ಬೆಂಗಳೂರು: ಇಂಡೀಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿ-20 ಪಂದ್ಯಾವಳಿ ವೇಳೆ ಬೆಂಗಳೂರು ನಗರ ಪೊಲೀಸರ ಟ್ವಿಟರ್ ಖಾತೆಯನ್ನು ನಕಲು ಮಾಡಿ ಪಂದ್ಯದ ಅಂಕಗಳು ಮತ್ತು ಆಟಗಾರರ ಆಟದ ಬಗ್ಗೆ ಮಿಮ್ಸ್ ಮಾಡುತ್ತಿದ್ದ ಮೆಡಿಕಲ್ ವಿದ್ಯಾರ್ಥಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚೆನ್ನೈನ ಮಗೇಶ್ ಕುಮಾರ್(19) ಬಂಧಿತ. ಆರೋಪಿ ಚೆನ್ನೈನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದಾನೆ.
ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿ ವೇಳೆ ಬೆಂಗಳೂರು ನಗರ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯನ್ನು ನಕಲು ಮಾಡಿದ್ದ. ಅದಕ್ಕೆ ನಗರ ಪೊಲೀಸರ ಲೋಗೋವನ್ನೂ ಬಳಸಿದ್ದ. ಈ ನಕಲಿ ಖಾತೆಯಲ್ಲಿ ಐಪಿಎಲ್ ಪಂದ್ಯಾವಳಿ ಸ್ಕೋರ್ ಮಾಹಿತಿ ಅಪ್‌ಲೋಡ್ ಮಾಡಿ ಪೊಲೀಸರ ಹೆಸರು ಕೆಡಿಸಲು ಯತ್ನಿಸಿದ್ದ. ಅದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ನಕಲು ಖಾತೆಯನ್ನು ಡಿಲೀಟ್ ಮಾಡಿ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ತಮಿಳುನಾಡಿನ ಚೆನ್ನೈನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ವಿರಾಟ್ ಕೊಹ್ಲಿ ಅಭಿಮಾನಿಯಾಗಿದ್ದು, ಕ್ರಿಕೆಟ್ ಬೆಟ್ಟಿಂಗ್ ಕೂಡ ಆಡುತ್ತಾನೆ. ಈ ಮಧ್ಯೆ ಬೆಂಗಳೂರು ಪೊಲೀಸರು ಸಾರ್ವಜನಿಕರಿಗೆ ಕೆಲ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಕ್ರಿಕೆಟ್, ಫುಟ್‌ಬಾಲ್ ಹಾಗೂ ಇತರೆ ಕ್ರೀಡೆಗಳು ಮತ್ತು ಆಟಗಾರರ ಮಿಮ್ಸ್ ಮಾಡುವ ಮೂಲಕ ಅರಿವು ಮೂಡಿಸುತ್ತಿದ್ದರು. ಅದನ್ನು ತಿಳಿದ ಆರೋಪಿ, ನಗರ ಪೊಲೀಸರ ನಕಲು ಖಾತೆ ತೆರೆದು ಕ್ರಿಕೆಟ್ ಸ್ಕೊರ್ ಅಪ್‌ಲೋಡ್ ಮಾಡಿದ್ದ ಎಂದು ಪೊಲೀಸರು ಹೇಳಿದರು. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.