Advertisement

ಮೆಡಿಕಲ್‌ ಕಾಲೇಜು ಕಟ್ಟಡ ಕಾಮಗಾರಿಗೆ ಹಿನ್ನಡೆ

04:10 PM Nov 14, 2022 | Team Udayavani |

ಹಾವೇರಿ: ನಿರಂತರ ಸುರಿದ ಮಳೆಯಿಂದಾಗಿ ಹಾವೇರಿ ಮೆಡಿಕಲ್‌ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಹಿನ್ನಡೆಯಾಗಿದ್ದು, ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಕ್ಷಿಣಿಸಿದೆ. ಆದರೆ, ಆಡಳಿತಾತ್ಮಕ ಕಟ್ಟಡ ಮತ್ತು ತರಗತಿ ನಡೆಸಲು ಅಗತ್ಯವಿರುವ ಶೈಕ್ಷ‌ಣಿಕ ಕಟ್ಟಡ ತ್ವರಿತವಾಗಿ ಪೂರ್ಣಗೊಳಿಸಿ ಹೊಸ ಕಟ್ಟಡದಲ್ಲೇ ವೈದ್ಯಕೀಯ ತರಗತಿ ಆರಂಭಿಸಲು ಭರದ ಸಿದ್ಧತೆ ನಡೆದಿದೆ.

Advertisement

ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಹೈದರಾಬಾದ್‌ ಮೂಲದ ಗುತ್ತಿಗೆದಾರರಿಗೆ ವಹಿಸಿ ನವೆಂಬರ್‌ಗೆ ಎರಡು ವರ್ಷಗಳು ಆಗಲಿವೆ. ಒಪ್ಪಂದದ ಪ್ರಕಾರ 24ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ, ನಿರಂತರವಾಗಿ ಬೀಳುತ್ತಿದ್ದ ಮಳೆಯಿಂದಾಗಿ ಕಾಮಗಾರಿ ನಿರೀಕ್ಷಿತ ಪ್ರಮಾಣದಲ್ಲಿ ಮುಗಿದಿಲ್ಲ. ಈಗಾಗಲೇ ಆಲ್‌ ಇಂಡಿಯಾ ಖೋಟಾದಡಿ ಹಾವೇರಿ ಮೆಡಿಕಲ್‌ ಕಾಲೇಜಿಗೆ ಅನೇಕ ವಿದ್ಯಾರ್ಥಿಗಳಿಗೆ ಸೀಟ್‌ ಅಲಾಟ್‌ಮೆಂಟ್‌ ಆಗಿದೆ. ಇನ್ನು ರಾಜ್ಯಮಟ್ಟದ ಕೌನ್ಸೆಲಿಂಗ್‌ನಲ್ಲಿ ಕೌನ್ಸೆಲಿಂಗ್‌ ಪ್ರಕ್ರಿಯೆ ಆಗಬೇಕಿದೆ. ಅದಾದ ಬಳಿಕ ತರಗತಿ ಆರಂಭವಾಗಬೇಕಿದೆ. ಅದಕ್ಕಾಗಿ ಸದ್ಯಕ್ಕೆ ತರಗತಿ ನಡೆಸಲು ಅಗತ್ಯ ವ್ಯವಸ್ಥೆಯನ್ನು ಹೊಸ ಕ್ಯಾಂಪಸ್‌ನಲ್ಲೇ ಮಾಡಲು ನಿರ್ಧರಿಸಲಾಗಿದೆ. ಡಿಸೆಂಬರ್‌ ಒಳಗಾಗಿ ಸಂಪೂರ್ಣ ಕಟ್ಟಡ ಕಾಮಗಾರಿ ಪೂರ್ತಿಗೊಳ್ಳುವ ಸಾಧ್ಯತೆಯಿಲ್ಲ. ಆದರೆ, ಶೀಘ್ರದಲ್ಲೇ ತರಗತಿ ಆರಂಭವಾಗಲಿರುವುದರಿಂದ ಶೈಕÒ‌ಣಿಕ ವಿಭಾಗವನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ. ಜತೆಗೆ, ಆಡಳಿತಾತ್ಮಕ ಭವನವನ್ನೂ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ.

22 ವಿದ್ಯಾರ್ಥಿಗಳಿಗೆ ಸೀಟ್‌: ಪ್ರಸಕ್ತ ಶೈಕ್ಷ‌ಣಿಕ ಸಾಲಿನಿಂದಲೇ ಇಲ್ಲಿಯ ಮೆಡಿಕಲ್‌ ಕಾಲೇಜಿನಲ್ಲಿ ತರಗತಿ ಆರಂಭಕ್ಕೆ ಭಾರತೀಯ ಮೆಡಿಕಲ್‌ ಕೌನ್ಸೆಲ್‌ ಅನುಮತಿ ನೀಡಿದೆ. ಮೆಡಿಕಲ್‌ ಕಾಲೇಜು ಪ್ರವೇಶಕ್ಕೆ ನೀಟ್‌ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಆಲ್‌ ಇಂಡಿಯಾ ಖೋಟಾದಡಿ ಶೇ.15ರಷ್ಟು ಹಾಗೂ ಕೆಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ರಾಜ್ಯದ ಖೋಟಾದಡಿ ಶೇ.85ರಷ್ಟು ಸೀಟು ಭರ್ತಿ ಮಾಡಲಾಗುತ್ತದೆ. ಅದರಂತೆ, ಈಗಾಗಲೇ ಆಲ್‌ ಇಂಡಿಯಾ ಖೋಟಾದಡಿ 22 ವಿದ್ಯಾರ್ಥಿಗಳಿಗೆ ಹಾವೇರಿ ಮೆಡಿಕಲ್‌ ಕಾಲೇಜಿಗೆ ಸೀಟ್‌ ಅಲಾಟ್‌ಮೆಂಟ್‌ ಆಗಿದೆ. ಒಟ್ಟು 150 ಮೆಡಿಕಲ್‌ ವಿದ್ಯಾರ್ಥಿಗಳಿಗೆ ಹಾವೇರಿ ಮೆಡಿಕಲ್‌ ಕಾಲೇಜಿನಲ್ಲಿ ಅವಕಾಶ ಲಭ್ಯವಾಗಲಿದೆ. ದೇವಗಿರಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತರಗತಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದರೂ ಹೊಸ ಕಟ್ಟಡದಲ್ಲೇ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ.

56 ಎಕರೆ ಪ್ರದೇಶದಲ್ಲಿ ಮೆಡಿಕಲ್‌ ಕಾಲೇಜು ಕಟ್ಟಡ ಕಾಮಗಾರಿ ಆರಂಭವಾಗಿದೆ. 2020ರ ನವೆಂಬರ್‌ನಲ್ಲೇ ಕಾಮಗಾರಿ ಆರಂಭವಾಗಿದ್ದು, ಕಾಲೇಜು ಕಟ್ಟಡ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯ, ಸಿಬ್ಬಂದಿ ವಸತಿ ಗೃಹ ಸೇರಿದಂತೆ 8 ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ. 327 ಕೋಟಿ ರೂ., ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು, ಕೆಬಿಆರ್‌ ಇನ್‌ಫ್ರಾಟೆಕ್‌ ಕಂಪನಿಯವರಿಗೆ ಗುತ್ತಿಗೆ ನೀಡಲಾಗಿದೆ. ಆದರೆ, ನಿರಂತರವಾಗಿ ಸುರಿದ ಮಳೆಯಿಂದ ಕಾಮಗಾರಿಗಳಿಗೆ ಅಡ್ಡಿಯಾಗಿದೆ.

ಮೆಡಿಕಲ್‌ ಕಾಲೇಜು ಆರಂಭಕ್ಕೆ ಅಗತ್ಯವಿರುವ ಬೋಧಕ ಮತ್ತು ಬೋಧಕೇತರ ಹುದ್ದೆ ನೇಮಕ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ. ಈಗಾಗಲೇ ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆ ಮುಗಿದಿದೆ. 5 ಪ್ರೊಫೆಸರ್‌, 17 ಅಸೋಸಿಯೇಟ್‌ ಪ್ರೊಫೆಸರ್‌, 31 ಅಸಿಸ್ಟಂಟ್‌ ಪ್ರೊಫೆಸರ್‌, 14 ಸೀನಿಯರ್‌ ರೆಸಿಡೆಂಟ್‌ ಹಾಗೂ 12 ಟ್ಯೂಟರ್ಸ್‌ ಸೇರಿದಂತೆ 79 ಹುದ್ದೆ ನೇಮಕಾತಿಗೆ ಈಗಾಗಲೇ ಸಂದರ್ಶನ ಪೂರ್ಣಗೊಂಡಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಇದರಲ್ಲಿ 53 ಕಾಯಂ ಹುದ್ದೆಗಳಿಗೆ ಮತ್ತು 26 ಗುತ್ತಿಗೆ ಆಧಾರದ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ತರಗತಿ ಆರಂಭವಾಗುವ ಮುನ್ನ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.  –ಡಾ| ಉದಯ ಮುಳಗುಂದ, ಮೆಡಿಕಲ್‌ ಕಾಲೇಜು ಆಡಳಿತಾಧಿಕಾರಿ

Advertisement

ಮೆಡಿಕಲ್‌ ಕಾಲೇಜು ಕಟ್ಟಡ ಕಾಮಗಾರಿ ಈಗ ಚುರುಕಾಗಿ ನಡೆಯುತ್ತಿದೆ. ಶೈಕÒ‌ಣಿಕ ಭವನ ಮತ್ತು ಆಡಳಿತಾತ್ಮಕ ಭವನ ನಿರ್ಮಾಣವನ್ನು ತಿಂಗಳೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಅಲ್ಲದೇ, ಅಲ್ಲಿಯೇ ವೈದ್ಯಕೀಯ ತರಗತಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ದೇವಗಿರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ.  -ಮಹಮ್ಮದ್‌ ರೋಷನ್‌, ಜಿಪಂ ಸಿಇಒ (ಮೆಡಿಕಲ್‌ ಕಾಲೇಜು ನಿರ್ಮಾಣ ಉಸ್ತುವಾರಿ)

 

Advertisement

Udayavani is now on Telegram. Click here to join our channel and stay updated with the latest news.

Next