Advertisement
ಶ್ರೀ ರಾಮಚಂದ್ರನಿಗೆ ಅವರ ಗುರು ವಸಿಷ್ಠರು ತಮ್ಮ ಯೋಗವಾಸಿಷ್ಠದ ಮೂಲಕ ಹೇಳಿದ್ದು ಆದಿಜ ವ್ಯಾಧಿಯೆಂದೇ. ಆದಿ ಎಂದರೆ ಮನಸ್ಸು ಎಂಬ ಅರ್ಥ. ವ್ಯಾಧಿಗಳಲ್ಲಿ ಎರಡು. ಅನಾದಿಜ ಹಾಗೂ ಆದಿಜ. ಅನಾದಿಜ ಎಂದರೆ ಸಾಂದರ್ಭಿಕವಾಗಿ ಬರುವ ವ್ಯಾಧಿ (ನೆಗಡಿಯಿಂದ ಹಿಡಿದು ಇಂದಿನ ಕೊರೊನಾ). ಆದಿಜ ಎಂದರೆ ಮನಸ್ಸಿನಲ್ಲಿ ಉಂಟಾಗುವ ವ್ಯತ್ಯಯ, ವೈಪರೀತ್ಯದಿಂದ ಉಂಟಾಗುವ ವ್ಯಾಧಿಗಳು. ಹಾಗೆಂದರೆ ನಮ್ಮ ಮನಸ್ಸಿನ ಮೇಲೆ ಬೀಳುವ ಅಧಿಕ ಒತ್ತಡದ ಪರಿಣಾಮವನ್ನು ನಮ್ಮ ಪ್ರಾಣ (ಪ್ರಾಣಶಕ್ತಿ) ಅನುಭವಿಸುತ್ತದೆ. ಹಾಗಾಗಿಯೇ ಉದ್ವೇಗ, ಕೋಪ ಇತ್ಯಾದಿ ಒತ್ತಡ ಹೆಚ್ಚಾಗಿ ಸಂಧಿವಾತ, ಮಧುಮೇಹ, ಅಲ್ಸರ್, ಆಸ್ತಮಾ, ಬಿಪಿ, ಚರ್ಮ ಅಲರ್ಜಿ, ಮೈಗ್ರೇನ್‌ನಂಥ ಹಲವು ರೋಗ ಸ್ಥಿತಿಗಳು ಉದ್ಭವಿಸುತ್ತವೆ. ಇವೆಲ್ಲವೂ ಕೇವಲ ದೈಹಿಕ ಕಾಯಿಲೆಗಳಲ್ಲ ; ಬದಲಾಗಿ ಮನೋದೈಹಿಕ ಸಮಸ್ಯೆಗಳು.
Related Articles
Advertisement
ಇದರ ಒಟ್ಟು ಸಾರವೆಂದರೆ ನಮ್ಮ ಮನಸ್ಸನ್ನು ಸದಾ ಕ್ರಿಯಾಶೀಲವಾಗಿರಿಸಬೇಕು. ಅದಕ್ಕೆ ಕೆಲಸ ಕೊಡದಿದ್ದರೆ ಭೂತದಂತೆಯೇ ನಮ್ಮನ್ನೇ ತಿನ್ನುತ್ತದೆ. ಮನಸ್ಸೂ ಸಹ ಮಹಾಶಕ್ತಿಶಾಲಿ ಹಾಗೂ ಸಾಮರ್ಥ್ಯವಿರುವ ಭೂತ. ಅದಕ್ಕೆಂದೇ ಈ ಆಂಗ್ಲ ನಾಣ್ನುಡಿ “ಎ ಐಡಲ್ ಮೈಂಡ್ ಈಸ್ ಡೆವಿಲ್ಸ್ ವರ್ಕ್‌ಶಾಪ್’.
ಮನಸ್ಸನ್ನು ಒಳ್ಳೆಯ ಕಾರ್ಯದಲ್ಲಿ, ರಚನಾತ್ಮಕ ಚಟು ವಟಿಕೆಯಲ್ಲಿ ತೊಡಗಿಸಲಿಕ್ಕೆ ಸಹಕರಿಸುವುದೇ ಧ್ಯಾನ. ಕೋಪ ನಿಗ್ರಹ, ಒತ್ತಡ ನಿವಾರಣೆಗಿಂತಲೂ ಹೆಚ್ಚಾಗಿ ಮನೋದೈಹಿಕ ಸಮತೋಲನಕ್ಕೆ ಧ್ಯಾನ ಬೇಕು.
ನಮ್ಮ ಮನಸ್ಸು ಬಲಗೊಂಡಷ್ಟೂ ಋಣಾತ್ಮಕ ಭಾವ ಗಳನ್ನು ಪ್ರತಿರೋಧಿಸುತ್ತದೆ. ಆಗ ಮನಸ್ಸು ಸಂತುಲಿತ; ಶಕ್ತಿಪೂರ್ಣ. ಮನಸ್ಸು ಧನಾತ್ಮಕ ಚಟುವಟಕೆಯಲ್ಲಿ ಭಾಗಿಯಾದಷ್ಟು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಧ್ಯಾನ ಮಾಡುವಾಗ ನಮ್ಮನ್ನು ಆವರಿಸಿಕೊಳ್ಳುವ ಪೂರ್ವ ಭಾವನಾತ್ಮಕ ಸಂಸ್ಕಾರ ಸಂಗ್ರಹಗಳಿಗೆ (ಹಳೆಯ ಸಂಗತಿ, ನೆನಪು ಇತ್ಯಾದಿ ಧನಾತ್ಮಕ, ಋಣಾತ್ಮಕ ಭಾವನೆ ಗಳು) ನಮ್ಮನ್ನು ಪುನರ್ ಸಂಯೋಜಿಸಿಕೊಳ್ಳದೆ ನಿರ್ಭಾವುಕ ಸ್ಥಿತಿಯಲ್ಲಿ ಅದನ್ನು ಮೀರಿದರೆ ಸಿಗುವುದೆ ಆನಂದ. ಅದೇ ನಮ್ಮ ಶಾರೀರಕ ಆರೋಗ್ಯದ ಬುನಾದಿ. ಮನಸ್ಸು ಸ್ವಸ್ಥವಾಗಿದ್ದರೆ ದೇಹವೂ ಸದೃಢ.ಯೋಗವೆಂಬುದೇ ರೋಗ ನಿರೋಧಕ ಶಕ್ತಿಯ ಬುನಾದಿ. ಧ್ಯಾನವೆಂಬುದು ಅದರ ಬುನಾದಿ. – ಡಾ| ಕೆ. ರಾಘವೇಂದ್ರ ಪೈ, ಮೈಸೂರು, ಯೋಗ ಗುರು