Advertisement
ಬದುಕು ಪ್ರತಿಯೊಬ್ಬರ ಹಕ್ಕು. ತನ್ನ ಜೀವನದ ದಿಕ್ಕುದಿಶೆಗಳನ್ನು ನಿರ್ಧರಿಸಿಕೊಳ್ಳಬೇಕಾಗಿರುವುದು ತನಗೆ ದೈವದತ್ತವಾಗಿ, ನಿಸರ್ಗದತ್ತವಾಗಿ ಬಂದಿರುವ ಅಧಿಕಾರ. ಹಾಗೊಂದು ಧೀಮಂತ ಬದುಕನ್ನು ಕಟ್ಟಿಕೊಂಡು, ಅಲ್ಲಿ ನಿಮ್ಮನ್ನು ನೀವು ಆಳಿಕೊಳ್ಳಿ ಎನ್ನುವುದು ವಿಶ್ವಕಂಡ ಮಹಾನ್ ಸಂತ ಸ್ವಾಮಿ ವಿವೇಕಾನಂದರ ಸಂದೇಶ. ಜ.12 ಆ ಪುಣ್ಯಪುರುಷನ ಜನ್ಮದಿನವಾಗಿದ್ದರಿಂದ, ಅದರ ನೆಪದಲ್ಲಿ ನಮ್ಮನ್ನು ಬಗೆದುಕೊಳ್ಳಲು ಇದೊಂದು ಅವಕಾಶ.
Related Articles
Advertisement
ಈಗ ವಿಶ್ವದ ಬಲಿಷ್ಠ ದೇಶವಾಗಿ ಬೆಳೆದುನಿಂತಿರುವ ಭಾರತದ ಭವಿಷ್ಯವನ್ನು ಅಂದೇ ಮೊಳಗಿಸಿದ್ದು “ನರೇಂದ್ರ’ನಾಥದತ್ತ. ಗುರು ವಿವೇಕರನ್ನು ನೆನೆಯುವಾಗ ಅಷ್ಟೆಲ್ಲ ಮನದುಂಬಿ, ಭಾವತುಂಬಿ ಬಂದರೂ, ಬೆಂಗಳೂರಿನ ಮೆಟ್ರೋ ರೈಲುಗಳು, ಕಬ್ಬನ್, ಲಾಲ್‌ಬಾಗ್‌ಗಳು, ಡಿ.31ರ ಮಧ್ಯರಾತ್ರಿಯ ಮಹಾತ್ಮಗಾಂಧಿ ರಸ್ತೆ, ಶನಿವಾರ, ಭಾನುವಾರ ಬೆಂಗಳೂರಿನ ಎಲ್ಲ ಪಂಚತಾರಾ ಹೋಟೆಲ್‌ಗಳ ಆವರಣಗಳನ್ನು ನೋಡುವಾಗ ಉದ್ವೇಗಕ್ಕೊಳಗಾಗುತ್ತೇವೆ.
ವಿವೇಕರು ಮೊದಲ ವಿದೇಶ ಪ್ರವಾಸದಲ್ಲಿದ್ದಾಗ ಒಮ್ಮೆ ಒಂದು ಜಾಗದಲ್ಲಿ ಏನನ್ನೊ ನೋಡುತ್ತಿರುತ್ತಾರೆ. ಆಗ ಅಲ್ಲಿದ್ದ ಒಂದಷ್ಟು ವೇಶ್ಯೆಯರು ಅವರತ್ತ ನೋಡಿ, ಸತತವಾಗಿ ಸಂಕೇತ ನೀಡುತ್ತಾರೆ. ಆ ವೇಶ್ಯೆಯರತ್ತ ಹೋದ ವಿವೇಕಾನಂದರು ಮಂಡಿಯೂರಿ ಕುಳಿತು, “ಅಮ್ಮಾ ಜಗನ್ಮಾತೆ… ಎಲ್ಲ ಕಡೆ ಅಷ್ಟು ಪವಿತ್ರಳಾಗಿ ಪ್ರಕಟಗೊಳ್ಳುವ ನೀನು, ಇಲ್ಲಿ ಏಕಮ್ಮಾ ಹೀಗೆ ಕಾಣಿಸಿಕೊಳ್ಳುತ್ತಿದ್ದಿ?’ ಎಂದು ಕಣ್ಣೀರು ಹಾಕುತ್ತಾರೆ. ಆ ವೇಶ್ಯೆಯರು ದಿಗ್ಭ್ರಮೆಗೊಂಡು ನಿಲ್ಲುತ್ತಾರೆ.
ಹೊಸವರ್ಷವೆಂಬ ಸಡಗರದಲ್ಲಿ ಯುವಕರು ಮೈಮರೆತು ನಡೆಸುವ ಹುಚ್ಚಾಟಗಳನ್ನು ನೋಡಿದಾಗ ಹೀಗೊಂದು ಖನ್ನತೆ ಕಾಡುತ್ತದೆ. ಮಧ್ಯರಾತ್ರಿ ಇನ್ನೊಬ್ಬನ ಬದುಕಿನ ಬಗ್ಗೆ ಸ್ವಲ್ಪವೂ ಚಿಂತಿಸದೇ ವ್ಹೀಲಿಂಗ್ ಮಾಡಿಕೊಂಡು ಭರ್ರನೆ, ಮಲ್ಲೇಶ್ವರದ ಕುವೆಂಪು ಮಹಾಕವಿ ರಸ್ತೆಯಲ್ಲಿ ಬೈಕ್ ನುಗ್ಗಿಸುವ ಯುವಕರನ್ನು ನೋಡಿದಾಗಲೂ, ಮನಸ್ಸು ಚಿಂತಾಕ್ರಾಂತಗೊಳ್ಳುತ್ತದೆ. ಕೆಲ ಪಂಚತಾರಾ ಹೋಟೆಲ್‌ಗಳಲ್ಲಿ ಮಾದಕವಸ್ತುಗಳನ್ನು ಸೇವಿಸಿ ಬಿದ್ದುಕೊಳ್ಳುವ ವ್ಯಕ್ತಿಗಳನ್ನು ನೋಡಿದಾಗ,
ಉಕ್ಕಿನಂತಹ ನರಗಳು, ಕಬ್ಬಿಣದಂಥ ಮಾಂಸಖಂಡಗಳು, ಅದರ ಅಂತರಾಳದಲ್ಲಿ ನೆಲೆಸಿರುವ ಸಿಡಿಲಿನಂಥ ಮನೋಶಕ್ತಿ ಎಲ್ಲಿ ಹೋಯಿತು ಎಂದು ವೇದನೆಯಾಗುತ್ತದೆ. ಇಡೀ ದೇಶವನ್ನು ಎರಡು ಬಾರಿ ಸುತ್ತಿದ ವಿವೇಕಾನಂದರು, ಭಾರತ ಅಂದು ತುಂಬಿಕೊಂಡಿದ್ದ ದುಃಖ, ದಾರಿದ್ರವನ್ನು ಕಣ್ಣಾರೆ ಕಂಡರು. ಆಗ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಸಮುದ್ರದ ಮಧ್ಯೆ ಬಂಡೆಯ ಮೇಲೆ ಮೂರು ದಿನ ಧ್ಯಾನನಿರತರಾದರು.
ಆಗ ಅವರಿಗೆ ತಾಯಿ ಭಾರತಿಯ ದರ್ಶನವಾಗುತ್ತದೆ. ಅದೇ ಅವರನ್ನು ಅಮೆರಿಕಕ್ಕೆ ಹೋಗಲು ಪ್ರೇರೇಪಿಸುತ್ತದೆ. ಜಗನ್ಮಾತೆಯನ್ನು ಭಾರತಮಾತೆಯೆಂದು ಕಂಡು, ಭಾರತಿ ಬೇರೆಯಲ್ಲ, ದುರ್ಗೆ ಬೇರೆಯಲ್ಲ ಎಂದು ಭಾವಿಸಿದ್ದ ವಿವೇಕಾನಂದರು ಎಲ್ಲಿ? ಮೆಟ್ರೋ ಟ್ರೈನುಗಳಲ್ಲಿ ಪಕ್ಕದವರು ಇದ್ದಾರೆಂದೂ ತಲೆಕೆಡಿಸಿಕೊಳ್ಳದೇ ಮುತ್ತುಕೊಡುವ, ತೀರಾ ಹತ್ತಿರ ಸರಿದು ಅಕ್ಷರಶಃ ತಬ್ಬಿಕೊಂಡಂತೆ ವರ್ತಿಸಿ, ಅಸಹ್ಯ ಹುಟ್ಟಿಸುವ ಈ ಯುವಜನತೆಯೆಲ್ಲಿ?
ತನ್ನ ದೇಶದ ಬಂಧುಭಗಿನಿಯರು ಕಷ್ಟದಲ್ಲಿರುವಾಗ ತಾನು ಮಂಚದ ಮೇಲೆ ಹೇಗೆ ಮಲಗಿರಲಿ ಎಂದು ತಳಮಳಿಸುವ ಆ ವಿವೇಕಾನಂದರಿಗೂ, ಮೋಜಿ ನಲ್ಲಿ ತೇಲುವ ಈಗಿ ನ ಕೆಲ ಯುವಕರಿಗೂ ಎಲ್ಲಿಂದೆಲ್ಲಿಗೆ ತಾಳಮೇಳ? ಬೆಂಗಳೂರು ಬೆಳೆಯುತ್ತಿದೆ, ಭಾರತವೂ ಬೆಳೆಯುತ್ತಿದೆ, ಓ ಯುವಕರೇ ವಿವೇಕಾನಂದರನ್ನು ನೆನಪಿಸಿಕೊಂಡು ನೀವೂ ಬೆಳೆಯಬಾರದೇಕೆ?
* ನಿರೂಪ