ಮಣಿಪಾಲ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವೈದ್ಯರ ತಂಡವು ಅನ್ನನಾಳದ ರಂಧ್ರಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಎಂಡೋಸ್ಕೋಪಿಕ್ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ನಿರ್ವಹಿಸಿದೆ. ಇದು ದಕ್ಷಿಣ ಭಾರತದ ವೈದ್ಯಕೀಯ ಚಿಕಿತ್ಸಾ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಿದೆ.
ವಯಸ್ಸಾದ ರೋಗಿಯೊಬ್ಬರು ಅನ್ನನಾಳದ ರಂಧ್ರದ ಗಂಭೀರ ಸಮಸ್ಯೆಗೊಳಪಟ್ಟಿದ್ದು, ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗಕ್ಕೆ ಚಿಕಿತ್ಸೆಗೆ ದಾಖಲಾಗಿದ್ದರು.ಅನ್ನನಾಳದ ರಂಧ್ರದಿಂದ ಉಂಟಾಗುವ ಬಲ-ಬದಿಯ ಹೈಡ್ರೋಪ್ನ್ಯೋ ಮೊಥೊರಾಕ್ಸ್ ವ್ಯಾಪ್ತಿ ಪರೀಕ್ಷೆಯಲ್ಲಿ ತಿಳಿದು ಬಂದಿತು.
ಗ್ಯಾಸ್ಟ್ರೋ ಎಂಟೆರೊಲೊಜಿ ವಿಭಾಗದ ಪ್ರಾಧ್ಯಾಪಕ ಡಾ| ಶಿರನ್ ಶೆಟ್ಟಿ ಅವರ ನೇತೃತ್ವದಲ್ಲಿ ವೈದ್ಯಕೀಯ ತಂಡವು ರೋಗಿಯ ಸ್ಥಿತಿಯನ್ನು ತ್ವರಿತವಾಗಿ ಮೌಲ್ಯಮಾಪನ ಮಾಡಿತು. ಮೇಲ್ಭಾಗದ ಜಠರಗರುಳಿನ ಎಂಡೋಸ್ಕೋಪಿಯನ್ನು ನಡೆಸಿದರು. ರೋಗಿಗೆ ಶಸ್ತ್ರಚಿಕಿತ್ಸೆ ಸೂಕ್ತವಲ್ಲ ಎಂದು ಪರಿಗಣಿಸಿ ಬದಲಾಗಿ, ರಂಧ್ರವಿರುವ ಸ್ಥಳದ ಮೇಲೆ ಸಂಪೂರ್ಣವಾಗಿ ಮುಚ್ಚಿದ ಲೋಹದ ಸ್ಟಂಟ್ ಇರಿಸುವುದನ್ನು ಒಳಗೊಂಡ ಒಂದು ನವೀನ ವಿಧಾನವನ್ನು ಅನುಸರಿಸಲಾಯಿತು. ಈ ಆರಂಭಿಕ ಚಿಕಿತ್ಸೆಯು ರೋಗಿಯನ್ನು ಸ್ಥಿರಗೊಳಿಸಲು ಮತ್ತು ರಂಧ್ರದಿಂದ ಉಂಟಾಗುವ ತೊಡಕು ನಿರ್ವಹಿಸುವ ಗುರಿಯನ್ನು ಹೊಂದಿತ್ತು. ಎಲ್ಲ ಹಂತಗಳ ಚಿಕಿತ್ಸೆ ಬಳಿಕ ಅಂತಿಮವಾಗಿ ರಂಧ್ರವನ್ನು ಸಂಪೂರ್ಣ ಮುಚ್ಚಲಾಯಿತು.
ತಂಡದಲ್ಲಿದ್ದ ಡಾ| ಬಾಲಾಜಿ, ಡಾ| ಸುಜಯ್ ಪ್ರಭಾತ್, ಡಾ| ಪ್ರವೀಣ್, ಡಾ| ಅಭಯ್ , ಡಾ| ಶ್ರೀಮಾನ್ , ಡಾ| ಸಚಿನ್, ಡಾ| ಶ್ವೇತಾ ಅವರ ತಂಡ ಇದನ್ನು ಸಮರ್ಥವಾಗಿ ನಿರ್ವಹಿಸಿದೆ ಎಂದು ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥ ಡಾ| ಗಣೇಶ್ ಭಟ್ ಶ್ಲಾಘಿಸಿದರು.
ಎಕ್ಸ್-ಟ್ಯಾಕ್ ವ್ಯವಸ್ಥೆಯಂತಹ ಅತ್ಯಾಧುನಿಕ ತಂತ್ರಗಳ ಯಶಸ್ವಿ ಅನುಷ್ಠಾನ ವು ಅನ್ನನಾಳದ ರಂಧ್ರಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪ್ರಗತಿ ಸೂಚಿಸುತ್ತದೆ.
ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ರೋಗಿಗಳಿಗೆ ಇದು ಸುಧಾರಿತ ಫಲಿತಾಂಶಗಳಿಗೆ ದಾರಿ ಮಾಡಿಕೊಡು ತ್ತದೆ ಎಂದು ಕಸ್ತೂರ್ಬಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.