ಮುಂಬೈ: ಭಾರತದ ಶ್ರೀಮಂತ ಕ್ರಿಕೆಟಿಗ ಯಾರು ಎಂದರೆ ಮೊದಲ ನೆನಪಾಗುವುದು ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರದ್ದು. ಇವರೆಲ್ಲರೂ ಸಾವಿರ ಕೋಟಿ ರೂ ಒಡೆಯರು. ಆದರೆ ಭಾರತದ ಶ್ರೀಮಂತ ಕ್ರಿಕೆಟಿಗ ಇವರಲ್ಲ. ಬರೋಬ್ಬರಿ ಎರಡು ಸಾವಿರ ಕೋಟಿ ರೂ ಒಡೆಯ ಸಮರ್ಜಿತ್ ಸಿಂಗ್ ರಂಜಿತ್ ಸಿಂಗ್ ಗಾಯಕ್ವಾಡ್ ಭಾರತದ ಶ್ರೀಮಂತ ಕ್ರಿಕೆಟಿಗ.
ಬರೋಡಾದ ರಾಜಮನೆತನದ ಸಮರ್ಜಿತ್ ಸಿಂಗ್ ರಂಜಿತ್ ಸಿಂಗ್ ಗಾಯಕ್ವಾಡ್ ಅವರು ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗರು ಮತ್ತು ಬರೋಡಾ ಕ್ರಿಕೆಟ್ ಮಂಡಳಿಯ ನಿರ್ವಾಹಕರು.
ಸಮರ್ಜಿತ್ ಸಿಂಗ್ ಅವರು ಬರೋಡಾ ಪರ ಆರು ರಣಜಿ ಪಂದ್ಯವಾಡಿದ್ದಾರೆ. 1987-88, 1988-89ರ ರಣಜಿಯಲ್ಲಿ ಆಡಿದ್ದ ಅವರು 119 ರನ್ ಗಳಿಸಿದ್ದಾರೆ. ಅವರ ವೈಯಕ್ತಿಕ ಗರಿಷ್ಠ ಮೊತ್ತ 63 ರನ್.
ಇದನ್ನೂ ಓದಿ:Btown: ಅಂದು ಹಣಕ್ಕಾಗಿ ಬಟರ್ ಚಿಕನ್ ಮಾರಾಟ ಮಾಡುತ್ತಿದ್ದವ ಇಂದು ಬಾಲಿವುಡ್ನ ಸ್ಟಾರ್ ನಟ
1967 ರ ಏಪ್ರಿಲ್ 25 ರಂದು ರಣಜಿತ್ ಸಿಂಗ್ ಪ್ರತಾಪ್ ಸಿಂಗ್ ಗಾಯಕ್ವಾಡ್ ಮತ್ತು ಶುಭಾಂಗಿನಿರಾಜೆ ದಂಪತಿಯ ಏಕೈಕ ಪುತ್ರನಾಗಿ ಸಮರ್ಜಿತ್ ಸಿಂಗ್ ಜನಿಸಿದರು. ಅವರು ಡೆಹ್ರಾಡೂನ್ನ ದಿ ಡೂನ್ ಶಾಲೆಯಲ್ಲಿ ಅಧ್ಯಯನ ಮಾಡಿದರು, ಅಲ್ಲಿ ಅವರು ಶಾಲೆಯ ಕ್ರಿಕೆಟ್, ಫುಟ್ಬಾಲ್ ಮತ್ತು ಟೆನ್ನಿಸ್ ತಂಡಗಳಿಗೆ ಏಕಕಾಲದಲ್ಲಿ ನಾಯಕರಾಗಿದ್ದರು.
ಮೇ 2012 ರಲ್ಲಿ ಅವರ ತಂದೆಯ ಮರಣದ ನಂತರ, 22 ಜೂನ್ 2012 ರಂದು ಲಕ್ಷ್ಮಿ ವಿಲಾಸ್ ಅರಮನೆಯಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ಸಮರ್ಜಿತ್ ಸಿಂಗ್ ಮಹಾರಾಜರಾಗಿ ಪಟ್ಟವೇರಿದರು. 2020ರಲ್ಲಿ ಅವರು 20,000 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ (US $3.6 ಶತಕೋಟಿ) 23 ವರ್ಷಗಳ ಸುದೀರ್ಘ ಕಾನೂನು ಉತ್ತರಾಧಿಕಾರ ವಿವಾದವನ್ನು ಇತ್ಯರ್ಥಪಡಿಸಿದರು.
ಈ ಜಯದೊಂದಿಗೆ ಸಮರ್ಜಿತ್ ಸಿಂಗ್ ಅವರು ಲಕ್ಷ್ಮೀ ನಿವಾಸ ಅರಮನೆ, ಮೋತಿ ಬಾಘ್ ಸ್ಟೇಡಿಯಂ ಮತ್ತು ಮಹಾರಾಜ ಫತೇಹ್ ಸಿಂಗ್ ಮ್ಯೂಸಿಯಂ ಸೇರಿ ಸುಮಾರು 600 ಎಕರೆ ಜಾಗದ ಮಾಲಕತ್ವ ಪಡೆದರು. ರಾಜಾ ರವಿವರ್ಮಾ ಅವರ ಹಲವಾರು ವರ್ಣಚಿತ್ರಗಳು ಮತ್ತು ಫತೇಹ್ ಸಿಂಗ್ ಗೆ ಸೇರಿದ ಚಿನ್ನ, ಬೆಳ್ಳಿ ಮತ್ತು ರಾಜಮನೆತನದ ಆಭರಣಗಳಂತಹ ಚರ ಆಸ್ತಿಗಳು ಸಮರ್ಜಿತ್ ಸಿಂಗ್ ಅವರ ಒಡೆತನದ್ದಾಗಿದೆ.
ಅಷ್ಟೇ ಅಲ್ಲದೆ ಸಮರ್ಜಿತ್ ಸಿಂಗ್ ಅವರು ಗುಜರಾತ್ ಮತ್ತು ಬನಾರಸ್ ನ 17 ದೇವಸ್ಥಾನಗಳ ಟ್ರಸ್ಟಿಯಾಗಿದ್ದಾರೆ. 2002 ರಲ್ಲಿ ಸಮರ್ಜಿತ್ ಸಿಂಗ್ ಅವರು ವಂಕನೇರ್ ರಾಜ್ಯದ ರಾಜಮನೆತನದ ರಾಧಿಕರಾಜೆ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ನಾಲ್ವರು ಶುಭಾಂಗಿನಿ ರಾಜೆಯೊಂದಿಗೆ ಲಕ್ಷ್ಮಿ ವಿಲಾಸ ಅರಮನೆಯಲ್ಲಿ ವಾಸಿಸುತ್ತಿದ್ದಾರೆ, ಇದು ಭಾರತದ ಅತಿದೊಡ್ಡ ಖಾಸಗಿ ನಿವಾಸವಾಗಿದೆ.
ವರದಿಯ ಪ್ರಕಾರ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಸಂಪತ್ತು 1050 ಕೋಟಿ ರೂ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸಂಪತ್ತಿನ ಮೌಲ್ಯ 1040 ಕೋಟಿ ರೂ.