ಮಂಗಳೂರು: ಅಡಿಕೆಯಲ್ಲಿರುವ ಔಷಧೀಯ ಅಂಶಗಳ ಕುರಿತು ವಿಸ್ತೃತ ವರದಿ ಸಿದ್ಧಪಡಿಸಲು ತೀರ್ಮಾನಿಸಲಾಗಿದ್ದು, ಮಧ್ಯಾಂತರ ವರದಿಯನ್ನು ಈಗಾಗಲೇ ಕೇಂದ್ರ ಕೃಷಿ ಸಚಿವರು ಹಾಗೂ ಆರೋಗ್ಯ ಸಚಿವರಿಗೆ ಸಲ್ಲಿಸಲಾಗಿದೆ. ಈ ಮೂಲಕ ಕೇಂದ್ರ ಸರಕಾರ ಅಡಿಕೆಯ ಕುರಿತಾದ ಗೊಂದಲಗಳನ್ನು ನಿವಾರಿಸಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಕೃಷಿ ಸಚಿವರಲ್ಲಿ ಅಡಿಕೆಯ ಔಷಧೀಯ ಗುಣಗಳ ಸಂಶೋಧನೆಗೆ ಸಿಪಿಸಿಆರ್‌ಐಯನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಿ ಅಡಿಕೆಯ ಕುರಿತು ರಾಸಾಯನಿಕ ಅನ್ವೇಷಣೆ, ಅಡಿಕೆ ಸೇವನೆ ಮಾಡುವವರ ಸರ್ವೇ, ಔಷಧೀಯ ಗುಣಗಳ ಕುರಿತು ಸಿಎಸ್‌ಐಆರ್, ಸಿಐಎಂಎಪಿ, ಸಿಎಫ್ಟಿಆರ್‌ಐ, ಸಿಸಿಎಬಿ ಮತ್ತು ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ವಿಸ್ತೃತ ವರದಿ ತಯಾರಿಸಲು ಕೋರಲಾಗಿತ್ತು.
ಅಡಿಕೆ ಕ್ಯಾನ್ಸರ್ ಕಾರಕವಲ್ಲ, ಬದಲಾಗಿ ಅದು ಕ್ಯಾನ್ಸರನ್ನು ಗುಣಪಡಿಸುತ್ತದೆ ಎಂಬುದು ಇತ್ತೀಚೆಗಿನ ಸಂಶೋಧನೆಯಿಂದ ದೃಢಪಟ್ಟಿದೆ. ಹೀಗಾಗಿ ಈ ಕುರಿತು ಮಧ್ಯಾಂತರ ವರದಿಯನ್ನು ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಹಾಗೂ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಕ್ಯಾಂಪ್ಕೋ ಮತ್ತು ರಾಜ್ಯ ಅಡಿಕೆ ಫೆಡರೇಶನ್‌ನ ಪ್ರತಿನಿಧಿಗಳು ಸಲ್ಲಿಸಿದ್ದಾರೆ. ಜತೆಗೆ ಈ ಸಂದರ್ಭ ಆರೋಗ್ಯ ಸಚಿವರಲ್ಲಿ ಇದರ ವಿಸ್ತೃತ ವರದಿ ಬರುವವರೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವ ದಾವೆಯನ್ನು ಮುಂದುವರಿಸದಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವಂತೆ ಒತ್ತಾಯಿಸಲಾಗಿದೆ. ಮುಂದಿನ 6 ತಿಂಗಳಲ್ಲಿ ವಿಸ್ತೃತ ವರದಿ ಸಲ್ಲಿಕೆಯಾಗಲಿದೆ ಎಂದು ತಿಳಿಸಿದರು.
ರಾಜ್ಯ ಅಡಿಕೆ ಫೆಡರೇಶನ್ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮಾತನಾಡಿ, ಅಡಿಕೆ ಬೆಳೆಗಾರರು ಯಾವುದೇ ವದಂತಿಗಳಿಗೆ ಕಿವಿಗೊಟ್ಟು ಆತಂಕಕ್ಕೊಳಗಾಗಬಾರದು. ಎಪ್ರಿಲ್ ಮೊದಲ ವಾರದಿಂದ ಅಡಿಕೆ ಧಾರಣೆಯೂ ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಅಡಿಕೆ ದಾಸ್ತಾನಿಗೆ ಆರೋಗ್ಯ ಇಲಾಖೆ ದೃಢಪಡಿಸಿದ ಕ್ರಮವನ್ನೇ ಬಳಸಲಾಗುತ್ತಿದೆ ಎಂದರು.
ಕಾಳುಮೆಣಸು ಧಾರಣೆ ಇಳಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ಕೆ.ಜಿ.ಗೆ 140 ರೂ.ಗೆ ವಿಯೆಟ್ನಾಂನಿಂದ ಕಾಳುಮೆಣಸು ಆಮದಾಗುತ್ತಿದೆ. ಆದರೆ ಇದರ ಆಮದಿನ ಕುರಿತು ಕೇಂದ್ರ ಸರಕಾರ ನಿಯಂತ್ರಣ ಹೇರಿರುವುದರಿಂದ ಪ್ರಸ್ತುತ ಧಾರಣೆ 370 ರೂ.ಗಳಲ್ಲಿ ನಿಂತಿದೆ. ಇಲ್ಲದೆ ಇದ್ದರೆ 200 ರೂ.ಗೆ ತಲುಪುತ್ತಿತ್ತು ಎಂದು ಕೊಂಕೋಡಿ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಎನ್. ಸುಬ್ರಹ್ಮಣ್ಯ ಭಟ್, ಡಾ| ಕೇಶವ ಭಟ್ ಉಪಸ್ಥಿತರಿದ್ದರು.