Advertisement

ಮೀರಾ ಸಾಗರ ಚಿತ್ತಾರ

12:28 PM May 16, 2018 | |

ಮೀರಾ, ವರ್ಣಚಿತ್ರ ಕಲಾವಿದೆ, “ವೃಕ್ಷ’ ಚಿತ್ರಶಾಲೆಯ ಸಂಸ್ಥಾಪಕಿ, ಕಲಾ ಶಿಕ್ಷಕಿ, ಹಾಡುಗಾರ್ತಿ… ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಇಷ್ಟೆಲ್ಲಾ ಸಾಧನೆಗಳು ಬೆನ್ನಿಗಿದ್ದರೂ, “ನನ್ನನ್ನು ಅರುಣ್‌ ಸಾಗರ್‌ ಪತ್ನಿ ಅಂತ ಯಾರಾದರೂ ಗುರುತಿಸಿದರೆ ತುಂಬಾನೇ ಖುಷಿ ಆಗುತ್ತೆ’ ಎನ್ನುತ್ತಾರೆ ಮೀರಾ. ಇಷ್ಟು ಹೇಳಿದ ಮೇಲೆ ಇವರು ಬಹುಮುಖ ಪ್ರತಿಭೆ ಅರುಣ್‌ ಸಾಗರ್‌ರ ಪತ್ನಿ ಎಂದು ವಿಶೇಷವಾಗಿ ಹೇಳಬೇಕಿಲ್ಲ ಅಲ್ಲವೇ? ಮೀರಾ, ಕಾಲೇಜು ದಿನಗಳಲ್ಲೇ ಅರುಣ್‌ರನ್ನು ಪ್ರೀತಿಸಿ ಮದುವೆಯಾದರು. ಇವರ ದಾಂಪತ್ಯಕ್ಕೆ ಈಗ 25ನೇ ವರ್ಷ. ಏನಿಲ್ಲದಿದ್ದರೂ ಬದುಕುತ್ತೇನೆ, ಅರುಣ್‌ ಪ್ರೀತಿ ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಮೀರಾ..

Advertisement

* ಕಲಾವಿದೆ ಮತ್ತು ಕಲಾ ಶಿಕ್ಷಕಿಯಾಗಿ ಬದುಕನ್ನು ನೀವು ಹೇಗೆ ನೋಡುತ್ತೀರಿ?
ಕಲೆ ಮನಸ್ಸಿಗೆ ಬಲ ನೀಡುತ್ತದೆ. ಮಾನಸಿಕವಾಗಿ ನಮ್ಮನ್ನು ಗಟ್ಟಿಗೊಳಿಸುತ್ತದೆ. ನಮಗೆ ತಿಳಿದಿರುವ ವಿದ್ಯೆಯನ್ನು ಮತ್ತೂಬ್ಬರಿಗೆ ಕಲಿಸುವುದರಲ್ಲಿ ಇರುವ ಸಂತೋಷ, ಬೇರೆ ಯಾವುದರಿಂದಲೂ ಸಿಗುವುದಿಲ್ಲ. ಹೆಣ್ಣುಮಕ್ಕಳಿಗೆ ಹೇಳಿಕೊಳ್ಳಲು ತಮ್ಮದೇ ಆದ ಅಸ್ತಿತ್ವವಿದ್ದರೇನೇ ಚೆಂದ. ಆರ್ಥಿಕವಾಗಿ ಸ್ವತಂತ್ರರಾಗಿರುವುದು ಕೂಡ ಅಷ್ಟೇ ಮುಖ್ಯ.

* ಕಲೆಯ ಬಗ್ಗೆ ಆಸಕ್ತಿ ಮೂಡಿದ್ದು ಯಾವಾಗ? 
ಕಲೆ ನನಗೆ ರಕ್ತದಿಂದ ಬಂದ ಬಳುವಳಿ. ನನ್ನ ಮುತ್ತಜ್ಜಿಯಿಂದ ಅಜ್ಜಿಗೆ, ಅಜ್ಜಿಯಿಂದ ಅಮ್ಮನಿಗೆ ಮತ್ತು ಅಮ್ಮನಿಂದ ನನಗೆ ಕಲೆ ವರ್ಗಾವಣೆಯಾಗಿದೆ. ಚಿಕ್ಕವಳಿದ್ದಾಗ ಮನೆಯಲ್ಲಿ ಅಜ್ಜಿ, ಅಮ್ಮ, ಕೊಬ್ಬರಿ ಕೆತ್ತನೆ ಹಾಗೂ ಇತರ ಕಲಾಕೃತಿಗಳನ್ನು ತಯಾರಿಸುತ್ತಿದ್ದರು. ನಾನು ಕೂಡ ಅವರ ಜೊತೆ ಅದೆಲ್ಲವನ್ನೂ ಮಾಡುತ್ತಿದ್ದೆ. 10ನೇ ತರಗತಿ ಮುಗಿದ ಮೇಲೆ ಕಲಾಕ್ಷೇತ್ರದಲ್ಲೇ ಮುಂದುವರಿಯಲು ನಿರ್ಧರಿಸಿ, ಚಿತ್ರಕಲಾ ಪರಿಷತ್‌ನಲ್ಲಿ 5 ವರ್ಷಗಳ ಇಂಟಿಗ್ರೇಟೆಡ್‌ ಡಿಗ್ರಿಗೆ ಸೇರಿದೆ. ಇವತ್ತಿಗೂ ಕಲೆಯೇ ನನ್ನ ಉಸಿರು.

* ಚಿತ್ರಕಲಾ ಶಾಲೆ ನಡೆಸುತ್ತಿದ್ದೀರಿ. ಈ ಯೋಜನೆ ಹೇಗೆ ಆರಂಭವಾಯಿತು? 
ಚಿತ್ರಕಲಾ ಪರಿಷತ್‌ನಲ್ಲಿ ಅಂತಿಮ ವರ್ಷದ ಪದವಿ ಓದುತ್ತಿರುವಾಗಲೇ ಅರುಣ್‌ರನ್ನು ಮದುವೆಯಾದೆ. ಆಗಷ್ಟೇ, ಅರುಣ್‌ ರಂಗಭೂಮಿ ಜೊತೆಜೊತೆಗೆ ಸಿನಿಮಾಗಳಲ್ಲಿ ಕಲಾನಿರ್ದೇಶಕರಾಗಿ ವೃತ್ತಿ ಆರಂಭಿಸಿದ್ದರು. ಅವರಿಗೆ ನಾನೇ ಸ್ಕೆಚ್‌ಗಳನ್ನು ತಯಾರಿಸಿಕೊಡುತ್ತಿದ್ದೆ. ನನಗೆ ಆಗ ಯಾವುದೇ ಮಹತ್ವಾಕಾಂಕ್ಷೆ ಇರಲಿಲ್ಲ. ಮನೆಯಲ್ಲೇ ಇರಬೇಕು. ಗಂಡ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತಷ್ಟೇ ತಲೇಲಿದ್ದದ್ದು. ಆದರೆ, ಅರುಣ್‌ ನನಗೆ ಸುಮ್ಮನೆ ಕೂರಲು ಬಿಡಲಿಲ್ಲ. ಚಿತ್ರಕಲಾ ಶಾಲೆ ಕೂಡ ಅರುಣ್‌ರದ್ದೇ ಯೋಜನೆ. ನಾನು ಉದ್ಯಮಿಯಾಗಲು ಅರುಣ್‌ರೇ ಪ್ರೇರಣೆ.

* ನಿಮ್ಮ ಪ್ರೀತಿ, ಮದುವೆ ಬಗ್ಗೆ ಹೇಳಿ?
ನಾನು ಚಿತ್ರಕಲಾ ಪರಿಷತ್‌ನಲ್ಲಿ ಓದುತ್ತಿರುವಾಗ “ಸಮುದಾಯ’ ನಾಟಕ ತಂಡದ ಜೊತೆ ಮೈಸೂರಿಗೆ ನಾಟಕ ಕಾರ್ಯಾಗಾರಕ್ಕೆ ಹೋಗಿದ್ದೆ. ಅಲ್ಲಿ ಅರುಣ್‌ ನಮ್ಮ ಮಾಸ್ಕ್ ತರಬೇತುದಾರರಾಗಿದ್ದರು. ಎಲ್ಲರನ್ನೂ ಬಹಳ ನಗಿಸುತ್ತಿದ್ದರು. ಇಬ್ಬರೂ ಒಟ್ಟಿಗೆ ತುಂಬಾ ಸಮಯ ಕಳೆದಿದ್ದೆವು. ಬರುವಾಗ ರಂಗಭೂಮಿ ಕುರಿತ ಕ್ಯಾಸೆಟ್‌ ಒಂದನ್ನು ಅವರು ನನಗೆ ಕೊಟ್ಟಿದ್ದರು. ಅವರೂ ಕೂಡ ಕಲಾವಿದರು, ನಮ್ಮಿಬ್ಬರ ಆಸಕ್ತಿಗಳು, ಯೋಚನೆಗಳೂ ಒಂದೇ ರೀತಿ ಇವೆ ಅಂತನ್ನಿಸಿತು. ನಾವು ಪ್ರೀತಿ ಪ್ರೇಮ ಅಂತೆಲ್ಲಾ ಸಮಯ ಕಳೆಯಲೇ ಇಲ್ಲ. ನೇರವಾಗಿ ಮದುವೆಯಾಗುವ ನಿರ್ಧಾರವನ್ನೇ ಮಾಡಿದೆವು.

Advertisement

* ಮದುವೆಯಾಗಿ ಎಷ್ಟು ವರ್ಷ ಆಯಿತು? ಆರಂಭದ ದಿನಗಳಿಗೂ ಈಗಿನ ದಿನಗಳಿಗೂ ಏನಾದರೂ ವ್ಯತ್ಯಾಸ ಆಗಿದೆಯಾ? 
ಮದುವೆಯಾಗಿ 25 ವರ್ಷಗಳಾದವು. ಆಗ ನಮಗೆ ಆರ್ಥಿಕವಾಗಿ ಏನೇನೂ ಅನುಕೂಲಗಳಿರಲಿಲ್ಲ. ಅರುಣ್‌ಗೆ ಸಂಬಳವೂ ಬರ್ತಾ ಇರಲಿಲ್ಲ. ಅವರಿಗೆ ಬರುತ್ತಿದ್ದ ಸ್ಟೈಪೆಂಡ್‌ನ‌ಲ್ಲಿ ಜೀವನ ಮಾಡುತ್ತಿದ್ದೆವು. ಈಗ ಬದಲಾವಣೆ ಆಗಿರುವುದು ನಾವು ಅನುಭವಿಸುತ್ತಿರುವ ಅನುಕೂಲಗಳಲ್ಲಿ ಮಾತ್ರ. ಈಗ ಎಲ್ಲಾ ರೀತಿಯ ಅನುಕೂಲಗಳೂ ಇವೆ. ಮುಂಚೆ ಆಟೋ ಹತ್ತುವುದೇ ದೊಡ್ಡ ಸಂಭ್ರಮವಾಗಿತ್ತು. ಈಗ ಕಾರು ಇದೆ. ಚಿಕ್ಕ ಟಿ.ವಿ ಜಾಗದಲ್ಲಿ ದೊಡ್ಡ ಟಿ.ವಿ ಬಂದಿದೆ. ಆದರೆ ಅದ್ಯಾವುದೂ ದಾಂಪತ್ಯದಲ್ಲಿ ಮುಖ್ಯವಲ್ಲ ಎಂಬ ಅರಿವೂ ನಮಗಿದೆ. ಪ್ರೀತಿ, ಹೊಂದಾಣಿಕೆ, ಖುಷಿ, ಸಂಭ್ರಮ ಎಲ್ಲವೂ ಮದುವೆಯಾದ ಮೊದಲಿನ ದಿನ ಇದ್ದಂತೆಯೇ ಇವೆ.

* ದಾಂಪತ್ಯದ ಆರಂಭದ ದಿನಗಳ ಬಗ್ಗೆ ಹೇಳಿ? 
ನಮ್ಮ ಬಳಿ ಆಟೋದಲ್ಲಿ ಓಡಾಡುವಷ್ಟೂ ಹಣ ಇರುತ್ತಿರಲಿಲ್ಲ. ನಾನು ಆಟೋದಲ್ಲಿ ತಿರುಗಾಡಲು ಆಸೆ ಪಡುತ್ತಿದ್ದೆ. ಆಗೆಲ್ಲ ಮಿನಿಮಮ್‌ ಚಾರ್ಜ್‌ 4 ರೂ. ಇತ್ತು. ನಾವು ಆಟೋದವನಿಗೆ ಎಲ್ಲಿಗೆ ಹೋಗಬೇಕು ಎಂದು ಹೇಳ್ತಾ ಇರಲಿಲ್ಲ. ಈ ದಾರಿಯಲ್ಲಿ ಹೋಗಿ ಅಂತಿದ್ವಿ ಅಷ್ಟೇ. ಮಿನಿಮಮ್‌ ಚಾರ್ಚ್‌ ದಾಟಿ ಮೀಟರ್‌ 4. 5 ರೂ. ತೋರಿಸುತ್ತಿದ್ದಂತೆ ಆಟೋದಿಂದ ಇಳಿದುಬಿಡುತ್ತಿದ್ವಿ. ಅರುಣ್‌ ಜೇಬಲ್ಲಿ 5 ರೂ. ಇದ್ದರೆ; ಪಾನಿಪುರಿ ಬೇಕೋ ಅಥವಾ ಆಟೋ ಬೇಕೊ? ಅಂತ ಕೇಳುತ್ತಿದ್ದರು. ಪಾನಿಪುರಿ ತಿಂದು ಮೈಲಿಗಟ್ಟಲೆ ನಡೆದುಕೊಂಡು ಬರ್ತಾ ಇದ್ವಿ. ಅದೆಷ್ಟು ಮೈಲಿ ನಾವಿಬ್ಬರೂ ಜೊತೆಯಲ್ಲಿ ನಡೆದಿದ್ದೇವೋ ಅಂದಾಜೇ ಇಲ್ಲ. 

* ಬಾಲ್ಯದಲ್ಲಿ ಬಹಳ ಚಟುವಟಿಕೆಯ ಹುಡುಗಿ ಆಗಿದ್ರಿ ಅಂತನಿಸುತ್ತೆ, ಹೌದಾ? 
ಬಾಲ್ಯದಲ್ಲಿ ನಾನು ಬಹುಮುಖ ಪ್ರತಿಭೆ. ಹಾಡು, ನೃತ್ಯ, ನಟನೆ, ಸಂಗೀತ, ರಂಗೋಲಿ, ಚಿತ್ರಕಲೆ ಎಲ್ಲದರಲ್ಲೂ ಸದಾ ಮುಂದೆ. ಹಾಗಾಗಿ ಓದಿನಲ್ಲಿ ಸ್ವಲ್ಪ ಹಿಂದೆ ಬಿದ್ದೆ. ಎಲ್ಲಾ ಮಕ್ಕಳ ಬೌದ್ಧಿಕ ಸಾಮರ್ಥ್ಯ ಒಂದೇ ರೀತಿ ಇರೋದಿಲ್ಲ. ಜಾಸ್ತಿ ಅಂಕ ತೆಗೆಯದ ಮಕ್ಕಳ ಎದುರು ನೀವು ನೆಗೆಟಿವ್‌ ಆಗಿ ಮಾತಾಡಿದಷ್ಟೂ ಅವರು ಓದಿನಲ್ಲಿ ಮತ್ತಷ್ಟು ಆಸಕ್ತಿ ಕಳೆದುಕೊಳ್ಳುತ್ತಾರೆ. ನನ್ನ ವಿಷಯದಲ್ಲೂ ಹಾಗೇ ಆಗುತ್ತಿತ್ತು. “ನಿನಗೆ ಬೇರೇದೆಲ್ಲಾ ಮಾಡಕ್ಕೆ ಆಗತ್ತೆ, ಓದಕ್ಕೆ ಮಾತ್ರ ಆಗಲ್ಲ, “ಓದುವುದರಲ್ಲಿ ಹಿಂದೆ ಬಿದ್ರೆ ಯಾರೂ ಮರ್ಯಾದೆ ಕೊಡಲ್ಲ’.. ಅಂತೆಲ್ಲಾ ಹೇಳ್ಳೋರು. ಅಂಥದ್ದನ್ನೆಲ್ಲ ಕೇಳಿ ಕೇಳಿ ಬಹುಶಃ ಓದಿ ಸಾಧನೆ ಮಾಡಲು ನನ್ನಿಂದ ಸಾಧ್ಯವಿಲ್ಲವೇನೊ ಎನಿಸಿ, ಚಿತ್ರಕಲೆಯನ್ನೇ ಮುಂದುವರಿಸಿದೆ.  

* ನೀವೂ ಕೂಡ ಈಗ ಶಿಕ್ಷಕರು. ನಿಮ್ಮ ತರಬೇತಿ ಕ್ರಮ ಹೇಗಿರುತ್ತದೆ?
ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ತರಬೇತಿ ನೀಡುತ್ತೇನೆ. 3-4 ವರ್ಷದ ಮಕ್ಕಳ ಗುಂಪಲ್ಲೇ ಬೇರೆ ಬೇರೆ ಮೈಂಡ್‌ಸೆಟ್‌ನ ಮಕ್ಕಳಿರುತ್ತಾರೆ. ಒಂದು ಮಗು ತುಂಬ ಶ್ರದ್ಧೆಯಿಂದ ಕಲಿತರೆ, ಮತ್ತೂಂದು ತುಂಬಾ ಕಿತಾಪತಿ ಮಾಡುತ್ತಿರುತ್ತದೆ. ಆ ಮಗುವಿಗೆ, ಕಲಿಕೆ ಕೂಡಾ ನಿನ್ನ ಕಿತಾಪತಿಗಳೆಲ್ಲದರ ಮುಂದುವರಿದ ಭಾಗ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಅದಕ್ಕೆ ಅದರದ್ದೇ ರೀತಿಯಲ್ಲಿ ನಾವೂ ಕಿತಾಪತಿ ಮಾಡುತ್ತಲೇ ತರಬೇತಿ ನೀಡಬೇಕು. ನೆಗೆಟಿವ್‌ ಆಗಿ ಏನನ್ನೂ ಹೇಳಬಾರದು. ಒಂದು ಹೆಣ್ಣು ಮಗು ಕನ್ನಡಿ ಮುಂದೆ ನಿಂತು ಅಲಂಕಾರ ಮಾಡಿಕೊಂಡು, ತನ್ನನ್ನು ತಾನೇ ನೋಡಿ ಖುಷಿಪಟ್ಟರೆ ಆ ಮಗುವಿನ ಆತ್ಮವಿಶ್ವಾಸ ವೃದ್ಧಿಸುತ್ತದೆ. “ಕನ್ನಡಿ ಮುಂದೆ ನಿಂತು ಬಿಟ್ಯಾ? ನೀನಿನ್ನು ಉದ್ಧಾರ ಆಗಲ್ಲ’ ಅಂದ್ರೆ ಆ ಮಗುವಿನ ಆತ್ಮವಿಶ್ವಾಸ ಕುಗ್ಗಿಸಿದಂತೆ. 

* ಮಗಳು ಹಿನ್ನೆಲೆ ಗಾಯಕಿಯಾಗಿ ರ್‍ಯಾಂಬೊ-2 ಚಿತ್ರದಿಂದ ಪರಿಚಿತಳಾಗಿದ್ದಾಳೆ. ಮಗನ ಆಸಕ್ತಿ ಯಾವ ಕ್ಷೇತ್ರದಲ್ಲಿದೆ?
ಮಗಳು ಅದಿತಿ ಈಗ 10ನೇ ತರಗತಿಯಲ್ಲಿದ್ದಾಳೆ. ಅವಳಿಗಿಂತ ಅವರಪ್ಪನಿಗೇ ಆಕೆಯನ್ನು ಗಾಯಕಿ ಮಾಡಬೇಕೆಂಬ ಮಹದಾಸೆ. ಅವಳು ಪುಟ್ಟ ಹುಡುಗಿಯಿದ್ದಾಗ ಅದಿತಿಗೆ ಹಾಡಲು ಹೇಳಿ ಇವರು ಡ್ರಂ ಬಾರಿಸುತ್ತಾ ಕೂರುತ್ತಿದ್ದರು. “ನಿನಗೆ ಓದಲು ಇಷ್ಟ ಇಲ್ಲದಿದ್ರೂ ಪರವಾಗಿಲ್ಲ. ಸಂಗೀತದ ಕಡೆ ಸಂಪೂರ್ಣ ಗಮನ ನೀಡು’ ಅಂತ ಹೇಳ್ತಾ ಇರ್ತಾರೆ. ಅವಳು ನಾಟಕಗಳಲ್ಲೂ ಅಭಿನಯಿಸುತ್ತಾಳೆ. ಅಪ್ಪನ ರಂಗಭೂಮಿ ನಂಟನ್ನು ಮುಂದುವರಿಸುವ ಲಕ್ಷಣ ಅವಳಲ್ಲಿ ಕಾಣಿಸುತ್ತಿದೆ. ಮಗ ಸೂರ್ಯನಿಗೆ ಪ್ರಾಣಿ ಪಕ್ಷಿಗಳೆಂದರೆ ಪ್ರಾಣ. ಈಗ ಆತನ ಗಮನ ಮಾರ್ಷಲ್‌ ಆರ್ಟ್ಸ್ ಕಡೆ ಹೊರಳಿದೆ. ಅದರ ಬಗ್ಗೆ ಗಮನ ಹರಿಸಿದ್ದಾನೆ. ಈ ವರ್ಷದ ಕಡೆಯಲ್ಲಿ ಹೆಚ್ಚಿನ ಕಲಿಕೆಗೆ ಬ್ಯಾಂಕಾಕ್‌ಗೆ ತೆರಳುತ್ತಿದ್ದಾನೆ. ನಾವು ಮೂವರೂ ಏನೇ ಮಾಡುತ್ತಿದ್ದರೂ ಅದಕ್ಕೆಲ್ಲ ಪ್ರೇರಕ ಶಕ್ತಿ ಅರುಣ್‌.

* ಟೀನೇಜ್‌ ಮಕ್ಕಳ ಮತ್ತು ಪೋಷಕರ ಮಧ್ಯೆ ವಾದ, ವಾಗ್ವಾದ ನಡೆಯುವುದು ಸಾಮಾನ್ಯ. ನಿಮ್ಮ ಮನೆಯಲ್ಲಿ ಹೇಗೆ?
ನಮ್ಮ ಮನೆಯಲ್ಲಿ ಅಂಥದ್ದೇನೂ ನಡೆಯುವುದಿಲ್ಲ. ಮಕ್ಕಳಿಬ್ಬರೂ ತುಂಬಾ ಪ್ರಬುದ್ಧರು. ನನ್ನ ಮತ್ತು ಮಗಳ ಮಧ್ಯೆ ಒಳ್ಳೆಯ ಹೊಂದಾಣಿಕೆ ಇದೆ. ಅವಳಿಗೆ ಸಿನಿಮಾ ನೋಡುವ ಆಸಕ್ತಿ ಜಾಸ್ತಿ. ಅವಳ ಜೊತೆ ನಾನೂ ಹೋಗುತ್ತೇನೆ. ಅವಳು ಈಜಲು ಹೋಗುತ್ತಾಳೆ, ನಾನೂ ಅವಳ ಜೊತೆ ಹೋಗಿ ಈಜುತ್ತೇನೆ. ನಾಟಕ ಪ್ರದರ್ಶನಗಳಿಗೂ ಒಟ್ಟಿಗೇ ಹೋಗುತ್ತೇವೆ. ಮಗ ತುಂಬಾ ಸ್ವತಂತ್ರ ವ್ಯಕ್ತಿತ್ವದವನು. ಅವನು ಯಾವ ವಿಷಯಕ್ಕೂ ವಾದಕ್ಕೆ ಇಳಿಯುವುದಿಲ್ಲ.

* ಈಗಲೂ ವರ್ಣಚಿತ್ರ ರಚನೆ ಮಾಡುತ್ತೀರಾ?
ಮೊದಲೆಲ್ಲಾ ಪೋಟ್ರೇಟ್‌ ಕಲಾಕೃತಿಗೆ ಹೆಚ್ಚಿನ ಬೇಡಿಕೆ ಇತ್ತು. ಈಗ ಕಂಪ್ಯೂಟರ್‌ ತಂತ್ರಜ್ಞಾನದಿಂದ ಪೋಟ್ರೇìಟ್‌ ಕಲಾಕೃತಿಗಳು ಕಡಿಮೆ ದರಕ್ಕೇ ದೊರಕುತ್ತವೆ. ಜನರು 4-5 ಲಕ್ಷ ಕೊಟ್ಟು ಕಲಾವಿದರಿಂದ ಕಲಾಕೃತಿ ಖರೀದಿಸುವುದಿಲ್ಲ. ಹಾಗಾಗಿ ಪೋಟ್ರೇìಟ್‌ ರಚಿಸುವುದನ್ನು ಕಡಿಮೆ ಮಾಡಿದ್ದೇನೆ. ಇತ್ತೀಚೆಗೆ ಹಂಸಲೇಖ ಅವರು ಅವರ ತಂದೆಯ ಪೋಟ್ರೇìಟ್‌ ರಚಿಸಿಕೊಡಲು ಕೇಳಿದ್ದರು. ಅವರು ವಿವರಿಸಿದ್ದ ರೀತಿಯೇ ರಚಿಸಿಕೊಟ್ಟೆ. ತುಂಬಾ ಸಂತೋಷ ಪಟ್ಟರು. ಎಸ್‌.ಆರ್‌. ಬೊಮ್ಮಾಯಿಯವರ ಜೀವನ ಚರಿತ್ರೆಯನ್ನೂ ರಚಿಸಿಕೊಟ್ಟಿದ್ದೇನೆ. 

* ಊಟ ಬಡಿಸೋದ್ರಲ್ಲಿ ತುಂಬಾ ಖುಷಿ ಇದೆ…
ಅಡುಗೆ ಮಾಡುವುದೆಂದರೆ ಒಂಥರಾ ಒತ್ತಡ ನಿವಾರಕ ಇದ್ದ ಹಾಗೆ. ಮಧ್ಯರಾತ್ರಿ ಏಳಿಸಿ ಅಡುಗೆ ಮಾಡು ಎಂದರೂ ಖುಷಿಯಿಂದ ಮಾಡುತ್ತೇನೆ. ಜೊತೆಗೆ ಮನೆಗೆ ಅತಿಥಿಗಳನ್ನು ಕರೆದು, ಅವರಿಗಾಗಿ ವಿಶೇಷ ಅಡುಗೆ ಮಾಡೋದಂದ್ರೆ ಎಲ್ಲಿಲ್ಲದ ಖುಷಿ ನನಗೆ. ನಾವು ಮಾಡಿದ ಅಡುಗೆಯನ್ನು ಬೇರೆಯವರು ಆಸ್ವಾದಿಸುವುದನ್ನು ನೋಡುವಾಗ ಒಂದು ರೀತಿಯ ತೃಪ್ತಿ ಸಿಗುತ್ತದೆ. ಅರುಣ್‌ ಯಾರನ್ನಾದರೂ  ದಿಢೀರ್‌ ಅಂತ ಮನೆಗೆ ಕರಕೊಂಡು ಬರಿ¤ರುತ್ತಾರೆ. ರಾತ್ರಿ ಮೂರು ಗಂಟೆಗೆ ಎದ್ದು ಅಡುಗೆ ಮಾಡಿದ್ದೂ ಇದೆ.

* ಪ್ರೀತಿ, ಪ್ರೇಮ ಇಲ್ಲ, ಡೈರೆಕ್ಟ್ ಮದುವೇನೇ!
* ಆಟೋದಲ್ಲಿ ಓಡಾಡೋಕೂ ದುಡ್ಡಿರಲಿಲ್ಲ! 
* ಪಾನಿಪುರಿ ಬೇಕೋ, ಆಟೋ ಬೇಕೋ?
* ಅರುಣ್‌ ನನ್ನ ಸ್ಟ್ರೆಂತ್‌
* ರಾತ್ರಿ ಮೂರಕ್ಕೆ ಎದ್ದೂ ಅಡುಗೆ ಮಾಡಿದ್ದೀನಿ…

* ಚೇತನ ಜೆ.ಕೆ. 

Advertisement

Udayavani is now on Telegram. Click here to join our channel and stay updated with the latest news.

Next