Advertisement

Success Story:ಅಂದು ಸಾ ಮಿಲ್ ಕಾರ್ಮಿಕ, ರೈಲ್ವೆ ನಿಲ್ದಾಣದಲ್ಲಿ ಓದು..ಇಂದು ಐಎಎಸ್ ಅಧಿಕಾರಿ

05:58 PM Mar 15, 2023 | ನಾಗೇಂದ್ರ ತ್ರಾಸಿ |

ಬಹಳಷ್ಟು ಜನರಿಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಸವಲತ್ತು ಮತ್ತು ಹಣಕಾಸಿನ ಸಮಸ್ಯೆಯಿಂದಾಗಿ ಆ ಆಸೆಯನ್ನು ಕೈಬಿಡುತ್ತಾರೆ. ಆದರೆ ಈ ವ್ಯಕ್ತಿ ಅದಕ್ಕೆ ತದ್ವಿರುದ್ಧ ಯಾಕೆಂದರೆ ಬಡತನದ ನಡುವೆಯೂ ತನ್ನ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಲ್ಲದೇ, ಐಎಎಸ್ ನಂತಹ ಉನ್ನತ ಶಿಕ್ಷಣಾಕಾಂಕ್ಷಿಗಳಿಗೆ ಪ್ರೇರಣೆಯಾಗಿದ್ದಾರೆ.

Advertisement

ಹೌದು ಇವರು ಯಾರು ಗೊತ್ತಾ ತಮಿಳುನಾಡಿನ ತಂಜಾವೂರಿನ ಐಎಎಸ್ ಅಧಿಕಾರಿ ಎಂ.ಶಿವಗುರು ಪ್ರಭಾಕರನ್. ಶಿವಗುರು ಐಎಎಸ್ ಕನಸು ನನಸು ಮಾಡಿಕೊಂಡ ಹಿಂದೆ ಅಪಾರ ಶ್ರಮವಿದೆ…ಆ ಯಶೋಗಾಥೆಯ ಸಂಕ್ಷಿಪ್ತ ವಿವರ ಇಲ್ಲಿದೆ…

ಯಾರು ಈ ಶಿವಗುರು ಪ್ರಭಾಕರನ್?

ಶಿವಗುರು ಅವರದ್ದು ರೈತ ಕುಟುಂಬ. ಶಿವಗುರು ಅವರ ತಾಯಿ, ತಂಗಿ ಹೊಲದಲ್ಲಿ ದುಡಿದು ಬದುಕು ಸಾಗಿಸಬೇಕಾಗಿತ್ತು.  ಅದಕ್ಕೆ ಕಾರಣ ಶಿವಗುರು ತಂದೆ ಕುಡಿತದ ದಾಸನಾಗಿದ್ದು, ಕುಟುಂಬ ನಿರ್ವಹಣೆಗಾಗಿ ಮನೆಯ ಸದಸ್ಯರೆಲ್ಲರೂ ದುಡಿಯಬೇಕಾದ ಅನಿರ್ವಾಯತೆ ಬಂದೊದಗಿತ್ತು.

Advertisement

Sawmill ಕೆಲಸಗಾರನಾಗಿ ದುಡಿಮೆ:

ತಂದೆಯ ಕುಡಿತದ ಚಟದಿಂದಾಗಿ ತಾಯಿ, ತಂಗಿ ಹಗಲು, ರಾತ್ರಿ ದುಡಿಯುವಂತಾಗಿತ್ತು. ಇದರಿಂದ ಬೇಸತ್ತ ಶಿವಗುರು ತಾನೂ ಕೂಡಾ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು, ಸಾ ಮಿಲ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಸಂದರ್ಶನವೊಂದರಲ್ಲಿ ಶಿವಗುರು ಪ್ರಭಾಕರನ್ ನೀಡಿರುವ ಮಾಹಿತಿ ಪ್ರಕಾರ, ನಾನು ಎರಡು ವರ್ಷಗಳ ಕಾಲ ಸೌದೆ ಮಿಲ್ ನಲ್ಲಿ ಕೆಲಸ ಮಾಡಿದೆ, ಜೊತೆಗೆ ಹೊಲದಲ್ಲಿಯೂ ದುಡಿದಿದ್ದೆ. ಆದರೆ ನನ್ನ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದರ ಜೊತೆಗೆ ನನ್ನ ಶಿಕ್ಷಣಕ್ಕಾಗಿ ಸ್ವಲ್ಪ ಹಣವನ್ನು ಉಳಿಸಿದ್ದೆ. ಯಾಕೆಂದರೆ ನಾನು ನನ್ನ ಕನಸನ್ನು ಬಿಟ್ಟುಕೊಡಲು ಸಿದ್ಧನಾಗಿರಲಿಲ್ಲ ಎಂದು ತಿಳಿಸಿದ್ದರು.

ಕಠಿಣ ದುಡಿಮೆ…ಛಲಗಾರ ಪ್ರಭಾಕರನ್;

ಸಾ ಮಿಲ್, ಹೊಲದಲ್ಲಿ ಕಷ್ಟಪಟ್ಟು ದುಡಿದ ಶಿವಗುರು ತನ್ನ ಸಹೋದರನ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಫೀಸ್ ಅನ್ನು ಕಟ್ಟಿದ್ದು, ಏತನ್ಮಧ್ಯೆ ಸಹೋದರಿಯ ವಿವಾಹವನ್ನು ನೆರವೇರಿಸಿದ್ದ. ಬಳಿಕ 2008ರಲ್ಲಿ ಶಿವಗುರು ತನ್ನ ಕನಸನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇರಿಸಿದ್ದರು. ಅದರಂತೆ ವೆಲ್ಲೂರ್ ನ ತಾಂಥೈ ಪೆರಿಯಾರ್ ಗವರ್ನಮೆಂಟ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಶಿವಗುರು ಸೇರಿಕೊಂಡಿದ್ದರು. ಅಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯಲು ಆರಂಭಿಸಿದ್ದರು.

ರೈಲ್ವೆ ಫ್ಲ್ಯಾಟ್ ಫಾರಂನಲ್ಲಿ ನಿದ್ದೆ…ಓದು..ಪರೀಕ್ಷೆ ತಯಾರಿ!

ಇಂಗ್ಲಿಷ್ ಭಾಷೆಯಲ್ಲಿ ಹಿಡಿತವಿಲ್ಲದ ಪರಿಣಾಮ ಶಿವಗುರುವಿಗೆ ಆರಂಭದಲ್ಲಿ ಎಂಜಿನಿಯರಿಂಗ್ ಓದಲು ಕಷ್ಟಪಡಬೇಕಾಯಿತು. ವಾರಾಂತ್ಯದಲ್ಲಿ ಚೆನ್ನೈನ ಸೈಂಟ್ ಥಾಮಸ್ ಮೌಂಟ್ ರೈಲ್ವೆ ನಿಲ್ದಾಣದ ಫ್ಲ್ಯಾಟ್ ಫಾರಂನಲ್ಲಿ ಓದಿ, ರಾತ್ರಿ ಕಳೆಯುತ್ತಿದ್ದರಂತೆ. ನಂತರ ಮತ್ತೆ ವೆಲ್ಲೂರಿನ ಕಾಲೇಜಿಗೆ ಹಾಜರಾಗುತ್ತಿದ್ದರು. ಅಷ್ಟೇ ಅಲ್ಲ ಹಣಕ್ಕಾಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದೆ ಎಂದು ಶಿವಗುರು ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪ್ರಭಾಕರನ್ ಅವರ ಅವಿರತ ಶ್ರಮದ ಪರಿಣಾಮ ಐಐಟಿ-ಎಂ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿ, 2014ರಲ್ಲಿ ಎಂ ಟೆಕ್ ಟಾಪ್ Rankನೊಂದಿಗೆ ತೇರ್ಗಡೆಯಾಗಿದ್ದರು. ಐಐಟಿ ಪದವಿ ನಂತರ, ಎಂಟೆಕ್ ಪದವಿ ಪಡೆದ ಮೇಲೆ ಐಎಎಸ್ ಕನಸನ್ನು ನನಸು ಮಾಡುವತ್ತ ಹೆಜ್ಜೆ ಇರಿಸಿದ್ದರು.

UPSC ಪರೀಕ್ಷೆ ಪಾಸ್ ಮಾಡಲು ಹರಸಾಹಸ:

ಯುಪಿಎಸ್ ಸಿ ಪರೀಕ್ಷೆಗಾಗಿ ಸಾಕಷ್ಟು ಸಿದ್ಧತೆ ನಡೆಸಿದ್ದರು ಕೂಡಾ ಶಿವಗುರುವಿಗೆ ಮೊದಲ ಮೂರು ಪ್ರಯತ್ನದಲ್ಲಿ ಪಾಸ್ ಆಗಲು ಸಾಧ್ಯವಾಗಿರಲಿಲ್ಲ. ಆದರೂ ತನ್ನ ಕನಸನ್ನು ಬಿಟ್ಟುಕೊಡದ ಛಲಗಾರ ಶಿವಗುರು ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ತನ್ನ ಗುರಿ ಸಾಧಿಸಿದ್ದರು. ಇಂದು ತಂಜಾವೂರಿನಲ್ಲಿ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಿವಗುರು ಪ್ರಭಾಕರನ್ ಅವರ ಪ್ರೇರಣಾದಾಯಕ ಯಶೋಗಾಥೆ ಎಲ್ಲರಿಗೂ ಸ್ಪೂರ್ತಿಯಾಗಿದೆ.

*ನಾಗೇಂದ್ರ ತ್ರಾಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next