Advertisement

ಪೊಲೀಸರ ಮೇಲೆ ಕಲ್ಲೆಸೆದಾಕೆ ಇಂದು ಫ‌ುಟ್ಬಾಲ್‌ ತಂಡದ ನಾಯಕಿ!

06:10 AM Dec 06, 2017 | Team Udayavani |

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಜನತೆ ಭಯೋತ್ಪಾದಕರ ಗುಂಡಿನ ದಾಳಿ ಸದ್ದನ್ನು ಸದಾ ಕೇಳುತ್ತಲೇ ಬಂದವರು. ಗುಂಡಿನ ಸದ್ದು ಇಲ್ಲಿನ ಜನರಿಗೆ ಮಾಮೂಲಿನ ವಿಚಾರ.

Advertisement

ಕೆಲವು ಬಾರಿ ಅಸಹನೆ, ಆಡಳಿತ ವಿರೋಧಿ ನೀತಿ ವ್ಯಕ್ತವಾದಾಗ ಜನರು ರೊಚ್ಚಿಗೇಳುತ್ತಾರೆ. ಪೊಲೀಸರಿಗೆ ಕಲ್ಲೆಸೆದು ತಮ್ಮ ಅಕ್ರೋಶ ವ್ಯಕ್ತಪಡಿಸಿದ ಎಷ್ಟೋ ಘಟನೆ ಕಣ್ಣೆದುರಿಗಿದೆ. ಇಂಥದ್ದೇ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಗೆ ಕಲ್ಲು ಹೊಡೆದ ಹುಡುಗಿಯೊಬ್ಬಳು ಇಂದು ಜಮ್ಮು-ಕಾಶ್ಮೀರದ ಮೊದಲ ಫ‌ುಟ್ಬಾಲ್‌ ತಂಡದ ನಾಯಕಿಯಾಗಿ ಅಲ್ಲಿನವರ ಕಣ್ಮಣಿಯಾಗಿದ್ದಾಳೆ. ತನ್ನ ರಾಜ್ಯದ 22 ಸದಸ್ಯರ ತಂಡವನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿ ಹೊತ್ತಿದ್ದಾರೆ.

ಕೋಟಿ ಕನಸುಗಳ ಹುಡುಗಿ ಹಾಗೂ ತಂಡದ ಆಟಗಾರ್ತಿಯರು, ಸಿಬಂದಿ ಮಂಗಳವಾರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿದ್ದಾರೆ. ಜಮ್ಮು-ಕಾಶ್ಮೀರದ ಕ್ರೀಡಾ ಮೂಲ ಸೌಕರ್ಯ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. 

“ಗೃಹ ಸಚಿವ ರಾಜನಾಥ್‌ ಸಿಂಗ್‌ ಭೇಟಿ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ನಮ್ಮೂರಿನ ಕ್ರೀಡಾ ಮೂಲಸೌಕರ್ಯ ಸರಿಯಾಗಿಲ್ಲ ಎಂದು ನಾವು ಅವರಿಗೆ ತಿಳಿಸಿದೆವು. ಜಮ್ಮು -ಕಾಶ್ಮೀರದ ಕ್ರೀಡಾ ಅಭಿವೃದ್ಧಿಗೆ ಪ್ರಧಾನ ಮಂತ್ರಿ ವಿಶೇಷ ಪ್ಯಾಕೇಜ್‌ನಿಂದ 100 ಕೋಟಿ ರೂ. ನೀಡಿದ್ದೇವೆ ಎಂದು ಸಚಿವರು ತಿಳಿಸಿದರು. ಅರ್ಧ ಗಂಟೆ ನಡೆದ ಮಾತುಕತೆ ಮುಕ್ತವಾಗಿತ್ತು. ನಮ್ಮ ಮಾತನ್ನು ಅತ್ಯಂತ ಸಂಯಮದಿಂದ ಆಲಿಸಿದ ಗೃಹ ಸಚಿವರಿಗೆ ಧನ್ಯವಾದಗಳು ಎಂದು ಅಫ್ಷಾನ್‌ ತಿಳಿಸಿದರು.

ಯಾರಿವಳು ಹುಡುಗಿ ? 
ಹೆಸರು ಅಫ್ಷಾನ್‌ ಅಶಿಕ್‌. ವಯಸ್ಸು 21. ಈಕೆ ಶ್ರೀನಗರದ ಕಾಲೇಜ್‌ವೊಂದರಲ್ಲಿ ಕಲಾ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿ. ಜಮ್ಮು – ಕಾಶ್ಮೀರದಲ್ಲಿ ಗಲಭೆಯೊಂದು ಸಂಭವಿಸಿದ್ದಾಗ ಈಕೆ ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಪೊಲೀಸರಿಗೇ ಕಲ್ಲೆಸೆದಿದ್ದಳು ! ಹೌದು,  ಆ ಘಟನೆ ಬಳಿಕ ಆಕೆಯ ಬದುಕಿನ ದಿಕ್ಕೇ ಬದಲಾಗಿದೆ.

Advertisement

ಆಕೆಯ ಫೋಟೋ ರಾಷ್ಟ್ರದ ಪ್ರಮುಖ ಮಾಧ್ಯಮಗಳಲ್ಲೆಲ್ಲ ಪ್ರಕಟಗೊಂಡಿತ್ತು. ಇದರಿಂದ ಆಕೆಗೆ ತನ್ನ ತಪ್ಪಿನ ಅರಿವಾಗಿದೆ. ಬಳಿಕ ತುಂಬಾ ನೊಂದುಕೊಂಡಳು. ಇದನ್ನು ಸ್ವತಃ ಅಫ್ಷಾನ್‌ ಅವರೇ ಒಪ್ಪಿಕೊಂಡಿದ್ದಾರೆ. ಆ ಒಂದು ಘಟನೆ ಬದುಕಿನ ದಾರಿಯನ್ನೇ ಬದಲಾಯಿಸಿತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next