ಮುಂಬಯಿ, ಫೆ. 7: ಮೀರಾರೋಡ್ ಪೂರ್ವದ, ನ್ಯೂ ಪ್ಲೆಸೆಂಟ್ ಪಾರ್ಕ್‌ನ ಮೀರಾ ಧಾಮ್ ಸೊಸೈಟಿಯಲ್ಲಿರುವ ಶ್ರೀ ಶನೀಶ್ವರ ಸೇವಾ ಚಾರಿಟೇಬಲ್ ಟ್ರಸ್ಟ್ ಇದರ ಶ್ರೀ ಶನೀಶ್ವರ ಮಂದಿರದ ನಾಗ ಸನ್ನಿಧಿಯಲ್ಲಿ ಶ್ರೀ ನಾಗ ಪ್ರತಿಷ್ಠಾಪನೆಯ ದ್ವಿತೀಯ ವರ್ಧಂತಿ ಉತ್ಸವವು ಫೆ. 7ರಂದು ವಿಷ್ಣುಮೂರ್ತಿ ಅಡಿಗ ಅವರ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಅದ್ದೂರಿಯಾಗಿ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ತನು ತಂಬಿಲ, ನವಕ ಕಲಶ, ಪಂಚಮೃತ ಅಭಿಷೇಕ, ಸಾಮೂಹಿಕ ಆಶ್ಲೇಷ ಬಲಿ, ತದನಂತರ ನಾರಾಯಣ ಭಟ್ ರೆಂಜಾಳ ಅವರಿಂದ ನಾಗ ದರ್ಶನ ನಡೆಯಿತು. ಶ್ರೀ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿದ ಗೌರವ ಕಾರ್ಯದರ್ಶಿ ಪುರಂದರ ಶ್ರೀಯಾನ್ ಅವರು ಶ್ರೀ ಶನಿದೇವರ ಮತ್ತು ಶ್ರೀ ನಾಗ ದೇವರ ಮೂರ್ತಿ ಪ್ರತಿಷ್ಠಾಪನೆಯಿಂದ ಮೀರಾರೋಡಿನ ಶನಿ ಮಂದಿರವು ತುಳು ಕನ್ನಡಿಗರ, ಕನ್ನಡೇತರ ಭಕ್ತಿ ಸಂಗಮದ ಕ್ಷೇತ್ರವಾಗಿದೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ವೃದ್ಧಿಸುತ್ತಿದೆ. ತನು ತಂಬಿಲ, ನಾಗರ ಪಂಚಮಿಯ ಮೂಲಕ ಪರಿವಾರ ಕುಟುಂಬದವರನ್ನು, ಬಂಧು ಮಿತ್ರರನ್ನು ಒಗ್ಗೊಡಿಸುವ ನಾಗ ದೇವರು ಪ್ರಕೃತಿ ರಕ್ಷಕರಾಗಿದ್ದಾರೆ. ಅವರ ಪ್ರತಿಯೊಂದು ಸೇವೆಗಳು ವೈದಿಕ ತತ್ವದಡಿ ಇಲ್ಲಿ ನಡೆಸಲಾಗುವುದು ಎಂದರು.
ಶ್ರೀ ಶನೀಶ್ವರ ಸೇವಾ ಚಾರಿಟೆಬಲ್ ಟ್ರಸ್ಟ್ ಇದರ ಗೌರವ ಅಧ್ಯಕ್ಷ ವಿನೋದ್ ವಘಾಸಿಯ, ಅಧ್ಯಕ್ಷೆ ವಿದ್ಯಾ ಅಶೋಕ್ ಕರ್ಕೇರ, ಉಪಾಧ್ಯಕ್ಷರಾದ ಸಂಪತ್ ಬಿ. ಶೆಟ್ಟಿ ಮತ್ತು ಗುಣಕಾಂತ್ ಶೆಟ್ಟಿ ಕರ್ಜೆ, ಜತೆ ಕಾರ್ಯದರ್ಶಿಗಳಾದ ಲೋಹಿತಾಕ್ಷ ಕೆ. ಬಂಗೇರ ಮತ್ತು ಸುಜಾತಾ ಜಿ. ಶೆಟ್ಟಿ, ಕೋಶಾಧಿಕಾರಿ ಅಚ್ಯುತ ಟಿ. ಕೋಟ್ಯಾನ್, ಜತೆ ಕೋಶಾಧಿಕಾರಿಗಳಾದ ಜಯಕರ ಎಸ್. ಶೆಟ್ಟಿ ಮತ್ತು ಭಾರತಿ ಎ. ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಲ್ಲಿಕಾ ಕೆ. ಶೆಟ್ಟಿ, ಕಾರ್ಯದರ್ಶಿ ಲೀಲಾ ಡಿ. ಪೂಜಾರಿ, ಮಹಿಳಾ ಸದಸ್ಯೆಯರು, ಪೂಜಾ ಮತ್ತು ಸಾಂಸ್ಕೃತಿ ಉಪ ಸಮಿತಿಯ ಸರ್ವ ಸದಸ್ಯರು, ಪೂಜಾ ಸಮಿತಿ, ಸಲಹೆಗಾರರು , ಮಹಿಳಾ ವಿಭಾಗದ ಸದಸ್ಯೆಯರು ಭಕ್ತಾದಿಗಳನ್ನು ಗೌರವಿಸಿದರು.
ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು. ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ರಾಜಕೀಯ ನೇತಾರರು, ತುಳು – ಕನ್ನಡಿಗರು ಉಪಸ್ಥಿತರಿದ್ದು ಶ್ರೀ ನಾಗ ದೇವರ ಮತ್ತು ಶ್ರೀ ಶನಿ ದೇವರ ದರ್ಶನ ಪಡೆದರು. ಸಹಕರಿಸಿದ ಭಕ್ತಾದಿಗಳಿಗೆ ಕಾರ್ಯದರ್ಶಿ ಪುರಂದರ ಶ್ರೀಯಾನ್ ಕೃತಜ್ಞತೆ ಸಲ್ಲಿಸಿದರು. ಸದಾನಂದ ಪೂಜಾರಿ ಕಾರ್ಕಳ ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರ-ವರದಿ: ರಮೇಶ ಅಮೀನ್