ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಚುಚ್ಚುಮದ್ದು ಕೊರತೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಇದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನು ಸ್ವೀಕರ್ ರಮೇಶ್‌ಕುಮಾರ್ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಬಡವರ ಮತ್ತು ಒಳ ಹಾಗೂ ಹೊರರೋಗಿಗಳ ಬವಣೆಯನ್ನು ಅರಿತು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದ ಕ್ಷೇತ್ರದ ಶಾಸಕರೂ ಆದ ಸ್ಪೀಕರ್ ರಮೇಶ್‌ಕುಮಾರ್, ಔಷಧಿಗಳ ಕೊರತೆ ಕುರಿತು ಗರಂ ಆದರಲ್ಲದೇ, ಬಡವರು ಅಂದ್ರೆ ಲೆಕ್ಕಕ್ಕೆ ಇಲ್ಲ ನಿಮಗೆ ಎಂದು ತರಾಟೆಗೆ ತೆಗೆದುಕೊಂಡರು. ನೀವೆಲ್ಲಾ ಸೇರಿ ಖಾಸಗಿ ಆಸ್ಪತ್ರೆಗೆ ಲಾಭ ಮಾಡುತ್ತೀದ್ದೀರಿ ಎಂದ ಸ್ಪೀಕರ್‌ರ ಕೋಪಕ್ಕೆ ಕಕ್ಕಾಬಿಕ್ಕಿಯಾದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿಜಯ್ ಕುಮಾರ್ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಆಸ್ಪತ್ರೆಯ ತಪಾಸಣೆ ನಡೆಸಿದ ಸ್ಪೀಕರ್ ರಮೇಶ್‌ಕುಮಾರ್ , ಬಡರೋಗಿಗಳಿಗೆ ಚಿಕಿತ್ಸೆ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಬಡವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಏರಿಸಿ ಮಾತನಾಡಿ, ಸರ್ಕಾರ ಪಾಲಿಸಿ ಮಾಡಿದೆ. ಅದಕ್ಕೆ ತಕ್ಕಂತೆ ನೀವು ಪ್ರಸ್ತಾವನೆ ಮಾಡಿ ಕಳಿಸಿದರೆ ಆಸ್ಪತ್ರೆಗೆ ಬೇಕಾದ ಔಷಧಿಗಳನ್ನು ನಾವು ಪೂರೈಕೆ ಮಾಡುತ್ತೇವೆ. ಆದರೆ, ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಚೀಟಿ ನೀಡಬಾರದು ಎಂದು ಸರ್ಕಾರದ ಮಟ್ಟದಲ್ಲಿ ಕಾನೂನು ಜಾರಿ ಮಾಡಿದ್ದೇವೆ. ಆದರೆ, ಇಲ್ಲಿ ಔಷಧಿಗಳೇ ಇಲ್ಲ, ರೋಗಿಗಳು ಎಲ್ಲಿಗೆ ಹೋಗುವುದು. ನೀವು ಇಲ್ಲವೆಂದರೆ ಬಡರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಬೇಕು. ಆಗಿದ್ದರೆ ನೀವೇಕೆ ಎಂದು ಹೇಳಿದರು.
ನಿಮ್ಮಗಳ ಈ ವರ್ತನೆ ನೋಡಿದರೆ ನೀವೆಲ್ಲ ಸೇರಿ ಖಾಸಗಿಯವರಿಗೆ ಲಾಭ ಮಾಡಲು ಲಾಬಿ ನಡೆಸುತ್ತಿದ್ದೀರ ಎಂದಾಯ್ತು. ಇಲ್ಲವಾದರೆ ನಿಮ್ಮ ನಡೆ ಹೇಗಿರಬೇಕು? ಸರ್ಕಾರಿ ಸಭೆಗೆ ಬಂದಾಗ ಔಷಧಿಗಳ ಸರಬರಾಜು ಆಗುತ್ತಿಲ್ಲ. ಇಂತಹ ಔಷಧಿಗಳ ಅವಶ್ಯಕತೆ ಇದೆ ಎಂದು ತಿಳಿಸಬೇಕು. ಆಗ ನಾವು ಅದನ್ನು ಸರಬರಾಜು ಮಾಡಿಸಲು ಕ್ರಮ ವಹಿಸುತ್ತೇವೆ ಎಂದು ಹೇಳಿದರು.
ಇಲ್ಲಿ ನಾಯಿ ಕಚ್ಚಿದ್ದಕ್ಕೆ ಏನಾದರೂ ಔಷಧಿ ಇದೆಯಾ ಎಂಬ ಸ್ಪೀಕರ್ ಪ್ರಶ್ನೆಗೆ ಉತ್ತರಿಸಿದ ಆಸ್ಪತ್ರೆ ಆಡಳಿತಾಧಿಕಾರಿ ಶ್ರೀನಿವಾಸ್, ಅವಶ್ಯಕತೆ ಇರುವುದು 10 ವಾಯಲ್ಸ್ ಆದರೆ, ಸರಬರಾಜು ಆಗಿರುವುದು 5 ಎಂದು ಹೇಳಿದರು. ಇದರಿಂದ ಆಕ್ರೋಶಗೊಂಡ ಸ್ಪೀಕರ್ ಬೈದು ಹೊರಟು ಹೋದರು. ಈ ವೇಳೆ ಮುಖಂಡರಾದ ಶ್ಯಾಗತ್ತೂರು ಮುನಿವೆಂಕಟಸ್ವಾಮಿ, ಬೈರಪಲ್ಲಿ ವೆಂಕಟರೆಡ್ಡಿ, ಎಪಿಎಂಸಿ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಆಸ್ಪತ್ರೆ ಸಿಬ್ಬಂದಿ ಇದ್ದರು.