Advertisement

ಜವಾಬ್‌ ವತಿಯಿಂದ  ವೈದ್ಯಕೀಯ ವಿಚಾರ ಸಂಕಿರಣ

04:06 PM Jul 31, 2018 | Team Udayavani |

ಮುಂಬಯಿ: ಜುಹೂ-ಅಂಧೇರಿ- ವಸೋìವಾ- ವಿಲೆಪಾರ್ಲೆ ಅಸೋಸಿಯೇಶನ್‌ ಆಫ್‌ ಬಂಟ್ಸ್‌ -ಜವಾಬ್‌ ಇದರ ಆಶ್ರಯದಲ್ಲಿ ವೈದ್ಯಕೀಯ ವಿಚಾರ ಸಂಕಿರಣವು ಜವಾಬ್‌ನ ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜು. 29 ರಂದು ಬೆಳಗ್ಗೆ ಅಂಧೇರಿ ಪೂರ್ವ ಫೋರ್‌ ಬಂಗ್ಲೋ ಕೋಕಿಲಾ ಬೆನ್‌ ಧೀರೂಬಾಯಿ ಅಂಬಾನಿ ಆಸ್ಪತ್ರೆಯ ಕಾನ್ಫರೆನ್ಸ್‌ ಹಾಲ್‌ನಲ್ಲಿ ಪ್ರಸಿದ್ಧ ಮೂವರು ವೈದ್ಯರುಗಳಿಂದ ಜರಗಿತು.

Advertisement

ಖ್ಯಾತ ಬೆನ್ನೆಲುಬು ಶಸ್ತ್ರ ಚಿಕಿತ್ಸಾ ತಜ್ಞ ಡಾ| ವಿಶಾಲ್‌ ಪೇಶಟ್ಟಿವರ್‌ ಅವರು ಮಾತನಾಡಿ, ಸಾಮಾನ್ಯವಾಗಿ ಈ ರೋಗವು ಸುಮಾರು 40 ವರ್ಷ ವಯಸ್ಸಿನಿಂದ 70 ವರ್ಷ ವಯಸ್ಸಿನವರಲ್ಲಿ ಕಂಡು ಬರುತ್ತದೆ. ನೂರರಲ್ಲಿ ಶೇ. 90 ರಷ್ಟು ಮಂದಿ  ಬೆನ್ನುನೋವು ಮತ್ತು ಕುತ್ತಿಗೆ ನೋವಿನಿಂದ ಬಳಲುತ್ತಿದ್ದು, ನೋವು ಶಮನ ಔಷಧಿ ಹಾಗೂ ವ್ಯಾಯಾಮದಿಂದ ಗುಣಮುಖರಾಗುವ  ಸಂಭವವಿದೆ. ಆದರೆ ಸುಮಾರು ಶೇ. 10 ರಷ್ಟು ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಬೆನ್ನುನೋವು ನಾವು ಸಾಮಾನ್ಯವಾಗಿ ಕುಳಿತುಕೊಳ್ಳುವ ಭಂಗಿಯಿಂದ ಬರುತ್ತದೆ. ಹೆಚ್ಚು ಸಮಯ ಕುಳಿತುಕೊಂಡು ಕೆಲಸ ಮಾಡುವವರು ಪ್ರತಿ ಗಂಟೆಗೊಮ್ಮೆ ಇದರಿಂದ ಆರಾಮ ಪಡೆದುಕೊಳ್ಳಬೇಕು. ಕುಳಿತುಕೊಳ್ಳುವ ಭಂಗಿಯನ್ನುಬದಲಾಯಿಸಿಕೊಳ್ಳುತ್ತಿರಬೇಕು. ನೇರವಾಗಿ ಕುಳಿತುಕೊಳ್ಳುವ ಅಭ್ಯಾಸ ಅತೀ ಅವಶ್ಯಕ. ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡುವಾಗ ಬಗ್ಗಿ ಮಾತನಾಡಬಾರದು. ಸಿಗರೇಟ್‌ ಸೇವನೆಯಿಂದ ಮೂಳೆ ಸವೆತ ಇನ್ನಿತರ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ವ್ಯಾಯಾಮ ಅತ್ಯಗತ್ಯವಾಗಿದೆ. ಕ್ಯಾಲ್ಸಿಯಂ ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಮೂಳೆಗೆ ಶಕ್ತಿ ಸಿಗುತ್ತದೆ. ಮುಖ್ಯವಾಗಿ ನಡೆಯುವ ಮತ್ತು ಯೋಗ ಮಾಡುವ ಅಭ್ಯಾಸ ಬಹಳ ಮುಖ್ಯವಾಗಿದೆ ಎಂದರು.

ಜೇಷ್ಠ ನಾಗರಿಕ ಕಾಯಿಲೆಗಳ ಚಿಕಿತ್ಸಾ ತಜ್ಞ ಡಾ| ಎನ್‌. ಆರ್‌. ಶೆಟ್ಟಿ ಅವರು ಮಾತನಾಡಿ, ವಯಸ್ಕರಲ್ಲಿ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆ, ಹೆಣಗಾಟ, ಉದ್ವಿಗ್ರತೆ, ಮಧುಮೇಹ, ಚರ್ಮರೋಗ, ಅಂಗಾಂಗಳ ಕಾಯಿಲೆ, ಮೂಳೆ ಮುರಿತ, ನೆನಪು ಶಕ್ತಿ ಕಡಿಮೆಯಾಗುವುದು, ಪಕ್ಷವಾತ, ಮನೋರೋಗ ಇತ್ಯಾದಿ ಕಾಯಿಲೆಗಳು ರೋಗಿಯ ಮಾನಸಿಕ ಸ್ಥಿರತೆಯನ್ನು ಕಡಿಮೆ ಮಾಡುತ್ತದೆ. ವ್ಯಾಯಾಮ, ಯೋಗದ ಅಭ್ಯಾಸ, ಪ್ರತಿದಿನ ಧ್ಯಾನ ಮಾಡುವುದರ ಜೊತೆಗೆ ಮಾನಸಿಕ, ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಬೇಕು. ದುಶ್ಚಟಗಳನ್ನು ದೂರ ಮಾಡಬೇಕು. ದೈಹಿಕ ನೆರವಿಗಾಗಿ ನಡೆದಾಡುವ ಕೋಲು, ಕಿವಿ ಕೇಳಿಸುವ ಸಾಧನ ಹೊಂದಿರಬೇಕು. ಕನ್ನಡಕ, ಗಾಯಗಳಾದಾಗ ಎಚ್ಚರಿಕೆ ಯಿಂದಿರಬೇಕು. ವಯಸ್ಕರು ಘನ ಗಂಭೀರತೆಯ ಗೌರವ ಪೂರ್ಣ ಬದುಕನ್ನು ಹೊಂದಬೇಕು. ವಯಸ್ಕರ ಬಗ್ಗೆ ಮನೆಯವರನ್ನು ಪ್ರೀತಿ, ಗೌರವದ ಬಾಂಧವ್ಯದಿಂದ ಇರುವಂತೆ ವಿನಂತಿಸಿದರು.
ಸಭಿಕರ ಸಂಶಯಾತ್ಮಕ ಪ್ರಶ್ನೆಗಳಿಗೆ ವೈದ್ಯರೆಲ್ಲರು ಸಮರ್ಪಕವಾಗಿ ಉತ್ತರಿಸಿದರು. ವಿಚಾರ ಸಂಕಿರಣದ ಆರಂಭಕ್ಕೆ ಮುನ್ನ ಜವಾಬ್‌ ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ, ಕೋಶಾಧಿಕಾರಿ ಅಶೋಕ್‌ ಕುಮಾರ್‌ ಆರ್‌. ಶೆಟ್ಟಿ, ಜತೆ ಕಾರ್ಯದರ್ಶಿ ಟಿ. ವಿಶ್ವನಾಥ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಜವಾಬ್‌ ಪದಾಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳನ್ನು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುಚ್ಚ ನೀಡಿ ಸಮ್ಮಾನಿಸಿದರು.

ಕೋಕಿಲಾಬೆನ್‌ ಆಸ್ಪತ್ರೆಯ ಸಿಇಒ ಡಾ| ಸಂತೋಷ್‌ ಶೆಟ್ಟಿ, ಡಾ| ದವಲ್‌ ಪ್ರಕಾಶ್‌ ಅವರು ಜವಾಬ್‌ ಕುಟುಂಬವನ್ನು ಆದರದಿಂದ ಬರಮಾಡಿಕೊಂಡರು. ಜವಾಬ್‌ನ ಗೌರವ ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಶೆಟ್ಟಿ ಕಡಂದಲೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಜವಾಬ್‌ನ ಮಾಜಿ ಅಧ್ಯಕ್ಷ ವಿಶ್ವನಾಥ ಹೆಗ್ಡೆ, ಜತೆ ಕೋಶಾಧಿಕಾರಿ ಎಚ್‌. ಶೇಖರ್‌ ಹೆಗ್ಡೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಜವಾಬ್‌ ಕುಟುಂಬ, ಅಂಧೇರಿಯ ನಾಗರಿಕರು  ಉಪಸ್ಥಿತರಿದ್ದರು. 

ಸ್ತನದ ಕ್ಯಾನ್ಸರ್‌ ಯಾಕೆ ಬರುತ್ತದೆ ಎಂಬುವುದು  ಜಿಜ್ಞಾಸೆಯಾಗಿಯೇ ಉಳಿದಿದೆ. ಕಳೆದ 15 ವರ್ಷಗಳಿಂದ ಈ ಕಾಯಿಲೆ ಹೆಚ್ಚಾಗುತ್ತಿದೆ. ಪುರುಷರಿಗೂ ಸ್ತನ ಕ್ಯಾನ್ಸರ್‌ ಸಾಮಾನ್ಯವಾಗಿದೆ. ಸಾಮಾನ್ಯವಾಗಿ 40-80 ವರ್ಷದೊಳಗಿನವರ ಸ್ತನದಲ್ಲಿ ಗಡ್ಡೆ ಬೆಳೆಯಲಾರಂಭಿಸುತ್ತದೆ. ಸಿಗರೇಟು ಸೇವನೆಯಿಂದ ಇದು ಹೆಚ್ಚಾಗಿ ಬರುತ್ತದೆ. ವ್ಯಾಯಾಮ, ಉತ್ತಮ ಆಹಾರ ಸೇವನೆ, 9-26 ವರ್ಷದೊಳಗೆ ಎಚ್‌ಪಿವಿ ಪ್ಯಾಸಿನೇಶನ್‌ ಹಾಕಿಸಿಕೊಳ್ಳುವುದು, ಸಂದೇಹ ಬಂದಾಗಲೆಲ್ಲಾ ವೈದದ್ಯರ ಬಳಿ ಪರೀಕ್ಷೆ ಮಾಡಿಸುವುದರಿಂದ ಈ ರೋಗವನ್ನು ಹತೋಟಿಗೆ ತರಬಹುದು. ಸುಮಾರು 40 ವರ್ಷ ವಯಸ್ಸಿಗಿಂತ ಅಧಿಕ ವಯಸ್ಸಿನವರಿಗೆ ಮೆಮೋಗ್ರಾಂ ಪರೀಕ್ಷೆ ನೀಡಲಾಗುತ್ತದೆ. ಸರ್ಜರಿ, ರೇಡಿಯೋ ಥೆರಫಿ, ಕಿಮೋ ಥೆರಫಿ ಮೂಲಕವೂ ರೋಗವನ್ನು ಗುಣಪಡಿಸಬಹುದು. 
ಈ ರೋಗವು ವಂಶಪಾರಂಪರ್ಯದಿಂದ ಬರುವುದಿಲ್ಲ ಎಂಬುವುದು ಸತ್ಯವಾದ ಮಾತಾಗಿದೆ
– ಡಾ| ಅರ್ಚನಾ ಶೆಟ್ಟಿ ಮುಂಡ್ಕೂರು  ಸ್ತನ ಶಸ್ತ್ರ ಚಿಕಿತ್ಸಾ ತಜ್ಞೆ.

Advertisement

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು.

Advertisement

Udayavani is now on Telegram. Click here to join our channel and stay updated with the latest news.

Next