Advertisement

ಮೀರಾರೋಡ್‌ ಪಲಿಮಾರು ಮಠ 6ನೇ ಏಕಾಹ ಭಜನೆ

04:31 PM Jan 30, 2018 | |

ಮುಂಬಯಿ: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಪೀಠದಲ್ಲಿರುವ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಸಂಕಲ್ಪ ಹಾಗೂ ಪ್ರೇರಣೆಯಂತೆ ಶ್ರೀ ಕೃಷ್ಣನ ಗರ್ಭಗುಡಿಗೆ ಸ್ವರ್ಣದ ಹೊದಿಕೆ, ನಿರಂತರ ಅಖಂಡ ಭಜನೆ, ಪ್ರತಿನಿತ್ಯ ಅನ್ನಸಂತರ್ಪಣೆ ಮತ್ತು ಲಕ್ಷ ತುಳಸಿ ಅರ್ಚನೆಯನ್ನು ಆಯೋಜಿಸಲಾಗಿದೆ. ಎರಡು ವರ್ಷ ನಿತ್ಯೋತ್ಸವದಲ್ಲಿರುವ ಉಡುಪಿ ಶ್ರೀ ಕೃಷ್ಣ ಮಠ ತಿರುಪತಿಯ ಕಾಂಚನಾ ಬ್ರಹ್ಮಂ ಪಂಢರಾಪುರದ ನಾದ ಬ್ರಹ್ಮ, ಉಡುಪಿಯ ಅನ್ನಬ್ರಹ್ಮನ ತ್ರಿವೇಣಿ ಸಂಗಮವಾಗಿ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ ಎಂದು ಮೀರಾರೋಡ್‌ ಪಲಿಮಾರು ಮಠದ ಟ್ರಸ್ಟಿ ಹಾಗೂ ಪ್ರಬಂಧಕ ವಿದ್ವಾನ್‌ ರಾಧಾಕೃಷ್ಣ ಭಟ್‌ ನುಡಿದರು.

Advertisement

ಜ. 26ರಂದು ಮೀರಾರೋಡ್‌ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಬಾಲಾಜಿ ಭಜನ ಮಂಡಳಿ ಪಲಿಮಾರು ಮಠ ಇದರ 6 ನೇ ಏಕಾಹ ಭಜನೆ ಮತ್ತು ಮಂಗಳ್ಳೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನಗೈದ ಅವರು, ಶ್ರೀ ಮಧ್ವಾಚಾರ್ಯರ ಸಿದ್ಧಾಂತದಂತೆ ಕಾಯಾ, ವಾಚಾ, ಮನಸಾ ಶುದ್ಧತೆಯೊಂದಿಗೆ ಭಜನೆಯ ಮೂಲಕ ಭಗವಂತನನ್ನು ಆರಾಧಿಸಬೇಕು. ನಾದಬ್ರಹ್ಮನಾದ ಭಗವಂತನನ್ನು ಲಯಬದ್ಧವಾದ ಸಂಗೀತದೊಂದಿಗೆ ಸ್ತುತಿಸಿ ಜೀವನದಲ್ಲಿ ಸಾರ್ಥಕ್ಯವನ್ನು ಕಾಣಬೇಕು ಎಂದರು.

ಯತಿರಾಜ ಉಪಾಧ್ಯಾಯ ಅವರ ನೇತೃತ್ವದಲ್ಲಿ ಜರಗಿದ 24 ತಾಸುಗಳ ಅಖಂಡ ಭಜನೆಯಲ್ಲಿ ನಗರ ಹಾಗೂ ಉಪನಗರಗಳ ಒಟ್ಟು 21 ಭಜನ ತಂಡಗಳು ಭಾಗವಹಿಸಿದ್ದವು. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಎರಡು ವರ್ಷಗಳ ಕಾಲ ಜರಗಲಿರುವ ಅಖಂಡ ಭಜನೆಯಲ್ಲಿ ಪಾಲ್ಗೊಳ್ಳುವವರು ಮೀರಾರೋಡ್‌ ಪಲಿಮಾರು ಮಠವನ್ನು ಸಂಪರ್ಕಿಸಿದರೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಭಜನೆಯಲ್ಲಿ ಭಾಗವಹಿಸಿದ ತಂಡಗಳ ಹೆಸರನ್ನು ಮಂತ್ರಾಲಯ ಮತ್ತು ತಿರುಪತಿಯ ದಾಸ ಸಾಹಿತ್ಯ ಪ್ರಾಜೆಕ್ಟ್‌ನಲ್ಲಿ ನೋಂದಾಯಿಸಲಾಗುವುದು ಎಂದು ಅವರು ಯತಿರಾಜ ಉಪಾಧ್ಯಾಯ ಅವರು ನುಡಿದು ಮಾಹಿತಿ ನೀಡಿದರು.

ಜಯರಾಮ ಭಟ್‌, ವಿಷ್ಣು ಪ್ರಸಾದ್‌ ಭಟ್‌, ವೆಂಕಟರಮಣ ಭಟ್‌, ಕೃಷ್ಣ ಉಡುಪ, ಕರಮಚಂದ್ರ ಗೌಡ, ಮಹಿಳಾ ಸದಸ್ಯೆಯರು, ವಿವಿಧ ಭಜನಾ ಮಂಡಳಿಗಳ ಪ್ರತಿನಿಧಿಗಳು ಸಹಕರಿಸಿದರು.

ಅಹೋರಾತ್ರಿಯ ಅಖಂಡ ಭಜನೆಯಲ್ಲಿ ಲಘು ಉಪಾಹಾರ ಹಾಗೂ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು. 

Advertisement

ಚಿತ್ರ-ವರದಿ:ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next