Advertisement

ಕನಕಪುರಕ್ಕೂ ಮೆಡಿಕಲ್‌ ಕಾಲೇಜು ನೀಡುವೆ

09:56 AM Nov 10, 2019 | Lakshmi GovindaRaju |

ಚಿಕ್ಕಬಳ್ಳಾಪುರ/ಮಾಗಡಿ: “ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜನ್ನು ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಿ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಶಾಸಕ ಡಿ.ಕೆ.ಶಿವಕುಮಾರ್‌ ಮತ್ತು ನಾನು ಆತ್ಮೀಯ ಸ್ನೇಹಿತರು. ಅವರೊಂದಿಗೆ ಸಮಾಲೋಚಿಸಿ, ಕನಕಪುರಕ್ಕೂ ಮೆಡಿಕಲ್‌ ಕಾಲೇಜು ಮಂಜೂರು ಮಾಡುವೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

Advertisement

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರ ದಲ್ಲಿ ಶುಕ್ರವಾರ ಡಾ.ಶಿವಕುಮಾರಸ್ವಾಮೀಜಿ ಅವರ 111 ಅಡಿ ಎತ್ತರದ ಬೃಹತ್‌ ಪ್ರತಿಮೆ ಸ್ಥಾಪನೆ ಮತ್ತು ಸಾಂಸ್ಕೃತಿಕ ಹಾಗೂ ಪಾರಂಪರಿಕ ಗ್ರಾಮೀಣಾಭಿ ವೃದ್ಧಿಯ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪರೋಪಕಾರಕ್ಕಾಗಿ ಜನಿಸಿದ ಮಹಾಪುರುಷರು: ಸಿದ್ದಲಿಂಗ ಸ್ವಾಮೀಜಿ: ಸಾನ್ನಿಧ್ಯ ವಹಿಸಿ ಮಾತನಾಡಿದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರವನ್ನು ಸುವರ್ಣಾಕ್ಷರದಲ್ಲಿ ಬರೆದಿಡುವ ಕ್ಷಣ ಇದು. ಲೋಕದ ಹಿತಕ್ಕಾಗಿ ಶ್ರೀಗಳು ಹುಟ್ಟಿದ ಭೂಮಿ, ಹೆತ್ತ ತಾಯಿ ಮತ್ತು ಸಲುಹಿ ಸಂಸ್ಕಾರ ಕೊಟ್ಟ ತಂದೆ ಈ ಮೂವರು ಎಂದೆಂದೂ ಸ್ಮರಣೀಯರು ಎಂದರು. ಮರ, ಗಿಡ, ನದಿ, ಇವೆಲ್ಲವೂ ಪರೋಪಕಾರಕ್ಕಾಗಿಯೇ ಇರುವುದು. ಅದೇ ರೀತಿ ಡಾ.ಶಿವಕುಮಾರ ಸ್ವಾಮೀಜಿ ಅವರು ಜಗತ್ತಿನ ಪರೋಪಕಾರಕ್ಕಾಗಿ ಜನಿಸಿದ ಮಹಾಪುರುಷರು ಎಂದರು.

ಮಠ ಮಾನ್ಯಗಳಿಗೆ ಯಡಿಯೂರಪ್ಪ ಅವರು ವಿಶೇಷ ಅನುದಾನವನ್ನು ಕೊಟ್ಟು, ಅಭಿವೃದ್ಧಿಪಡಿಸುವ ಮೂಲಕ ಸಮಾಜಕ್ಕೆ ಗೌರವವನ್ನು ತಂದುಕೊಟ್ಟಿದ್ದಾರೆ. ಇದರಿಂದಾಗಿ ಮಠಮಾನ್ಯಗಳ ನಿರ್ವಹಣೆಗೆ ಅನುಕೂಲವಾಗಿದೆ. ಯಡಿಯೂರಪ್ಪ ಸಿಎಂ ಆದಾಗಲೆಲ್ಲ ನೀರಿಗೆ ಬರವಿಲ್ಲ, ನೆರೆ ಹಾವಳಿಗೂ ಪರಿಹಾರ ನೀಡಿದ್ದಾರೆ. ರೈತರ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ನೆರೆ ಸಂತ್ರಸ್ತರ ಸಿಎಂ ಪರಿಹಾರ ನಿಧಿಗೆ ಸಿದ್ದಗಂಗಾ ಮಠ 50 ಲಕ್ಷ ರೂ.ನೆರವು ನೀಡಿದೆ ಎಂದರು.

ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್‌ ಕಾಲೇಜಿಗೆ ಶಂಕು: ಚಿಕ್ಕಬಳ್ಳಾಪುರದಲ್ಲಿ 710 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಯಡಿಯೂರಪ್ಪ , “ಈ ಹಿಂದೆ ನಾನು ಸಿಎಂ ಆಗಿದ್ದಾಗ ಬಲಿಜ ಸಮಾಜಕ್ಕೆ ಶಿಕ್ಷಣದಲ್ಲಿ “2ಎ’ ಮೀಸಲು ಕಲ್ಪಿಸಿದ್ದೆ. ಈಗ ಉದ್ಯೋಗದಲ್ಲಿ ಮೀಸಲಾತಿ ಬೇಕೆಂದು ಬಲಿಜ ಸಮುದಾಯ ಕೇಳುತ್ತಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಪರಿಶೀಲನೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಿದೆ.

Advertisement

ಬಲಿಜ ಸಮಾಜಕ್ಕೆ ಶಿಕ್ಷಣದಲ್ಲಿ ಕಲ್ಪಿಸಲಾಗಿರುವ “2ಎ’ ಮೀಸಲಾತಿ ಸೌಲಭ್ಯವನ್ನು ಉದ್ಯೋಗಾವಕಾಶಕ್ಕೂ ವಿಸ್ತರಿಸುವ ಬಗ್ಗೆ ಸರ್ಕಾರ ಪರಾಮರ್ಶೆ ನಡೆಸಿ, ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಸುಧಾಕರ್‌ಗೆ ಮತ್ತೂಮ್ಮೆ ಅವಕಾಶ ಮಾಡಿಕೊಡಿ ಎನ್ನುವ ಮೂಲಕ ಸರ್ಕಾರಿ ಕಾರ್ಯಕ್ರಮದಲ್ಲಿ ಪರೋಕ್ಷವಾಗಿ ಉಪ ಚುನಾವಣೆಯ ಜಪ ಮಾಡಿದರು. ಕಾರ್ಯಕ್ರಮ ದಲ್ಲಿ ಯಡಿಯೂರಪ್ಪನವರು, ಸುಮಾರು 59 ಕಾಮಗಾರಿ ಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.

ಬಿಎಸ್‌ವೈ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ: ಯಡಿಯೂರಪ್ಪನವರನ್ನು ಇನ್ನು ಮೂರೂ ವರೆ ವರ್ಷ ಯಾರೂ ಕೂಡ ಅಲುಗಾಡಿಸಲಿಕ್ಕೆ ಆಗುವು ದಿಲ್ಲ. ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಅವರ ಬೆಂಬಲಕ್ಕೆ ನಾವೆಲ್ಲಾ ಇದ್ದೇವೆ ಎಂದು ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ಹೇಳಿದರು. ಯಡಿಯೂರಪ್ಪ ಹುಟ್ಟು ಹೋರಾಟ ಗಾರರು, ರೈತಪರ ನಾಯಕರು ಎಂದು ಸುಧಾಕರ್‌ ಬಣ್ಣಿಸಿದರು.

111 ಅಡಿ ಎತ್ತರದ ಬೃಹತ್‌ ಪ್ರತಿಮೆ: ಮಾಗಡಿ ತಾಲೂಕಿನ ಕುದೂರು ಹೋಬಳಿ ವೀರಾಪುರ ಗ್ರಾಮದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ 111 ಅಡಿ ಎತ್ತರದ ಬೃಹತ್‌ ಪ್ರತಿಮೆಯನ್ನು 2 ವರ್ಷದೊಳಗೆ ಸ್ಥಾಪಿಸಿ, ಲೋಕಾರ್ಪ ಣೆಗೊಳಿಸಲಾಗುವುದು. 80 ಕೋಟಿ ರೂ.ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುವುದು. ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಅವರು ನಿರ್ಮಿಸಿರುವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಪ್ರತಿಮೆಯ ಮಾದರಿಯಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆ ಇರಲಿದೆ. ಪ್ರತಿಮೆ ಲೋಕಾರ್ಪಣೆ ವೇಳೆ ಸುಮಾರು 50 ಸಾವಿರ ಜನರನ್ನು ಸೇರಿಸಿ, ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ನಡೆದಾಡುವ ದೇವರು ಸಿದ್ದಗಂಗಾ ಮಠದ ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರು ನಡೆಸಿದ ತ್ರಿವಿಧ ಕಾರ್ಯಕ್ರಮಗಳು ಸ್ಮರಣೀಯವಾದುದು. ಅವರ ಹುಟ್ಟೂರು ವೀರಾಪುರವನ್ನು ಧಾರ್ಮಿಕ, ಭಕ್ತಿ, ಅಧ್ಯಯನ ಮತ್ತು ಸಾಂಸ್ಕೃತಿಕ ಸ್ಮರಣಾರ್ಥಕ ಸ್ಥಳವನ್ನಾಗಿಸುವುದು ನಮ್ಮೆಲ್ಲರ ಹೊಣೆ. ಅಂದಾಜು 80 ಕೋಟಿ ರೂ.ಗೂ ಅಧಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ವೀರಾಪುರದಲ್ಲಿ ರೂಪಿಸಲಾಗಿದೆ.
-ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next