ಅಥಣಿ: ಶಾಶ್ವತ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಮತ್ತು ಬತ್ತಿದ ಕೃಷ್ಣಾ ನದಿಗೆ ನೀರು ಬಿಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ ಕೃಷ್ಣಾ ಹೋರಾಟ ಸಮಿತಿ ಸದಸ್ಯರಿಗೆ ಸಕಾರಾತ್ಮಕವಾಗಿ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ.
ಎರಡು ತಿಂಗಳಿನಿಂದ ಕೃಷ್ಣಾ ನದಿಯಲ್ಲಿ ನೀರು ಇಲ್ಲದೇ ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಇತರ ತಾಲೂಕುಗಳು ಮತ್ತು ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಅನೇಕ ತಾಲೂಕುಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾದ ಪರಿಸ್ಥಿತಿ ಅಥಣಿ ಶಾಸಕ ಮಹೇಶ ಕುಮಠಳ್ಳಿಯವರಿಂದ ತಿಳಿದು ಬಂದಿದೆ. ಕೃಷ್ಣಾ ನದಿ ನೀರಿನ ವಿಷಯವನ್ನು ನಾನು ಕೂಡ ಗಂಭೀರವಾಗಿ ಪರಿಗಣಿಸಿದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇವರೊಂದಿಗೆ ಚರ್ಚಿಸಲು ಸಮಯ ಕೇಳಲಾಗಿದೆ. ಮುಖ್ಯಮಂತ್ರಿಗಳು ಸಮಯ ಕೊಟ್ಟತಕ್ಷಣ ನನ್ನ ನೇತೃತ್ವದಲ್ಲಿ ಅಥಣಿ ಶಾಸಕ ಮಹೇಶ ಕುಮಠಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ಹಾಗೂ ಕೃಷ್ಣಾ ನದಿ ಪಾತ್ರದ ಎಲ್ಲ ಶಾಸಕರನ್ನು ಒಳಗೊಂಡ ನಿಯೋಗದಲ್ಲಿ ಭೇಟಿ ಮಾಡುವ ಕಾರ್ಯಕ್ಕೆ ನಾನು ಆದ್ಯತೆ ನೀಡುತ್ತೇನೆ ಎಂದು ಹೇಳಿದರು.
ನಿಯೋಗದ ನೇತೃತ್ವ ವಹಿಸಿದ್ದ ಅಥಣಿ ಶಾಸಕ ಮಹೇಶ ಕುಮಠಳ್ಳಿ, ಅಥಣಿ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ಅವರಖೋಡ ಗ್ರಾಮದ ಹತ್ತಿರ ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ 25 ಅಡಿ ಎತ್ತರದ ಚಿಕ್ಕ ಡ್ಯಾಮ್(ತಡೆಗೋಡೆ) ಕಾಮಗಾರಿಗೆ ಇಷ್ಟರಲ್ಲಿಯೇ ಮಂಜೂರಾತಿ ದೊರಕಲಿದೆ. ಹಾಗೂ ಮಹಿಷವಾಡಗಿ ಗ್ರಾಮದ ಹತ್ತಿರ ಇರುವ ತಡೆಗೋಡೆ ಎತ್ತರಿಸುವ ಕಾಮಗಾರಿಯ ಮಂಜೂರಾತಿ ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದ ಅವರು, ಇದರಿಂದ ಶೇ.70 ರಷ್ಟು ಬೇಸಿಗೆ ಅವಧಿಯ ನೀರಿನ ಕೊರತೆ ನೀಗಿಸಲು ಸಾಧ್ಯವಾಗುತ್ತದೆ ಎಂದರು.
ಕೃಷ್ಣಾ ನದಿಯಲ್ಲಿ ನೀರು ಬತ್ತಿದ್ದರಿಂದ ಅಥಣಿ ಹಾಗೂ ಕಾಗವಾಡ ತಾಲೂಕುಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ, ಇತ್ತೀಚೆಗೆ ಶೇ.90ಕ್ಕೂ ಹೆಚ್ಚು ಕೊಳವೆ ಬಾವಿಗಳು ಬತ್ತಿದ್ದರಿಂದ ಟ್ಯಾಂಕರ್ ಮೂಲಕವೂ ಕುಡಿಯುವ ನೀರಿನ ಪೂರೈಕೆ ಸಾಧ್ಯವಾಗುತ್ತಿಲ್ಲ, ಹೀಗಾಗಿ ತಕ್ಷಣವೇ ಮಾಹಾರಾಷ್ಟ್ರದ ಮುಖ್ಯಮಂತ್ರಿಯವರ ಸಮಯ ಪಡೆದು ಕೃಷ್ಣಾ ನದಿಗೆ ನೀರು ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯಕುಮಾರ ಅಡಹಳ್ಳಿ ಈ ಭಾಗದ ಅತ್ಯಂತ ಕಷ್ಟದ ಪರಿಸ್ಥಿತಿ ಗಮನಸಿ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ, ಬಿ.ಎಲ್.ಪಾಟೀಲ್ ಉಪಸ್ಥಿತರಿದ್ದರು.
ನಿಯೋಗದಲ್ಲಿ ಕರವೇ ಅಧ್ಯಕ್ಷ ಬಸನಗೌಡ ಪಾಟೀಲ, ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯಕುಮಾರ ಅಡಹಳ್ಳಿ, ರಮೇಶ ಬಾದವಾಡಗಿ, ವೆಂಕಟೇಶ ದೆಶಪಾಂಡೆ, ದೀಪಕ ಶಿಂಧೆ, ಮಂಜು ಹೊಳಿಕಟ್ಟಿ, ರಾಕೇಶ ಮೈಗೂರ, ದೀಪಕ ಕಾಂಬಳೆ, ಪ್ರಕಾಶ ಕಾಂಬಳೆ, ಗುತ್ತಿಗೆ ಪೌರಕಾರ್ಮಿಕ ಸಂಘದ ರವಿ ಕಾಂಬಳೆ, ಶ್ರೀಶೈಲ ಪೂಜಾರಿ, ಭಾರತೀಯ ಕಿಸಾನ ಸಂಘದ ಅಶೋಕ ದಾನಗೌಡರ ಪಾಲ್ಗೊಂಡಿದ್ದರು.