ಬೆಂಗಳೂರು: ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಗೊಳಿಸುವ ವಿಷಯದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಒತ್ತಡಕ್ಕೆ ಮಣಿಯದಂತೆ ಸಂಪುಟದಲ್ಲಿ ಕೆಲವು ಸಚಿವರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಉಪ ಮುಖ್ಯಮಂತ್ರಿ ಡಾ| ಸಿ.ಎನ್.ಅಶ್ವತ್ಥ್ ನಾರಾಯಣ್ ಸಹಿತ ಹಲವು ಸಚಿವರು, ವೈದ್ಯಕೀಯ ಕಾಲೇಜು ಸ್ಥಳಾಂತರದ ಬಗ್ಗೆ ಮತ್ತೆ ನಿಲುವು ಬದಲಿಸುವುದು ಬೇಡ ಎಂದು ಮುಖ್ಯಮಂತ್ರಿ ಯವರಿಗೆ ತಿಳಿಸಿದರು.
ಇದಕ್ಕೆ ಸಿಎಂ ಯಡಿಯೂರಪ್ಪ ಅವರು ಸಹ ತಾಲೂಕಿಗೆ ಒಂದು ವೈದ್ಯಕೀಯ ಕಾಲೇಜು ಕೊಡಲು ಆಗುವುದಿಲ್ಲ. ಈಗಾಗಲೇ ರಾಮನಗರಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮಂಜೂರಾತಿ ಆಗಿದೆ ಎಂದು ಹೇಳಿದರು ಎನ್ನಲಾಗಿದೆ.
ಉಪ ಮುಖ್ಯಮಂತ್ರಿ ಡಾ|ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು, ಡಿ.ಕೆ.ಶಿವಕುಮಾರ್ ಪ್ರತಿಭಟನೆ ಮಾಡಲಿ, ಉಪವಾಸ ಸತ್ಯಾಗ್ರಹ ಮಾಡಲಿ, ಯಾವುದೇ ಕಾರಣಕ್ಕೂ ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ಸ್ಥಳಾಂತರಿಸಿರುವ ನಿರ್ಧಾರದಿಂದ ಹಿಂದೆ ಸರಿಯವುದು ಬೇಡ ಎಂದು ಹೇಳಿದರು. ಇದಕ್ಕೆ ಹಲವು ಸಚಿವರು ಸಹಮತ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಡಾ| ಸುಧಾಕರ್ ಬೇಡಿಕೆಗೆ ಒಪ್ಪಿಗೆ: ಮಂಚೇನಹಳ್ಳಿ ಹೊಸ ತಾಲೂಕು
ಅನರ್ಹಗೊಂಡಿರುವ ಶಾಸಕ ಡಾ| ಕೆ. ಸುಧಾಕರ್ ಅವರ ಬೇಡಿಕೆಯಾದ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ಪ್ರತ್ಯೇಕ ತಾಲೂಕು ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮಾಜಿ ಸಚಿವ ಶಿವಶಂಕರ ರೆಡ್ಡಿ ಅವರ ತೀವ್ರ ವಿರೋಧದ ಹೊರತಾಗಿಯೂ ಪ್ರತ್ಯೇಕ ತಾಲೂಕು ರಚನೆ ಸಂಬಂಧ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಡಾ| ಸುಧಾಕರ್ ಅವರ ಎರಡೂ ಬೇಡಿಕೆಗಳು ಈಡೇರಿದಂತಾಗಿದೆ.