ಥಾಣೆ: ಯಕ್ಷ ಪ್ರಿಯ ಬಳಗ ಮೀರಾ ಭಾಯಂದರ್ ಇದರ 3ನೇ ವಾರ್ಷಿಕೋತ್ಸವದ ಅಂಗವಾಗಿ ಸಮ್ಮಾನ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಎ. 17ರಂದು ನಲಸೋಪಾರ ಪಶ್ಚಿಮದ ಗ್ಯಾಲಕ್ಸಿ ಹೊಟೇಲಿನ ಸಭಾಗೃಹದಲ್ಲಿ ಜರಗಿತು.
ಸಮಾರಂಭದಲ್ಲಿ ಬಂಟರ ಸಂಘದ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕ ಶಶಿಧರ್ ಕೆ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮೀರಾರೋಡ್ ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ಸುಂದರ ಪೂಜಾರಿ, ಮೀರಾ ಭಾಯಂದರ್ ಬಿಜೆಪಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲೀಲಾ ದೇವರಾಜ್ ಪೂಜಾರಿ ಅವರನ್ನು ಶಾಲು ಹೊದಿಸಿ, ಪೇಟಾ ತೊಡಿಸಿ ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಣಿಕಂಠ ಸೇವಾ ಸಮಿತಿ ವಸಾಯಿ ಇದರ ಗೌರವ ಅಧ್ಯಕ್ಷ ಕರ್ನೂರು ಶಂಕರ ಆಳ್ವ ಮಾತನಾಡಿ, ಕಾಲ ಮಿತಿಯೊಳಗೆ ಯಕ್ಷಗಾನ ಬದಲಾವಣೆಗೊಂಡರೂ ಮೂಲ ಪರಂಪರಗೆ ಧಕ್ಕೆಯಾಗಿಲ್ಲ. ಯಕ್ಷಗಾನದಲ್ಲಿ ತುಳು ಸಂಸ್ಕೃತಿ ಅಡಕವಾಗಿದೆ. ಯುವ ಪೀಳಿಗೆ ಯಕ್ಷಗಾನದಲ್ಲಿ ತರಬೇತಿ ಹೊಂದುತ್ತಿರುವುದು ಆಶಾದಾಯಕ ಬೆಳವಣಿಗೆ ಆಗಿದೆ ಎಂದು ಹೇಳುತ್ತ ಸಮ್ಮಾನಿತರಿಗೆ ಶುಭ ಹಾರೈಸಿದರು.
ಯಕ್ಷ ಪ್ರಿಯ ಬಳಗದ ರೂವಾರಿ, ನೃತ್ಯಗುರು ನಾಗೇಶ್ ಪೊಳಲಿ ಅವರಿಗೆ ಬಳಗದ ಕಲಾವಿದರು ಗುರುವಂದನೆಯೊಂದಿಗೆ ಗೌರವಿಸಿದರು.
ವೇದಿಕೆಯಲ್ಲಿ ವಸಾಯಿ ಹೊಟೇಲ್ ಅಸೋಸಿಯೇಶನ್‌ನ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ತುಳುಕೂಟ ನಲಸೋಪಾರದ ಉಪಕಾರ್ಯಾಧ್ಯಕ್ಷ ಗಣೇಶ್ ಸುವರ್ಣ, ನಲಸೋಪಾರ ಶ್ರೀದೇವಿ ಯಕ್ಷನಿಲಯದ ಗೌರವ ಅಧ್ಯಕ್ಷ ಶ್ರೀನಿವಾಸ ನಾಯ್ಡು, ಧರ್ಮಸೇವಕ ಚಂದ್ರಶೇಖರ ಎಸ್. ಶೆಟ್ಟಿ, ಉದ್ಯಮಿ ಮೋಹನ್ ಬಿ. ಶೆಟ್ಟಿ, ಬಂಟ್ಸ್ ಸಂಘ ವಸಾಯಿ ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು, ಬಿಲ್ಲವರ ಅಸೋಸಿಯೇಶನ್ ಮೀರಾರೋಡ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಎನ್. ಪಿ. ಕೋಟ್ಯಾನ್, ಮೀರಾ ಡಹಾಣು ಬಂಟ್ಸ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಭಾ ಎಸ್. ಶೆಟ್ಟಿ, ರಂಗ ಕಲಾವಿದ ಸುರೇಶ್ ಶೆಟ್ಟಿ ಇರ್ವತ್ತೂರು ಉಪಸ್ಥಿತರಿದ್ದರು. ರಂಗನಟ ಜಿ. ಕೆ. ಕೆಂಚನಕೆರೆ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಗೇಶ್ ಪೊಳಲಿ ಅವರ ನಿರ್ದೇಶನದಲ್ಲಿ ಕೃಷ್ಣ ಲೀಲೆ-ಕಂಸವಧೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಚಿತ್ರ,ವರದಿ: ರಮೇಶ ಅಮೀನ್