Advertisement

ವೈದ್ಯಕೀಯ ಸೀಟು ಶರಣಾತಿಗೆ ಬ್ರೇಕ್‌: ಡಾ|ಸುಧಾಕರ್‌

08:06 PM Dec 13, 2021 | Team Udayavani |

ಸುವರ್ಣವಿಧಾನ ಸೌಧ: ಸರ್ಕಾರಿ ಕೋಟಾದ ವೈದ್ಯಕೀಯ ಸೀಟುಗಳನ್ನು ಖಾಸಗಿಯವರಿಗೆ ಶರಣಾಗತಿ ಮಾಡುವ ಮಾಫಿಯಾ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ತಲೆಎತ್ತದಂತೆ ಕ್ರಮ ವಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಹೇಳಿದರು.

Advertisement

ಸೋಮವಾರ ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಸದಸ್ಯ ಎನ್‌.ರವಿಕುಮಾರ್‌ ಅವರು ಈ ಕುರಿತು ಕೇಳಿದ ಲಿಖೀತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕೆಲವು ಕಾನೂನು ಲೋಪಗಳನ್ನು ದುರುಪಯೋಗ ಪಡಿಸಿಕೊಂಡು ವೈದ್ಯಕೀಯ ಸೀಟುಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿವೆ. 2019-20 ಮತ್ತು 2020-21ನೇ ಸಾಲಿನಲ್ಲಿ ಕೌನ್ಸೆಲಿಂಗ್‌ ನಂತರ ಉಳಿದ ಸೀಟುಗಳನ್ನು ಸರ್ಕಾರ ಖಾಸಗಿಯವರಿಗೆ ಹಸ್ತಾಂತರಿಸಿದೆ. ಆದರೆ ಮುಂದಿನ ದಿನಗಳಲ್ಲಿ ಈ ರೀತಿಯಾಗಲು ಬಿಡುವುದಿಲ್ಲ ಎಂದು ತಿಳಿಸಿದರು.

ಸೀಟು ಮರಳಿಸುವವರಿಗೆ ಹೆಚ್ಚಿನ ದಂಡ ಹಾಕಲಾಗುವುದು. ಅಷ್ಟೇಯಲ್ಲ, ಅಗತ್ಯ ಕಾನೂನು ತಿದ್ದುಪಡಿಗಳನ್ನು ತಂದು ಸೀಟು ಶರಣಾಗತಿ ಮಾಫಿಯಾಗೆ ಬ್ರೇಕ್‌ ಹಾಕಲಾಗುವುದು ಎಂದರು. ಸೀಟುಗಳ ಶರಣಾಗತಿಯಲ್ಲಿ ಭಾರೀ ಅಕ್ರಮಗಳು ನಡೆಯುತ್ತಿರುವ ಕುರಿತು ಇನ್ನಷ್ಟು ಗಮನ ಸೆಳೆದ ಬಿಜೆಪಿ ಸದಸ್ಯ ಎನ್‌.ರವಿಕುಮಾರ್‌, ಕಳೆದ ಎರಡು ವರ್ಷದಲ್ಲಿ 1227 ವೈದ್ಯಕೀಯ ಸೀಟುಗಳನ್ನು ಖಾಸಗಿ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಗಿದ್ದು, ಎರಡು, ಮೂರು ಕಡೆಗಳಲ್ಲಿ ಸೀಟು ಸಿಕ್ಕ ವಿದ್ಯಾರ್ಥಿಗಳು ಕೊನೆಯ ದಿನ ಕೊನೆಯ ಕ್ಷಣ ತಮ್ಮ ಸೀಟುಗಳನ್ನು ಒಂದು ಕಡೆ ಬಿಟ್ಟು ಕೊಡುತ್ತಾರೆ. ಇಲ್ಲಿಯೇ ಅಕ್ರಮದ ವಾಸನೆ ಬರುತ್ತಿದ್ದು, ಇದರಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ಸರ್ಕಾರ ಕಾನೂನು ಲೋಪ ಸರಿಪಡಿಸುವಂತೆ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ|ಸುಧಾಕರ್‌, ಕಾನೂನು ಲೋಪಗಳನ್ನು ಕೂಡಲೇ ಸರಿಪಡಿಸಿಕೊಂಡು, ಇದೇ ವರ್ಷದಿಂದಲೇ ಯಾವುದೇ ಸರ್ಕಾರಿ ಕೋಟಾದ ಸೀಟು ಖಾಸಗಿಯವರ ಪಾಲಾಗದಂತೆ ತಡೆಯಲು ಸೂಕ್ತ ಮತ್ತು ಕಠಿಣ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ:ಕೇಂದ್ರದ ಒಪ್ಪಿಗೆ ದೊರೆತ ತಕ್ಷಣ ಪಶ್ಚಿಮ ಘಟ್ಟದ ಘಾಟ್‌ಗಳ ದುರಸ್ತಿ: ಸಿಸಿ ಪಾಟೀಲ್‌

Advertisement

ಖಾಸಗಿ ಕ್ಲಿನಿಕ್‌ ನಡೆಸುವ ಸರ್ಕಾರಿ ವೈದ್ಯರ ವಿರುದ್ಧ ಕ್ರಮ
ಸುವರ್ಣಸೌಧ: ಸರ್ಕಾರಿ ವೈದ್ಯರಾಗಿದ್ದುಕೊಂಡು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ಎಚ್ಚರಿಸಿದ್ದಾರೆ.

ಸೋಮವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿಯ ಮಹಾಂತೇಶ ಕವಟಗಿಮಠ ಅವರ ಪ್ರಶ್ನೆಗೆ ಉತ್ತರಿಸಿ, ರಾಜ್ಯದಲ್ಲಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವ ಸಲುವಾಗಿಯೇ ವಿಶೇಷ ಯೋಜನೆಗಳು ಜಾರಿಯಾಗುತ್ತಿವೆ. ಕೇಂದ್ರದ 15ನೇ ಹಣಕಾಸು ಆಯೋಗದ ಅನ್ವಯ ಮುಂದಿನ 5 ವರ್ಷಗಳಲ್ಲಿ ರಾಜ್ಯಕ್ಕೆ 2900 ಕೋಟಿ ರೂ.ಹಣ ಬರಲಿದ್ದು, ಎಲ್ಲಾ ಪ್ರಾಥಮಿಕ ಆರೊಗ್ಯ ಕೇಂದ್ರಗಳಲ್ಲಿಯೂ ಸಕಲ ಸೌಲಭ್ಯಗಳು ಸಿಕ್ಕಲಿವೆ. ಆರೋಗ್ಯ ವ್ಯವಸ್ಥೆಯೇ ಸುಧಾರಿಸಲಿದೆ ಎಂದು ತಿಳಿಸಿದರು.

ಬಿಜೆಪಿಯ ಲಕ್ಷ್ಮಣ ಸವದಿ ಮಾತನಾಡಿ, ಸರ್ಕಾರಿ ವೈದ್ಯರು ಇಲ್ಲಿ ಹಾಜರಿ ಹಾಕಿ ತಮ್ಮ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಈ ಕುರಿತು ಸರ್ಕಾರ ಗಮನ ಹರಿಸಬೇಕು ಎಂದರು. ಇದಕ್ಕೆ ಉತ್ತರಿಸಿದ ಸಚಿವರು, ಸರ್ಕಾರವೇ ನಿಗದಿಮಾಡಿರುವಂತೆ ಬೆಳಗ್ಗೆ 9.30 ರಿಂದ ಸಂಜೆ 4.30ರ ವರೆಗೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿರಬೇಕು. ಹಾಜರಾತಿ ಅಷ್ಟೇಯಲ್ಲ, ತಾಂತ್ರಿಕ ವ್ಯವಸ್ಥೆಯನ್ನು ಸದೃಢಗೊಳಿಸಿ ಅವರ ಮೊಬೈಲ್‌ಗ‌ಳಲ್ಲಿ ಜಿಪಿಎಸ್‌ ಅಳವಡಿಸುವುದು ಸೇರಿದಂತೆ ಅಗತ್ಯ ತಾಂತ್ರಿಕತೆಗಳನ್ನು ಅಳವಡಿಸಲಾಗುವುದು. ಸರ್ಕಾರಿ ವೈದ್ಯರಾಗಿದ್ದುಕೊಂಡು ಇದೇ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿ ದಯನೀಯವಾಗಿದೆ. ಆರೋಗ್ಯ ಸಚಿವರು ಈ ಭಾಗದ ಆರೋಗ್ಯ ಕೇಂದ್ರಗಳಿಗೆ ಕೂಡಲೇ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು ಎಂದು ಇದೇ ವೇಳೆ ಬಿಜೆಪಿಯ ಮಹಾಂತೇಶ ಕವಟಗಿಮಠ ಆಗ್ರಹಿಸಿದರು. ಸಚಿವರು ಭೇಟಿ ನೀಡುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next