ಹುಬ್ಬಳ್ಳಿ: ರೋಗಿಗಳ ಅನುಕೂಲಕ್ಕಾಗಿ ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಮೆಡಿಕಲ್ ವೆಂಡಿಂಗ್ ಮಶಿನ್ ಅಳವಡಿಸಲಾಗುತ್ತಿದ್ದು, ಇದು ಉತ್ತರ ಕರ್ನಾಟಕದ ಸರಕಾರಿ ಆಸ್ಪತ್ರೆಯಲ್ಲಿ ಅಳವಡಿಸಿದ ಮೊದಲ ವೆಂಡಿಂಗ್ ಯಂತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನದ ಭಾಗವಾಗಿ ಯಂತ್ರ ಅಳವಡಿಸಲಾಗುತ್ತಿದೆ.
ಏನಿದು ಮೆಡಿಕಲ್ ವೆಂಡಿಂಗ್ ಯಂತ್ರ: ಎಟಿಎಂನಿಂದ ಹಣ ಪಡೆದಷ್ಟೇ ಸುಲಭವಾಗಿ ವೆಂಡಿಂಗ್ ಯಂತ್ರದಿಂದ ವೈದ್ಯರು ಸೂಚಿಸಿದ ಔಷಧವನ್ನು ಪಡೆಯಬಹುದು. ಆಸ್ಪತ್ರೆ ವೈದ್ಯರು ಡಿಜಿಟಲ್ ರೂಪದಲ್ಲಿ ಔಷಧ ನಮೂದಿಸಲಿದ್ದು, ಕ್ಯೂಆರ್ ಕೋಡ್ ಹೊಂದಿರುವ ವೈದ್ಯರ ಚೀಟಿಯಿಂದ ಔಷಧ ತರಿಸಿಕೊಳ್ಳಬಹುದು. ಆನ್‌ಲೈನ್ ಮೂಲಕ ಮೆಡಿಕಲ್ ಶಾಪ್‌ಗ್ಳಲ್ಲಿ ವೈದ್ಯರು ಬರೆದ ಔಷಧಗಳನ್ನು ತ್ವರಿತವಾಗಿ ಪಡೆಯಬಹುದಾಗಿದೆ. ಎಲ್ಲ ಔಷಧಿಗಳು ಒಂದೇ ಮೆಡಿಕಲ್ ಶಾಪ್‌ನಲ್ಲಿ ಸಿಗುವುದಿಲ್ಲ. ಆದ್ದರಿಂದ ಇದು ಔಷಧಿಗಳನ್ನು ತೀವ್ರಗತಿಯಲ್ಲಿ ಪಡೆಯಲು ಪೂರಕವಾಗಿದೆ.
ಆಸ್ಪತ್ರೆಗೆ ಬರುವವರಲ್ಲಿ ಹೆಚ್ಚಿನವರು ಬಡಜನರು. ಅವರಿಗೆ ಆನ್‌ಲೈನ್ ಮೂಲಕ ಔಷಧಗಳನ್ನು ತರಿಸಿಕೊಳ್ಳಲು ಆಗುವುದಿಲ್ಲ. ಇದರ ನೆರವಿನಿಂದ ತ್ವರಿತಗತಿಯಲ್ಲಿ ಎಲ್ಲ ಔಷಧಗಳನ್ನು ಪಡೆಯಬಹುದಾಗಿದೆ. ಸುಮಾರು 64ಕ್ಕೂ ಹೆಚ್ಚು ಬಗೆಯ ಔಷಧಗಳನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಶುದ್ಧೀಕರಿಸಿದ ನೀರಿನ ಬಾಟಲ್, ಸ್ಯಾನಿಟರಿ ಪ್ಯಾಡ್ ಕೂಡ ತರಿಸಿಕೊಳ್ಳಬಹುದಾಗಿದೆ.
ಏನಿದರ ಪ್ರಯೋಜನ?: ಕೇರ್‌ನೇಷನ್ ಮೆಡಿಕಲ್ ವೆಂಡಿಂಗ್ ಮಶಿನ್ ಯಂತ್ರದಿಂದ 24 ಗಂಟೆಗಳ ಕಾಲವೂ ಔಷಧ ಪಡೆದುಕೊಳ್ಳಬಹುದು. ಫಾರ್ಮಸಿ ರಾತ್ರಿ ವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ತಡರಾತ್ರಿ ಯಾವುದಾದರೂ ಔಷಧ ಬೇಕಾದರೆ ತಡಕಾಡುವ ಅವಶ್ಯಕತೆಯಿಲ್ಲ. ರೋಗಿಗಳಿಗೆ ಒಂದು ಕ್ಯುಆರ್ ಕೋಡ್ ನೀಡಲಾಗುತ್ತದೆ. ಅದರ ಆಧಾರದ ಮೇಲೆ ವೈದ್ಯರು ನೀಡಿದ ಚೀಟಿಯ ಮೂಲಕ ಔಷಧ ತರಿಸಿಕೊಳ್ಳಬಹುದಾಗಿದೆ. ಇಲ್ಲವೇ ರೋಗಿಗಳ ಸಂಬಂಧಿಕರು ಎಲ್ಲ ಔಷಧಿಗಳು ಸಿಗುವ ಮೆಡಿಕಲ್ ಶಾಪ್‌ಗೆ ಹೋಗಿ ತರಬಹುದು.
Advertisement
ಈಗಾಗಲೇ ಆಸ್ಪತ್ರೆಯಲ್ಲಿ ಯಂತ್ರ ಅಳವಡಿಕೆ ಕಾರ್ಯ ನಡೆದಿದ್ದು, ಜಿಲ್ಲಾಧಿಕಾರಿ ದೀಪಾ ಚೋಳನ್ ಯಂತ್ರದ ಕಾರ್ಯ ಪರಿಶೀಲಿಸಿದ್ದಾರೆ. ಸೆಪ್ಟೆಂಬರ್ ಕೊನೆ ವಾರದಲ್ಲಿ ಇದು ಕಾರ್ಯಾರಂಭ ಮಾಡಲಿದೆ.
Related Articles
Advertisement
ಫಾರ್ಮಾಸಿಸ್ಟ್ ಹಗಲಿರುಳು ಇರಬೇಕಾದ ಅವಶ್ಯಕತೆಯಿಲ್ಲ. ಕ್ಯೂಆರ್ ಕೋಡ್ ತೋರಿಸಿದ ತಕ್ಷಣ ಅವಶ್ಯಕವಿರುವ ಔಷಧಿಗೆ ಎಷ್ಟು ಹಣ ತಗಲುತ್ತದೆ ಎಂಬ ಬಗ್ಗೆ ಮಾಹಿತಿ ಬರುತ್ತದೆ. ಹಣವನ್ನು ನಗದು ರೂಪದಲ್ಲಿ, ಎಟಿಎಂ ಮೂಲಕ ಇಲ್ಲವೇ ರೂಪೇ, ಪೇಟಿಎಂ ಕಾರ್ಡ್‌ಗಳ ಮೂಲಕ ಡಿಜಿಟಲ್ ರೂಪದಲ್ಲಿಯೂ ಪಾವತಿಸಬಹುದು. ವೈದ್ಯರು ಹೊರಗೆ ಬರೆದುಕೊಡುವ ಔಷಧಿಗಳನ್ನು ಇಲ್ಲಿ ಪಡೆದುಕೊಳ್ಳಬಹುದು.
ವೆಂಡಿಂಗ್ ಯಂತ್ರದಲ್ಲಿರುವ ಔಷಧಿಗಳ ಸ್ಟಾಕ್ ಬಗ್ಗೆಯೂ ಮಾಹಿತಿ ಲಭ್ಯವಾಗುವುದರಿಂದ ಎಲ್ಲ ಔಷಧಿಗಳು ತ್ವರಿತವಾಗಿ ಸಿಗುತ್ತವೆ. ಇದು ಚಿಕಿತ್ಸೆಗೆ ಪೂರಕವಾಗಲಿದೆ.
ಜನಾನುಕೂಲ ಪರಿಗಣಿಸಿ ಬೇರೆ ಸರಕಾರಿ ಆಸ್ಪತ್ರೆಗಳಲ್ಲಿಯೂ ಸೇವೆ ಒದಗಿಸುವ ಕುರಿತು ನಿರ್ಧರಿಸಲಾಗುವುದು. ಆನ್‌ಲೈನ್ ಮೂಲಕ ಔಷಧ ಒದಗಿಸುವ ಸೌಲಭ್ಯ ಇದಾಗಿದೆ. ಮೆಡಿಕಲ್ ಶಾಪ್‌ಗ್ಳಲ್ಲದೇ ಆನ್‌ಲೈನ್ ಮೆಡಿಸಿನ್ ಒದಗಿಸುವ ಸಂಸ್ಥೆಗಳಿಂದ ಕೂಡ ಔಷಧ ತರಿಸಿಕೊಡಲಾಗುವುದು. ವೈದ್ಯರು ಬರೆದ ಔಷಧವನ್ನು ತಪ್ಪಾಗಿ ಅರ್ಥೈಸಿಕೊಂಡು ಮೆಡಿಕಲ್ ಶಾಪ್‌ನವರು ಬೇರೆ ಔಷಧ ಕೊಡುವ ಪ್ರಮೇಯ ಇರುವುದಿಲ್ಲ. • ಎಸ್.ಎಚ್. ನರೇಗಲ್, ಸ್ಮಾರ್ಟ್‌ಸಿಟಿ ಯೋಜನೆ ವಿಶೇಷಾಧಿಕಾರಿ
ಯಂತ್ರದ ವಿಶೇಷತೆ:
24 ಇಂಚ್ ಅಗಲದ ಟಚ್ ಸ್ಕ್ರೀನ್ ಇದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆ ಮೂಲಕ ಸಂವಹನ ವ್ಯವಸ್ಥೆಯಿದೆ. ಕ್ಯೂಆರ್ ಕೋಡ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ನೈನ್‌ರಿಚ್ ಇನ್‌ಫೂಟೆಕ್, ಎಸ್‌ಎಚ್ಆರ್‌ಎಲ್ ಟೆಕ್ನೊಸಾಫ್ಟ್ ಪ್ರೈವೇಟ್ ಲಿಮಿಟೆಡ್, ಟೆಸ್ಲಾನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಯಂತ್ರವನ್ನು ಅಳವಡಿಸಲಾಗುತ್ತಿದೆ. ಇದರ ನಿರ್ವಹಣೆಯನ್ನು ಸಂಸ್ಥೆಗಳು ಮಾಡಲಿವೆ.
ಕಳೆದ ವರ್ಷ ಆಂಧ್ರದಲ್ಲಿ ಜಾರಿ:
ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಕಳೆದ ವರ್ಷ ಸರಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ವೆಂಡಿಂಗ್ ಮಶಿನ್ ಅಳವಡಿಕೆಗೆ ಚಾಲನೆ ನೀಡಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಸಾಕಷ್ಟು ಜನರಿಗೆ ಅನುಕೂಲವಾಗಿದ್ದರಿಂದ ಅಲ್ಪಾವಧಿಯಲ್ಲಿ ಯೋಜನೆಯನ್ನು ಹಲವು ಸರಕಾರಿ ಆಸ್ಪತ್ರೆಗಳಿಗೆ ವಿತರಿಸಲಾಗಿದೆ.
•ವಿಶ್ವನಾಥ ಕೋಟಿ