ಬೆಂಗಳೂರು:ವೈದ್ಯಕೀಯ ಕೋರ್ಸ್‌ಗಳ ಸಿಇಟಿ ಸೀಟು ಹಂಚಿಕೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆಯಲ್ಲಿ ಗೋಲ್ ಮಾಲ್ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಭೇಟಿ ನೀಡಿ, ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಖುದ್ದು ಪರಿಶೀಲನೆ ನಡೆಸಿ, ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೈದ್ಯಕೀಯ ಸೀಟುಗಳ ಪ್ರವೇಶಾತಿಯಲ್ಲಿ ಪಾರದರ್ಶಕವಾಗಿ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸುತ್ತಿದೆ. ಹೀಗಾಗಿ ಸರ್ಕಾರ ಮಧ್ಯ ಪ್ರವೇಶ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಕೌನ್ಸೆಲಿಂಗ್‌ನ ಕೊನೆಯ ದಿನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸೀಟು ಹಂಚಿಕೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಸಮರ್ಥಿಸಿಕೊಂಡರು.
ಈಗಾಗಲೇ 49 ವೈದ್ಯಕೀಯ ಕಾಲೇಜುಗಳಿಗೆ 6260 ಸೀಟ್‌ಗಳಿಗೆ ಕೌನ್ಸೆಲಿಂಗ್ ನಡೆದಿದೆ. ಉಳಿದಿರುವ 740 ಸೀಟ್‌ಗಳಿಗೆ ಕೊನೆಯ ಹಂತದ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳು ಕರ್ನಾಟಕದ ಕೌನ್ಸೆಲಿಂಗ್ ಪದ್ಧತಿಯನ್ನು ಅನುಸರಿಸುತ್ತಿವೆ. ಕಾನೂನು ಪ್ರಕಾರ ಯಾವುದೇ ಸೀಟು ಹಂಚಿಕೆಯಲ್ಲಿ ವ್ಯತ್ಯಾಸವಾಗಿಲ್ಲ. ಸೆಪ್ಟಂಬರ್ 15 ರೊಳಗೆ ಉಳಿದಿರುವ 772 ಡೆಂಟಲ್ ಸೀಟ್‌ಗಳಿಗೂ ಕೌನ್ಸೆಲಿಂಗ್ ಪ್ರಕ್ರಿಯೆ ಮುಕ್ತಾಯಗೊಳಿಸಲಾಗುವುದು ಎಂದು ಹೇಳಿದರು.
ಅಲ್ಲದೇ ಮಾನ್ಯತೆ ರದ್ದಾಗಿರುವ ಆಕಾಶ್, ಆಕ್ಸಫರ್ಡ್, ಸಂಭ್ರಮ್ ಹಾಗೂ ಶ್ರೀದೇವಿ ಕಾಲೇಜುಗಳ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ನಾಲ್ಕು ಕಾಲೇಜುಗಳಲ್ಲಿ 600 ವೈದ್ಯಕೀಯ ಸೀಟುಗಳು ಲಭ್ಯವಿದ್ದು, ಸುಪ್ರೀಂ ಕೋರ್ಟ್ ಕಾಲೇಜುಗಳಿಗೆ ಅನುಮತಿ ನೀಡಿದರೆ, ಆ ಸೀಟುಗಳಿಗೂ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಹೇಳಿದರು.
ಶುಲ್ಕ ಹೆಚ್ಚಳ ಸಮರ್ಥನೆ: ಸರ್ಕಾರಿ ಮೆಡಿಕಲ್ ಕಾಲೇಜುಗಳ ಪ್ರವೇಶ ಶುಲ್ಕವನ್ನು 16 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಳ ಮಾಡಿರುವುದನ್ನು ಸಚಿವರು ಸಮರ್ಥಿಸಿಕೊಂಡರು. ಎಲ್‌ಕೆಜಿ, ಯುಕೆಜಿ ಶಾಲೆಗೆ ಸೇರಿಸಲು ಕನಿಷ್ಠ 50 ಸಾವಿರ ಹಣ ಕೊಡುತ್ತಾರೆ. ಮೆಡಿಕಲ್ ಕೋರ್ಸ್ ಸೇರುವವರಿಗೆ 50 ಸಾವಿರ ಕಟ್ಟುವುದು ಕಷ್ಟವೇ ? ವೈದ್ಯರಾದ ಮೇಲೆ ಅವರ ಸಂಬಳ ಎಷ್ಟು ಗೊತ್ತಾ ಎಂದು ಸಚಿವರು ಮರು ಪ್ರಶ್ನೆ ಮಾಡಿದರು.
ಕೇರಳ ಹಾಗೂ ಮಡಿಕೇರಿಯಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಕೌನ್ಸೆಲಿಂಗ್‌ಗೆ ತಡವಾಗಿ ಆಗಮಿಸಿ ಅವಕಾಶ ವಂಚಿತರಾದವರಿಗೆ ಮತ್ತೂಂದು ಅವಕಾಶ ನೀಡಲು ಸಾಧ್ಯವಿಲ್ಲ. ಪ್ರವಾಹ ಪೀಡಿತ ಪ್ರದೇಶಗಳ ವಿದ್ಯಾರ್ಥಿಗಳು ತಮಗೆ ಮತ್ತೂಂದು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿಲ್ಲ. ಅದು ಅವರ ವಯಕ್ತಿಕ ಸಮಸ್ಯೆಯಾಗಿರುವುದರಿಂದ ಈ ವಿಷಯದಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದರು.