ಮುಂಬಯಿ: ಮುಂಬಯಿ ನಾಯರ್ ಆಸ್ಪತ್ರೆಯ ವೈದ್ಯೆ ಪಾಯಲ್ ಸಲ್ಮಾನ್ ತಡ್ವಿ (23) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರ‍್ಯಾಗಿಂಗ್ ನಡೆಸಿದ್ದ ಆರೋಪಿಗಳಾದ ಮೂವರು ಮಹಿಳಾ ವೈದ್ಯೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವೈದ್ಯೆಯರಾದ ಡಾ.ಭಕ್ತಿ ಮೆಹ್ರೆ, ಡಾ.ಹೇಮಾ ಅಹುಜಾ, ಮತ್ತು ಡಾ.ಅಂಕಿತಾ ಖಾಂಡೇಲ್‌ವಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಭಕ್ತಿ ಮೆಹ್ರೆಯನ್ನು ಸೆಷನ್ಸ್ ನ್ಯಾಯಾಲಯದಲ್ಲೇ ಪೊಲೀಸರು ಬಂಧಿಸಿದ್ದು, ಹೇಮಾ ಅಹುಜಾರನ್ನು ಮಂಗಳಾವಾರ ರಾತ್ರಿ ಮತ್ತು ಅಂಕಿತಾರನ್ನು ಬುಧವಾರ ಬೆಳಗ್ಗೆ ಬಂಧಿಸಲಾಗಿದೆ.
ಪ್ರಕರಣಕ್ಕೆಸಂಬಂಧಿಸಿ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಮುಖ್ಯಸ್ಥೆಯನ್ನು ಅಮಾನತು ಮಾಡಲಾಗಿತ್ತು.
ಬಂಧಿತರ ವಿರುದ್ಧ ದೌರ್ಜನ್ಯ ಕಾಯ್ದೆ, ಆಂಟಿ ರ‍್ಯಾಗಿಂಗ್ ಆಕ್ಟ್,ಐಟಿ ಆಕ್ಟ್ ಮತ್ತು ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ)ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೂಲತಃ ಜಲ್ಗಾಂವ್ ನಿವಾಸಿ ಯಾಗಿದ್ದ ಪಾಯಲ್ ಅವರು ಬುಡಕಟ್ಟು ಜನಾಂಗದವರಾಗಿದ್ದರು. ಬಂಧಿತ ಮೂವರು ವೈದ್ಯೆಯರ ವಿರುದ್ಧ ಪಾಯಲ್ ಕುಟುಂಬ ಸದಸ್ಯರು ಮತ್ತು ಸಹಪಾಠಿಗಳು ಕ್ರಮಕ್ಕಾಗಿ ಆಗ್ರಹಿಸಿದ್ದರು.