Advertisement

ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಅಗತ್ಯ

11:10 AM Jul 03, 2019 | Suhan S |

ರಾಮನಗರ: ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡದೆ ಹೋದರೆ ನಾಗರಿಕರಲ್ಲಿ ಸೋಂಕಿಗೆ ಕಾರಣವಾಗುತ್ತವೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭಾಂಗಣದಲ್ಲಿ ಸಾರ್ವಜನಿಕ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌, ಲ್ಯಾಬ್‌ ಮತ್ತು ಪಶು ವೈದ್ಯಕೀಯ ಸಿಬ್ಬಂದಿಗಳಿಗೆ ನಡೆದ ಜೈವಿಕ ತ್ಯಾಜ್ಯ ನಿರ್ವಹಣೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೈವಿಕ ಮತ್ತು ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಮಾನವ ಹಾಗೂ ಪ್ರಾಣಿಗಳಲ್ಲಿ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವ ವೇಳೆ ಅಥವಾ ಪ್ರತಿರಕ್ಷಣೆ ಸಮಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಜಿಲ್ಲಾ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತರುವ ಹೊಣೆ ಗ್ರಾಮ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಹೊಣೆ ಎಂದು ಹೇಳಿದರು.

ವಿಲೇವಾರಿ: ವೈದ್ಯಕೀಯ ತ್ಯಾಜ್ಯ ಮುಖ್ಯವಾಗಿ ಆಸ್ಪತ್ರೆಗಳು, ನರ್ಸಿಂಗ್‌ ಹೋಮ್‌, ಕ್ಲಿನಿಕ್‌, ವೆಟರ್ನರಿ ಇನ್ಸಿಟಿಟ್ಯೂಟ್ ಅಥವಾ ಅನಿಮಲ್ ಹೌಸ್‌, ಬ್ಲಿಡ್‌ ಬ್ಯಾಂಕ್‌, ಬ್ಲಿಡ್‌ ಡೊನೇಷನ್‌ ಕ್ಯಾಂಪ್‌, ಆಯುಷ್‌ ಆಸ್ಪತ್ರೆ, ಆರೋಗ್ಯ ತಪಾಸಣಾ ಶಿಬಿರಗಳು ಮತ್ತು ಔಷಧ ಮಳಿಗೆಗಳಿಂದ ಬರುತ್ತಿದ್ದು ವೈದ್ಯಕೀಯ ತ್ಯಾಜ್ಯ ಘಟಕದಲ್ಲಿ ವಿಲೇವಾರಿಯಾಗಬೇಕು ಎಂದರು.

ಜಿಲ್ಲಾ ನೋಡಲ್ ಅಧಿಕಾರಿ ಡಾ.ಆರ್‌.ಎನ್‌.ಲಕ್ಷ್ಮೀಪತಿ ಮಾತನಾಡಿ, ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಉತ್ಪತ್ತಿಯಾಗುವ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

Advertisement

ಯೋಚಿಸಿ: ಆಸ್ಪತ್ರೆಯಲ್ಲಿ ಇರುವ ನಿಗದಿತ ಬಾಕ್ಸ್‌ ಗಳಲ್ಲಿ ಮಾತ್ರ ತ್ಯಾಜ್ಯಗಳನ್ನು ಹಾಕಬೇಕು. ಬಾಕ್ಸ್‌ ನಲ್ಲಿ ಹಾಕುವಾಗಲೇ ಸ್ವಲ್ಪ ಯೋಚಿಸಿದರೆ ತ್ಯಾಜ್ಯ ವಿಲೇವಾರಿ ಸರಳವಾಗುತ್ತದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗಳ ಆಡಳಿತ ಮಂಡಳಿ ಹಾಗೂ ವೈದ್ಯರು ಸೂಕ್ತ ಕ್ರಮ ವಹಿಸಬೇಕು. ತದನಂತರ ನಿಯೋಜಿತ ತ್ಯಾಜ್ಯ ವಿಲೇವಾರಿ ವಾಹನ ಬಂದಾಗ ಅದನ್ನು ನೀಡಬೇಕು ಎಂದರು.

ಅಧಿಕಾರಿಗಳಿಗೆ ಸಲಹೆ:ರಾಸಾಯನಿಕಗಳಿಂದ ಕೂಡಿದ ವೈದ್ಯಕೀಯ ಘನತ್ಯಾಜ್ಯ ವೈಜ್ಞಾನಿಕವಾಗಿ ಸಂಸ್ಕರಿಸಿ ವಿಲೇವಾರಿ ಮಾಡುವ ಅಗತ್ಯವಿದೆ. ಸಾರ್ವಜನಿಕರಿಗೆ ಈ ತ್ಯಾಜ್ಯದಿಂದ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ತ್ಯಾಜ್ಯ ಪರಿಣಾಮಕಾರಿಯಾಗಿ ವಿಲೇವಾರಿ ಕಡೆಗೆ ಗಮನ ನೀಡುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದರು.

ಉಪ ಪರಿಸರ ಅಧಿಕಾರಿ ಲೋಕೇಶ್‌, ಜಿಲ್ಲಾ ಆಸ್ಪತ್ರೆ ಕ್ವಾಲಿಟಿ ಕೋ-ಆರ್ಡಿನೇಟರ್‌ ಡಾ.ಕಲಾ, ಜಿಲ್ಲಾ ಗುಣಮಟ್ಟ ಸಲಹೆಗಾರ್ತಿ ಸುಷ್ಮಶ್ರೀ, ಕಾರ್ಯಕ್ರಮ ಸಹಾಯಕ ಶೇಖರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next