Advertisement

ರೈಲು ಬೋಗಿಯಾಗಿ ಬದಲಾದ ಮೀನಾಡಿ ಶಾಲೆ

09:20 PM Oct 12, 2020 | mahesh |

ಕಲ್ಲುಗುಡ್ಡೆ: ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಪ್ರಯತ್ನಗಳು ನಡೆಯುತ್ತಲೇ ಇವೆ. ಇಲ್ಲೊಂದು ಗ್ರಾಮೀಣ ಭಾಗದ ಸರಕಾರಿ ಶಾಲೆಯ ಗೋಡೆಗೆ ರೈಲು ಬೋಗಿಯ ಮಾದರಿಯ ಬಣ್ಣ ಬಳಿದು ಆಕರ್ಷಕ ರೀತಿಯಲ್ಲಿ ಶಾಲೆಯನ್ನು ಬದಲಾಯಿಸಲಾಗಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಮೀನಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಭಾರತೀಯ ರೈಲು ಬೋಗಿಯಾಗಿ ಬದಲಾಗಿದೆ.

Advertisement

ವಜ್ರಮಹೋತ್ಸವ ಸಿದ್ಧತೆ
1ರಿಂದ 5ನೇ ತರಗತಿ ಇರುವ ಮೀನಾಡಿ ಶಾಲೆ 3.89ಎಕ್ರೆ ಹೊಂದಿದ್ದು, 1960-61ರಲ್ಲಿ ಸ್ಥಾಪನೆಗೊಂಡು, 2010 ರಲ್ಲಿ ಸುವರ್ಣ ಸಂಭ್ರಮವನ್ನು ಆಚರಿಸಿತ್ತು. ಇದೀಗ 60 ವರ್ಷ ಪೊರೈಸಿರುವ ಈ ಶಾಲೆಯು ವಜ್ರಮಹೋತ್ಸವ ಸಂಭ್ರಮ ಸಿದ್ಧತೆಯಲ್ಲಿದೆ.

ಅಂದುಕೊಂಡಂತೆ ನಡೆಯುತ್ತಿದ್ದರೆ ಈಗಾಗಲೇ ಕಾರ್ಯ ಕ್ರಮ ನಡೆಯ ಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಕಾರ್ಯಕ್ರಮ ಮುಂದೂ ಡಲ್ಪಟ್ಟಿದ್ದು, ಶಿಕ್ಷಣ ಇಲಾಖೆ ಅನುಮತಿ ನೀಡಿದ ತತ್‌ಕ್ಷಣ ಸುವರ್ಣ ಮಹೋತ್ಸವ ನಡೆಸಲಾಗುವುದು ಎನ್ನುತ್ತಾರೆ ಮುಖ್ಯಶಿಕ್ಷಕ ಗೋವಿಂದ ನಾಯಕ್‌.

ಮೀನಾಡಿ ಎಕ್ಸ್‌ಪ್ರೆಸ್‌
ಗಮನ ಸೆಳೆಯುವ ಉದ್ದೇಶದಿಂದ ಶಾಲಾ ಗೋಡೆಗೆ ಭಾರತೀಯ ರೈಲು ಬೋಗಿಯ ಮಾದರಿ ಬಣ್ಣ ಬಳಿಯ ಲಾಗಿದೆ. ಅದಕ್ಕೆ “ಮೀನಾಡಿ ಎಕ್ಸ್‌ಪ್ರೆಸ್‌’ ಎಂದು ಹೆಸರಿಡಲಾಗಿದ್ದು, ಎಂಜಿನ್‌ನಲ್ಲಿ ಎಜುಕೇಶನ್‌ ಎಕ್ಸ್‌ಪ್ರೆಸ್‌ ಎಂದು ಬರೆಯಲಾಗಿದೆ. ಜತೆಗೆ ಒಂದೊಂದು ಬೋಗಿಗೆ ತರಗತಿಯ ಸಂಖ್ಯೆ ಹಾಕಲಾಗಿದೆ. ಶಾಲೆಯ ಡಿಐಎಸ್‌ಇ ಕೋಡ್‌ನ್ನು ಕೂಡ ಬರೆಯಲಾಗಿದೆ. ಒಂದು ಬದಿಯಿಂದ ರೈಲು ಎಂಜಿನ್‌ ಪ್ರಾರಂಭಗೊಂಡು, ಬೋಗಿಗಳು, ಕಿಟಕಿಗಳು ಸೇರಿದಂತೆ ರೈಲು ಬೋಗಿಯ ಮಾದರಿಯಲ್ಲಿಯೇ ಚಿತ್ರ ಬರೆದು ಬಣ್ಣ ಬಳಿಯಲಾಗಿದ್ದು, ಇದೀಗ ಶಾಲೆಯು ರೈಲು ಬೋಗಿಯಂತೆ ಕಂಗೊಳಿಸುತ್ತಿದೆ.

ಕಡಬದ ಲಕ್ಷ್ಮೀ ಆರ್ಟ್ಸ್ನ ಲಕ್ಷ್ಮೀಶ ಹಾಗೂ ಮಾಧವ ಎಂಬವರ ಕೈಚಳಕದಿಂದ ಮೀನಾಡಿ ಎಕ್ಸ್‌ಪ್ರೆಸ್ಸ್ ಮೂಡಿ ಬಂದಿದೆ.
ಈಗಾಗಲೇ ಮೀನಾಡಿ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆದಿದ್ದು, ಶಾಲೆಯು ಉತ್ತಮ ಕಲಿಕಾ ಕೊಠಡಿ, ಶೌಚಾಲಯ, ಅಕ್ಷರ ದಾಸೋಹ ಕಟ್ಟಡ ಹೊಂದಿದೆ. ಶಾಲಾ ಅಂಗಲಕ್ಕೆ ಇಂಟರ್‌ಲಾಕ್‌ ಅಳವಡಿಕೆ, ಉದ್ಯಾನವನ ರಚನೆ, ಕಂಪ್ಯೂಟರ್‌ ಅಳವಡಿಕೆ, ಸ್ಮಾರ್ಟ್‌ ಕ್ಲಾಸ್‌ ಯೋಜನೆಗಳ ಅನುಷ್ಠಾನ ಆಗಬೇಕಾಗಿದೆ ಎಂದು ಗೋವಿಂದ ನಾಯಕ್‌ ಅವರು ಹೇಳಿದ್ದಾರೆ.

Advertisement

ಕೇರಳ ಶಾಲೆಯ ಮಾದರಿ
ಶಾಲೆಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಕೇರಳ ಶಾಲೆಯೊಂದಕ್ಕೆ ರೈಲು ಬೋಗಿ ಮಾದರಿ ಪೈಂಟ್‌ ಬಳಿದ ಬಗ್ಗೆ ಫೇಸ್‌ಬುಕ್‌ನಿಂದ ತಿಳಿದು, ನಮ್ಮ ಶಾಲೆಗೂ ಅದೇ ಮಾದರಿಯ ಯೋಜನೆ ರೂಪಿಸಿ, ಮಕ್ಕಳನ್ನು ಸೆಳೆಯುವ ಪ್ರಯತ್ನ ನಡೆಸಲಾಗಿದೆ.
-ಗೋವಿಂದ ನಾಯಕ್‌, ಮುಖ್ಯ ಶಿಕ್ಷಕರು  ಮೀನಾಡಿ ಸ.ಕಿ. ಪ್ರಾ.ಶಾಲೆ

ಗಮನ ಸೆಳೆಯುವ ಉದ್ದೇಶ
ಮೀನಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಈ ಭಾಗದ ಗ್ರಾಮಸ್ಥರು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲಿ ಎಂಬ ಉದ್ದೇಶದಿಂದ ಈಗಾಗಲೇ ಶಾಲೆಗೆ ಆಕರ್ಷಕ ರೈಲು ಬೋಗಿ ಮಾದರಿ ಬಣ್ಣ ಬಳಿಯಲಾಗಿದೆ.
– ಪುತ್ತುಕುಂಞಿ,  ಎಸ್‌ಡಿಎಂಸಿ ಅಧ್ಯಕ್ಷರು ಮೀನಾಡಿ ಸ.ಕಿ.ಪ್ರಾ. ಶಾಲೆ

ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next