ನವದೆಹಲಿ: ವಿಕೃತ ಕಾಮಿ ಉಮೇಶ್ ರೆಡ್ಡಿಯ (ಬಿ.ಎ.ಉಮೇಶ್) ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿ ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
“ಬರೋಬ್ಬರಿ 10 ವರ್ಷಗಳ ಕಾಲ ಬೆಳಗಾವಿ ಜೈಲಿನಲ್ಲಿ ಆತನನ್ನು ಏಕಾಂತ ಬಂಧನದಲ್ಲಿ ಇಟ್ಟಿದ್ದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಇದು ಆತನ ಕ್ಷೇಮಾಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದೆ’ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಆತನಿಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದೆ.
ಆದರೆ, ಉಮೇಶ್ ರೆಡ್ಡಿ ಕನಿಷ್ಠ 30 ವರ್ಷಗಳ ಶಿಕ್ಷೆಯನ್ನು ಅನುಭವಿಸಲೇಬೇಕು ಎಂದೂ ಹೇಳಿದೆ.
ಮಹಿಳೆಯೊಬ್ಬರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಉಮೇಶ್ ರೆಡ್ಡಿಗೆ 2006ರಲ್ಲಿ ವಿಚಾರಣಾ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ನಂತರ 2011ರಲ್ಲಿ ಆತನ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಆತ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು 2013ರ ಮೇ 12ರಂದು ರಾಷ್ಟ್ರಪತಿಗಳು ವಜಾ ಮಾಡಿದ್ದರು. ಅದನ್ನು ಪ್ರಶ್ನಿಸಿ ಉಮೇಶ್ ರೆಡ್ಡಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ. ಆದರೆ, ಆತ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ ಕಾರಣ, ಮತ್ತೆ ಆತ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ.
2006ರಿಂದ 2016ರವರೆಗೆ ಅಂದರೆ 10 ವರ್ಷ ಕಾಲ ತನ್ನನ್ನು ಬೆಳಗಾವಿಯ ಜೈಲಿನ ಕತ್ತಲ ಕೋಣೆಯಲ್ಲಿ ಇಡಲಾಗಿತ್ತು ಎಂದು ಆತ ತಿಳಿಸಿದ್ದು, ಅದನ್ನು ಗಮನಿಸಿದ ನ್ಯಾಯಾಲಯ, “ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ’ ಎಂದು ಹೇಳಿದ್ದಲ್ಲದೇ, ಆತನ ಗಲ್ಲುಶಿಕ್ಷೆಯನ್ನು ಜೀವಾವಧಿಗೆ ಇಳಿಸಿದೆ.