ಸಿಕ್ಕಿಂನ ಪ್ರವಾಸ ರೂಪಿಸುವಾಗಲೇ ಮೊದಲು ನೋಡಬೇಕಾದ ಸ್ಥಳಗಳ ಪಟ್ಟಿಯಲ್ಲಿದ್ದದ್ದು ನಾಥುಲಾ ಪಾಸ್. ರಾಜಧಾನಿ ಗ್ಯಾಂಗ್ಟಕ್‌ನಿಂದ 54 ಕಿ.ಮಿ. ದೂರ, 14, 450 ಅಡಿ ಎತ್ತರದಲ್ಲಿರುವ ಇಂಡೋ- ಟಿಬೆಟ್ (ಚೀನೀಆಕ್ರಮಿತ) ಗಡಿಯ ಕಣಿವೆ, ನಾಥುಲಾ ಪಾಸ್. ಟಿಬೆಟಿಯನ್ ಭಾಷೆಯಲ್ಲಿ ನಾಥು ಎಂದರೆ ಕೇಳುವ ಕಿವಿಗಳು, ಲಾ ಎಂದರೆ ಕಣಿವೆ. ಇದು ಜಗತ್ತಿನಲ್ಲಿಯೇ ವಾಹನಗಳು ಸಂಚರಿಸುವ ಅತಿಎತ್ತರದಲ್ಲಿರುವ ರಸ್ತೆಗಳಲ್ಲಿ ಒಂದಾಗಿದೆ. ನಾಥುಲಾ ಕಣಿವೆ ರಕ್ಷಿತ ಮತ್ತು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇಲ್ಲಿಗೆ ಭೇಟಿ ನೀಡಬೇಕಾದರೆ ಪರ್ಮಿಟ್ ಬೇಕೇಬೇಕು. ರಾಜಧಾನಿ ಗ್ಯಾಂಗ್ಟಕ್‌ನಲ್ಲಿ ಹಿಂದಿನ ದಿನವೇ ಇದನ್ನು ಪಡೆಯಬೇಕು. ವಾರದಲ್ಲಿ ಬುಧವಾರದಿಂದ ಭಾನುವಾರ ಮಾತ್ರ ಪ್ರವೇಶಕ್ಕೆ ಅನುಮತಿ ಇದೆ. ಸ್ವಂತ ವಾಹನದಲ್ಲಿ ಹೋಗುವಂತಿಲ್ಲ. ಸಿಕ್ಕಿಂ ಸರ್ಕಾರದ ಅಧಿಕೃತ ಪರವಾನಿಗೆ ಪಡೆದ ವಾಹನಗಳಿಗೆ ಮಾತ್ರ ಅನುಮತಿ ಇದೆ. ಹಿಮ ಬೀಳುವ ಪ್ರದೇಶವಾದ್ದರಿಂದ ಮೇ-ಅಕ್ಟೋಬರ್ ಸಂದರ್ಶಿಸಲು ಸೂಕ್ತ ಕಾಲ.
ಎತ್ತರೆತ್ತರದ ಪರ್ವತಗಳನ್ನು ಅಡ್ಡವಾಗಿ ಕೊರೆದ ದುರ್ಗಮ ರಸ್ತೆಗಳಲ್ಲಿ , ಕಡಿದಾದ ತಿರುವುಗಳಲ್ಲಿ ನಮ್ಮ ಪಯಣ ಸಾಗಿತ್ತು. ದಾರಿಯುದ್ದಕ್ಕೂ ಶಿಸ್ತಾಗಿ ಸಾಲಾಗಿ ಸಾಗುವ ರಕ್ಷಣಾ ಪಡೆಯ ಆಹಾರ ಸಾಮಗ್ರಿಗಳ ವಾಹನಗಳು ಮತ್ತು ಭೂಕುಸಿತದಿಂದ ಅಲ್ಲಲ್ಲಿ ಮಣ್ಣಿನ ರಾಶಿ. ಗಾಜಿನಿಂದ ಹೊರಗೆ ನೋಡಿದಾಗ ಬಾನು ಮುಟ್ಟುವ ಪರ್ವತಗಳು ಒಂದೆಡೆಯಾದರೆ, ತಲೆತಿರುಗುವ ಆಳ ಕಣಿವೆ ಇನ್ನೊಂದೆಡೆ.
ಇಲ್ಲಿ ನೋಡಿ. ಪ್ರಪಂಚದಲ್ಲಿಯೇ ಅತ್ಯಂತ ಎತ್ತರ ಪ್ರದೇಶದಲ್ಲಿರುವ ಎಟಿಎಮ್ ಇದು. ಹೆಪ್ಪುಗಟ್ಟುವ ಹಿಮದಲ್ಲೂ ಕೆಲಸ ಮಾಡುವಂತೆ ಘನೀಕರಿಸದ ವಿಶೇಷ ತೈಲ ಉಪಯೋಗಿಸಿ ಜೆನರೇಟರ್ ಬಳಸುತ್ತಾರೆ ಎಂದಾಗ ಕೈಕಾಲು ನಡುಗುತ್ತಿದ್ದರೂ ಜೀಪಿನಿಂದಲೇ ಇಣುಕಿ ನೋಡಿದ್ದಾಯಿತು. ಅದು ನಾಥುಲಾಕ್ಕೆ ಹೋಗುವ ದಾರಿಯಲ್ಲಿನ ಥೆಗು ಎಂಬ ಪುಟ್ಟ ಹಳ್ಳಿ. ಕೊರೆಯುವ ಚಳಿ ತಡೆಯಲಾಗದೇ ಬಿಸಿ ಚಾಯ್ ಮತ್ತು ಮೊಮೊ ತಿನ್ನಲು ಅಲ್ಲಿಯೇ ಬ್ರೇಕ್ ತೆಗೆದುಕೊಂಡಿದ್ದೆವು. ಕೆಂಪು ಕೆನ್ನೆ, ಗುಂಡು ಮುಖ, ಸಣ್ಣಕಣ್ಣು, ನಗುಮುಖದ ಟಿಬೆಟಿಯನ್ನರ ಚಹರೆ ಹೊಂದಿದ ಜನರ ಸಾಲು ಸಾಲು ಅಂಗಡಿಗಳು. ಶೀತಪ್ರದೇಶಕ್ಕೆ ಬೇಕಾಗುವ ಉಣ್ಣೆ , ಚರ್ಮದ ಬೆಚ್ಚನೆ ಉಡುಪು, ಬೂಟು, ಮತ್ತು ಬಿಸಿ ಸೂಪ್, ಚಾಯ್ ಎಲ್ಲವನ್ನೂ ಮಾರುವ ಕೆಫೆ/ಮಾರ್ಕೆಟ್. ಯಾವುದೋ ಒಂದಕ್ಕೆ ನುಗ್ಗಿ ಏನಾದರೂ ಬಿಸಿಯಾದದ್ದು ಕೊಡಿ ಎಂದು ಕುರ್ಚಿಯಲ್ಲಿ ಕುಳಿತಿದ್ದಷ್ಟೇ. ಅಂಗಡಿಯವನು ನುಡಿದ, “ಕಳೆದ ವಾರ ನಿಮ್ಮಷ್ಟೇ ವಯಸ್ಸಿನ ಹೆಂಗಸು ಇಲ್ಲೇ ಟೀ ಕುಡಿದಿತ್ತು. ಆಮೇಲೆ ಮೇಲೆ ಹೋದಾಗ ಉಸಿರು ತೆಗೆಯಲು ಕಷ್ಟವಾಗಿ ಸತ್ತಿದೆ. ಈ ವಾರ ಚಳಿ ಹೆಚ್ಚಿದೆ, ಸ್ನೋ ಬೇರೆ ಬಿದ್ದಿದೆ, ಹುಸಾರು ಆಯ್ತಾ. ಬೇಕಾದ್ರೆ ಪೋರ್ಟೆಬಲ್ ಆಕ್ಸಿಜನ್ ಸಿಲಿಂಡರ್ ತೆಗೆದುಕೊಳ್ಳಿ !’
ಮಸಾಲಾ ಚಾಯ್ ಗುಟುಕರಿಸುತ್ತಿದ್ದ ನಾನು ಬೆಚ್ಚಿ ಬಿದ್ದೆ! ಒಂದು, ಸಾವಿನ ವಿಷಯ; ಎರಡು, ಬೇರೆ ಗ್ರಹದವನಂತೆ ಕಾಣುತ್ತಿದ್ದ ಈ ಟಿಬೆಟಿಯನ್ ಬಾಯಲ್ಲಿ ಕನ್ನಡ ಕಸ್ತೂರಿ!
ಕಣ್ಣು ಬಾಯಿ ತೆರೆದು ಬೆಕ್ಕಸಬೆರಗಾಗಿ ಕುಳಿತ ನನ್ನನ್ನು ನೋಡಿ ಅವನೇ ವಿವರಿಸಿದ, “ಆ ಹೆಂಗಸಿಗೆ ಅಸ್ತಮಾ ಇತ್ತು, ಹಾಗಾಗಿ ಹೋದಳು. ನಿಮಗೆ ಏನೂ ಆಗುವುದಿಲ್ಲ. ಮತ್ತೆ ನಾನು ನಿಮ್ಮದೇ! ಅಂದ್ರೆ ಹುಟ್ಟಿ ಬೆಳೆದಿದ್ದು ಬೈಲಕುಪ್ಪೆ. ಇಲ್ಲಿ ಮಾವನ ಅಂಗಡಿಯಲ್ಲಿ ಬಿಸಿನೆಸ್ ಮಾಡುತೇ¤ನೆ. ನನಗೆ ಇಲ್ಲಿ ಇಷ್ಟವಿಲ್ಲ. ಈ ಮೊಮೊ, ನೂಡಲ್ಸ್ ಎಲ್ಲಕಿಂತ ಸೊಪ್ಪಿನ ಸಾರು- ಬಿಸಿಬೆಲೆಬಾತ್ ಸೇರ್ತದೆ. ಕನ್ನಡದವರು ಬಂದ್ರೆ ಖುಷಿ ನನಗೆ’
ನಮ್ಮವನೇ ಎಂಬ ಅಭಿಮಾನದಿಂದ ಆತನೊಂದಿಗೆ ಆ ಚಳಿಯಲ್ಲೇ ಫೋಟೋ ತೆಗೆಸಿಕೊಂಡು ಮತ್ತೆ ಪ್ರಯಾಣ ಮುಂದು ವರಿಸಿದ್ದೆವು. ಮೈ ಮನ ನಡುಗಿದರೂ ನಾಥುಲಾ ಪಾಸ್‌ಗೆ ಪ್ರವಾಸ ರೋಮಾಂಚನಕಾರಿ ಅನುಭವ!
ಕೆ. ಎಸ್. ಚೈತ್ರಾ