Advertisement

ಪ್ರಧಾನಿ ಭೇಟಿ: ಸಂಚಾರ ವ್ಯವಸ್ಥೆ

09:15 AM Oct 27, 2017 | Team Udayavani |

ಬೆಳ್ತಂಗಡಿ: ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಸಂದರ್ಭ ಈ ಕೆಳಗಿನಂತೆ ಸಂಚಾರ ವ್ಯವಸ್ಥೆಗಳನ್ನು ಮಾಡಲಾಗಿದೆ. ಧರ್ಮಸ್ಥಳದಲ್ಲಿ ಸಾರ್ವಜನಿಕರಿಗೆ ರವಿವಾರ ಮಧ್ಯಾಹ್ನ 1.30ರ ವರೆಗೆ ದರ್ಶನ ಅವಕಾಶವಿಲ್ಲ. ಧರ್ಮಸ್ಥಳ ಮುಖ್ಯದ್ವಾರ ಮತ್ತು ಪ್ರವೇಶ ದ್ವಾರಗಳಲ್ಲಿ ರವಿವಾರ ಮಧ್ಯಾಹ್ನ 1.30ರ ವರೆಗೆ ಪ್ರವೇಶವಿರುವುದಿಲ್ಲ.

Advertisement

ಧರ್ಮಸ್ಥಳ ಉಜಿರೆ ಸಂಚಾರ ವ್ಯವಸ್ಥೆ
ಧರ್ಮಸ್ಥಳ ಉಜಿರೆ ನಡುವೆ ರವಿವಾರ ಬೆಳಗ್ಗೆ 9 ಗಂಟೆಯ ಅನಂತರ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಕೊಕ್ಕಡ ಕಡೆಯಿಂದ ಉಜಿರೆಗೆ ಕಾರ್ಯಕ್ರಮಕ್ಕೆ ಅಗಮಿಸುವವರು 9 ಗಂಟೆ ಯೊಳಗಾಗಿ ಉಜಿರೆ ತಲುಪತಕ್ಕದ್ದು. ಇಲ್ಲವೇ ಕೊಕ್ಕಡ- ನೆಲ್ಯಾಡಿ- ಉಪ್ಪಿನಂಗಡಿ- ಗುರುವಾಯನಕೆರೆ- ಬೆಳ್ತಂಗಡಿಯಾಗಿ ಉಜಿರೆ ಪ್ರವೇಶಿಸಬಹುದು. ಚಾರ್ಮಾಡಿ, ಮಂಗಳೂರು ಕಡೆಯಿಂದ ಬರುವ ರಸ್ತೆಗಳು ಮುಕ್ತವಾಗಿರುತ್ತವೆ.

ವಾಹನ ನಿಲುಗಡೆ
ಬೆಳ್ತಂಗಡಿ ಕಡೆಯಿಂದ ಬರುವವರಿಗೆ ಜನಾದ‌ìನ ಸ್ವಾಮಿ ಪ್ರಾಥಮಿಕ ಶಾಲೆ, ಉಜಿರೆ, ಅಜ್ಜರಕಲ್ಲು ಮೈದಾನ. ಇತರರಿಗೆ ಜನಾರ್ದನ ಸ್ವಾಮಿ ರಥಬೀದಿ ಎದುರು ವಾಹನ ನಿಲುಗಡೆಗೆ ವ್ಯವಸ್ಥೆ ಇದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿದೇìಶಕ ಡಾ| ಎಲ್‌.ಎಚ್‌. ಮಂಜುನಾಥ್‌ ತಿಳಿಸಿದ್ದಾರೆ.

ಭಾಗವಹಿಸುವವರಿಗೆ ಸೂಚನೆ
ಕಾರ್ಯಕ್ರಮಕ್ಕೆ ಆಗಮಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿರುತ್ತದೆ. ಕಾರ್ಯಕ್ರಮ ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಸಾರ್ವಜನಿಕರಿಗೆ ಉಜಿರೆ ಕಡೆಯಿಂದ, ಬೆಳಾಲು ರಸ್ತೆಯ ಕಡೆಯಿಂದ ಕ್ರೀಡಾಂಗಣಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಬೆಳಗ್ಗೆಯಿಂದಲೇ ಉಜಿರೆಯಿಂದ ಕಾಲೇಜು ಕಡೆಗಿರುವ ದ್ವಿಪಥ ರಸ್ತೆಯಲ್ಲಿ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಕಾರ್ಯಕ್ರಮಕ್ಕೆ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ವಾಹನದಲ್ಲಿ ಆಗಮಿಸಿ ಜನಾದ‌ìನ ಸ್ವಾಮಿ ರಥಬೀದಿಯಲ್ಲಿ ಇಳಿದು ನಡೆದುಕೊಂಡು ಕ್ರೀಡಾಂಗಣಕ್ಕೆ ಬರಬೇಕು. ಎಲ್ಲ ಸಾರ್ವಜನಿಕರು ಬೆಳಗ್ಗೆ 10.30ರೊಳಗೆ ಕ್ರೀಡಾಂಗಣ ಪ್ರವೇಶಿಸಿ ಆಸೀನರಾಗಬೇಕು.

ವಿ.ಐ.ಪಿ. ಪಾಸ್‌ ಹೊಂದಿರುವವರು ಉಜಿರೆ ಕಾಲೇಜ್‌ ಬಸ್‌ನಿಲ್ದಾಣದ ಸಮೀಪ ರಚಿಸಲಾಗಿರುವ ದ್ವಾರದಿಂದ ಪ್ರವೇಶಿಸಬೇಕು. ವಾಹನಗಳಲ್ಲಿ ಬರುವ ವಿಐಪಿ ಪಾಸುದಾರರು ಇಲ್ಲಿಯೇ ಇಳಿದು ವಾಹನವನ್ನು ಅಜ್ಜರಕಲ್ಲು ವಾಹನ ನಿಲುಗಡೆಗೆ ಕಳುಹಿಸಬೇಕು. ಎಲ್ಲ ಪಾಸುದಾರರು ತಮಗೆ ಒದಗಿಸಲಾದ ಪಾಸ್‌ ಮತ್ತು ಫೋಟೋ ಐಡಿಯನ್ನು ತರಬೇಕು. ವಾಹನದಲ್ಲಿ ಬರುವ ವಿಐಪಿ ಪಾಸುದಾರರು ವಾಹನ ಪಾಸ್‌ ಪಡಕೊಂಡಿರತಕ್ಕದ್ದು. ಕ್ರೀಡಾಂಗಣದಲ್ಲಿ ನೀರಿನ ಬಾಟಲ್‌ ಮತ್ತು ಚೀಲಗಳನ್ನು ನಿಷೇಧಿಸಲಾಗಿದೆ. ಕ್ರೀಡಾಂಗಣದಲ್ಲಿ ಪ್ರತ್ಯೇಕ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.

Advertisement

1 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ
ಮಂಗಳೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅ. 29ರಂದು ನಡೆಯ ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮವು ಸಾರ್ವಜನಿಕ ಸಮಾ ರಂಭವಾಗಿದ್ದು, ಸಾರ್ವಜನಿಕರು  ಮುಕ್ತ ವಾಗಿ ಪಾಲ್ಗೊಳ್ಳಬಹುದು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಮಾಜಿ ವಿಧಾನ ಪರಿಷತ್‌ ಸದಸ್ಯ ಕೆ. ಮೋನಪ್ಪ ಭಂಡಾರಿ ತಿಳಿಸಿದ್ದಾರೆ.
ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಸದಸ್ಯರಿಗೆ ರುಪೇ ಕಾರ್ಡ್‌ ವಿತರಿಸುವ ಈ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಜನರು ಭಾಗ ವಹಿಸುವ ನಿರೀಕ್ಷೆ ಇದೆ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಅಧಿಕ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಭಾಗ ವಹಿಸುವಂತೆ ಸೂಚಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಅನಂತ ಕುಮಾರ್‌, ಅನಂತ ಕುಮಾರ್‌ ಹೆಗಡೆ, ಸಂಸದ ನಳಿನ್‌ ಕುಮಾರ್‌ ಕಟೀಲು ಮತ್ತು ಇತರ ಸಂಸದರು, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಇತರ ನಾಯಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಸಂಜಯ ಪ್ರಭು, ಜಿತೇಂದ್ರ ಕೊಟ್ಟಾರಿ, ವೇದವ್ಯಾಸ ಕಾಮತ್‌ ಅವರು ಉಪಸ್ಥಿತರಿದ್ದರು.

ಭದ್ರತೆಗೆ 2,500 ಪೊಲೀಸರು
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಉಜಿರೆ ಹಾಗೂ ಧರ್ಮಸ್ಥಳದಲ್ಲಿ ವ್ಯಾಪಕ ಭದ್ರತೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಸುಮಾರು 2,500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ. ಧರ್ಮಸ್ಥಳ ಮತ್ತು ಉಜಿರೆ ಹೆಲಿಪ್ಯಾಡ್‌ ಹಾಗೂ ಧರ್ಮಸ್ಥಳದಿಂದ ಉಜಿರೆ ಮಾರ್ಗದಲ್ಲಿ ಬಂದೋಬಸ್ತು ವ್ಯವಸ್ಥೆ ಮಾಡಲಾಗುತ್ತಿದೆ. ಸಮಾವೇಶ ನಡೆಯುವ ಸ್ಥಳದಲ್ಲಿ ಪೊಲೀಸ್‌ ವಿಶೇಷ ಕಂಟ್ರೋಲ್‌ ರೂಂ ತೆರೆಯಲಾಗುತ್ತಿದ್ದು, 16ಕ್ಕೂ ಹೆಚ್ಚು ಸಿಸಿ ಕೆಮರಾ ಅಳವಡಿಸಲಾಗುತ್ತದೆ. ನೆರೆಯ ಜಿಲ್ಲೆ ಗಳಿಂದ ಪೊಲೀಸರನ್ನು ಕರೆಸಲಾ ಗಿದ್ದು, ಶುಕ್ರವಾರ ಸಂಜೆಯೊಳಗೆ ಪೊಲೀಸ್‌ ಪಡೆ ಧರ್ಮಸ್ಥಳಕ್ಕೆ ಆಗಮಿಸಲಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

ಉದಯ ಕುಮಾರ್‌ ಶೆಟ್ಟಿ, ನಳಿನ್‌  ಉಸ್ತುವಾರಿ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಅ. 29ರ ದಕ್ಷಿಣ ಕನ್ನಡ ಜಿಲ್ಲೆ ಭೇಟಿಗೆ ಸಂಬಂಧಿಸಿದಂತೆ ಬಿಜೆಪಿಯ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲು ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರ ಪ್ರಕಟನೆ ತಿಳಿಸಿದೆ.

ಎಸ್‌ಪಿಜಿ, ಪೊಲೀಸ್‌ ಅಧಿಕಾರಿಗಳ ಸಭೆ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಗುರುವಾರ ಪ್ರಧಾನಿಯವರ ವಿಶೇಷ ಭದ್ರತಾ ಪಡೆ ಎಸ್‌ಪಿಜಿ ಅಧಿಕಾರಿಗಳ ಜತೆ ಪೊಲೀಸ್‌ ಇಲಾಖೆ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು  ಸಭೆ ನಡೆಸಿದರು. ಸಭೆಯಲ್ಲಿ ಎಸ್‌ಪಿಜಿ ಹಿರಿಯ ಅಧಿಕಾರಿಗಳು, ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ಮತ್ತು ಇತರ ಪೊಲೀಸ್‌ ಅಧಿಕಾರಿಗಳು, ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.  ಭದ್ರತಾ ವ್ಯವಸ್ಥೆಗಳ ಬಗ್ಗೆ  ಚರ್ಚೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next