ಹೈದರಾಬಾದ್: ಈ ಮಹಾಮಾರಿ ಕೋವಿಡ್ 19 ವೈರಸ್, ತನ್ನ ತೆಕ್ಕೆಗೆ ಸಿಕ್ಕವರನ್ನಷ್ಟೇ ಇಕ್ಕಟ್ಟಿಗೆ ಸಿಲುಕಿಸುತ್ತಿಲ್ಲ.
ಬದಲಿಗೆ ತನ್ನ ಸಂಪರ್ಕದಿಂದ ದೂರ ಉಳಿದವರ ಬದುಕನ್ನೂ ಬೀದಿಗೆ ತರುತ್ತಿದೆ.
ಇದಕ್ಕೆ ತಾಜಾ ಉದಾಹರಣೆ, ಕೋವಿಡ್ ಆವರಿಸುವ ಮುನ್ನ ತೆಲಂಗಾಣದ ಖಾಸಗಿ ಶಾಲೆಯೊಂದರ ಪ್ರಿನ್ಸಿಪಾಲ್ ಆಗಿದ್ದ ವ್ಯಕ್ತಿ ಇಂದು ತಳ್ಳುಗಾಡಿಯಲ್ಲಿ ಇಡ್ಲಿ ಮಾರುತ್ತಿರುವುದು.
ಖಮ್ಮಮ್ ಪಟ್ಟಣದ ಖಾಸಗಿ ಶಾಲೆಯೊಂದರ ಪ್ರಿನಿಪಾಲ್ ಪತ್ನಿ ಜೊತೆ ತಳ್ಳುಗಾಡಿಯಲ್ಲಿ ಇಡ್ಲಿ, ವಡೆ ಹಾಗೂ ದೋಸೆ ಮಾರುತ್ತಿದ್ದಾರೆ. ಇವರಷ್ಟೇ ಅಲ್ಲ, ಇದೇ ರಾಜ್ಯದ ನಲ್ಗೊಂಡದ ಆಂಗ್ಲ ಭಾಷಾ ಶಿಕ್ಷಕ ವಿಮಾ ಏಜೆಂಟ್ ಆಗಿದ್ದಾರೆ.
ಹಾಗೇ ರಾಂಚಿಯ ಸಮಾಜ ವಿಜ್ಞಾನ ಶಿಕ್ಷಕ ತಮ್ಮ ಭತ್ತದ ಗದ್ದೆಯಲ್ಲಿ ದುಡಿಯುತ್ತಿದ್ದಾರೆ. ಇವರೆಲ್ಲರೂ ತಮ್ಮ ವೃತ್ತಿ ಬಿಟ್ಟು, ಪರಿಚಯವೇ ಇಲ್ಲದ ದುಡಿಮೆಗೆ ಇಳಿಯಲು ಕಾರಣ ಕೋವಿಡ್ 19. ಕೋವಿಡ್ 19 ಲಾಕ್ ಡೌನ್‌ನಿಂದಾಗಿ ದೇಶದ ಆರ್ಥಿಕತೆ ಕುಸಿದು ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಲಕ್ಷಾಂತರ ಸಣ್ಣ ವ್ಯಹಾರ, ಉದ್ದಿಮೆಗಳು ಬಾಗಿಲು ಹಾಕುವ ಹಂತ ತಲುಪಿವೆ.
ಹಾಗೇ ದೇಶದ ಮಹಾನಗರ ಹಾಗೂ ಪಟ್ಟಣಗಳಲ್ಲಿರುವ ಸಣ್ಣ ಪುಟ್ಟ ಖಾಸಗಿ ಶಾಲೆಗಳು ಸಹ ಬಾಗಿಲು ಹಾಕಿವೆ. ಮಕ್ಕಳ ಶಾಲೆ ಫೀಸ್ ಕಟ್ಟಲು ಪೋಷಕರ ಬಳಿ ಹಣವಿಲ್ಲ. ಪರಿಣಾಮ ಶಾಲಾ ಆಡಳಿತದ ಖಜಾನೆ ಕೂಡ ಖಾಲಿಯಾಗಿ, ಶಿಕ್ಷಕರು ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಈ ಶಿಕ್ಷಕರೇ ಕುಟುಂಬದ ಏಕೈಕ ಆದಾಯದ ಮೂಲವಾಗಿರುವ ಹಿನ್ನೆಲೆಯಲ್ಲಿ ಲಕ್ಷಕ್ಕೂ ಅಧಿಕ ಕುಟುಂಬಗಳು ಹೊತ್ತಿನ ತುತ್ತಿಗೂ ಪರದಾಡುವ ಪರಿಸ್ಥಿತಿ ಬಂದಿದೆ.