‌ ಆಕಾಂಕ್ಷಿಗಳ ಕಲಿಕೆಯ ಆಸರೆ ಆಗುತ್ತಿದ್ದಾರೆ ಎನ್ನುವುದು ಅವರ ಸ್ನೇಹಿತರು ಹಾಗೂ ಶಿಕ್ಷಣ ಸಂಸ್ಥೆಯ ಓರ್ವ ಶಿಕ್ಷಕಿಗೆ ಹೊರತುಪಡಿಸಿ ಇತ್ತೀಚೆಗಿನವರೆಗೆ ಯಾರಿಗೂ ಗೊತ್ತಿರಲಿಲ್ಲ.

ಪ್ರಾಧ್ಯಾಪಕರು ರೆಕಾರ್ಡ್‌ ಸಲ್ಲಿಕೆಗೆ ಕರೆ ಮಾಡಿದಾಗ ಇವರ ಕಥೆ ಹೊರಬಂದಿದೆ. ಸದ್ಯ ಸಾಯೂಜ್‌ ಅವರು ತನ್ನ ಯೂಟ್ಯೂಬ್‌ ನಿಂದ ಆದಾಯ ಗಳಿಸುತ್ತಿದ್ದು, ಅದರಿಂದ ಬಂದ ಹಣದಿಂದಲೇ ಕಾರುಕೊಂಡಿದ್ದಾರೆ. ಅವರು 2025 ರ ನಾಗರಿಕ ಸೇವಾ ಪರೀಕ್ಷೆಗಾಗಿ ತಯಾರಿ ನಡೆಸಿಕೊಳ್ಳುತ್ತಿದ್ದಾರೆ.

“ನಾನು ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ, ಎಲ್ಲಾ ಆಕಾಂಕ್ಷಿಗಳಿಗೆ ನನ್ನ ತರಗತಿಗಳನ್ನು ಉಚಿತವಾಗಿ ನಡೆಸುತ್ತೇನೆ” ಎಂದು ಸಾಯೂಜ್‌ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next