– ಕೇಂದ್ರ ಆರೋಗ್ಯ ಇಲಾಖೆ ವತಿಯಿಂದ ನೇಮಿಸಲ್ಪಟ್ಟಿರುವ ಬಿಒಜಿ
– ಖಾಸಗಿ ಕಾಲೇಜು, ಡೀಮ್ಡ್ ವಿವಿಗಳಲ್ಲಿನ ಶುಲ್ಕ ಇಳಿಕೆಗೆ ಶಿಫಾರಸು
– ಈಗಿರುವ ಶುಲ್ಕಕ್ಕಿಂತ ಶೇ. 50ರಷ್ಟು ಕಡಿಮೆ ಶುಲ್ಕಕ್ಕೆ ಸಲಹೆ
Advertisement
ನವದೆಹಲಿ: ಖಾಸಗಿ ವೈದ್ಯ ಕಾಲೇಜುಗಳ ಬೋಧನಾ ಶುಲ್ಕವನ್ನು ಶೇ 70ರಿಂದ 90ರಷ್ಟು ಇಳಿಸುವ ಪ್ರಸ್ತಾವನೆಯನ್ನು “ಬೋರ್ಡ್ ಆಫ್ ಗವರ್ನರ್ಸ್’ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಈ ಶಿಫಾರಸು ಜಾರಿಗೆ ಬಂದರೆ, ಅತ್ಯಂತ ದುಬಾರಿ ಎನಿಸಿಕೊಂಡಿರುವ ವೈದ್ಯಕೀಯ ಶಿಕ್ಷಣ ಜನಸಾಮಾನ್ಯರ ಕೈಗೆಟುಕಲಿದೆ.
Related Articles
Advertisement
ಸದ್ಯಕ್ಕೆ ದೆಹಲಿ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಖಾಸಗಿ ಕಾಲೇಜುಗಳಲ್ಲಿ ಎಂಬಿಬಿಎಸ್‌ನ ವ್ಯಾಸಂಗಕ್ಕೆ ವಾರ್ಷಿಕ 25 ಲಕ್ಷ ರೂ. ಶುಲ್ಕ ಪಾವತಿಸಬೇಕಿದ್ದು, ಹೊಸ ನಿಯಮ ಜಾರಿಗೆ ಬಂದರೆ, ಇದು ವಾರ್ಷಿಕ 6ರಿಂದ 10 ಲಕ್ಷ ರೂ.ಗೆ ಇಳಿಯಲಿದೆ. ಇನ್ನು, ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕ ವಾರ್ಷಿಕವಾಗಿ 3 ಕೋಟಿ ರೂ.ಗಳಿದ್ದು, ಇದು 1 ಕೋಟಿ ರೂ.ಗಳಿಗೆ ಇಳಿಯಬಹುದೆಂದು ನಿರೀಕ್ಷಿಸಲಾಗಿದೆ.
ದೇಶದಲ್ಲಿರುವ ಒಟ್ಟು ಎಂಬಿಬಿಎಸ್ ಸೀಟುಗಳ ಪೈಕಿ ಶೇ.50ರಷ್ಟು ಸೀಟುಗಳು ಇರುವುದು ಸರ್ಕಾರಿ ಕಾಲೇಜುಗಳಲ್ಲಿ. ಇಲ್ಲಿ ಅತ್ಯಲ್ಪ ಶುಲ್ಕ ವಿಧಿಸಲಾಗುತ್ತದೆ.2018ರಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ, ಅದರ ಬದಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ವನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಿದೆ. ಆ ಪ್ರಕ್ರಿಯೆಯಿನ್ನೂ ಪ್ರಗತಿ ಹಂತದಲ್ಲಿರುವುದರಿಂದ ದೇಶದ ವೈದ್ಯಕೀಯ ಶಿಕ್ಷಣದ ಮೇಲುಸ್ತುವಾರಿಗಾಗಿ ಬಿಒಜಿಯನ್ನು ನೇಮಿಸಿದೆ. ಜತೆಗೆ, ಶುಲ್ಕ ನಿಗದಿಗೆ ಸಂಬಂಧಿಸಿದ ಕರಡು ಮಾರ್ಗಸೂಚಿಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನೂ ಬಿಒಜಿಗೆ ವಹಿಸಲಾಗಿದೆ. ಎಷ್ಟಿದೆ, ಎಷ್ಟಾಗಬಹುದು?
ಸ್ನಾತಕ ಕೋರ್ಸ್‌ಗಳ ಹಾಲಿ ಶುಲ್ಕ- 25 ಲಕ್ಷ ರೂ.
ಹೊಸ ನಿಯಮ ಜಾರಿಯಾದರೆ ಶುಲ್ಕ- 6-10 ಲಕ್ಷ ರೂ.
ಸ್ನಾತಕೋತ್ತರ ಕೋರ್ಸ್‌ಗಳ ಹಾಲಿ ಶುಲ್ಕ – 3 ಕೋಟಿ ರೂ.
ಹೊಸ ನಿಯಮ ಜಾರಿಯಾದರೆ – 1 ಕೋಟಿ ರೂ.