ಹೊಸದಿಲ್ಲಿ : ಬಹುಕೋಟಿ ಬ್ಯಾಂಕ್ ಸಾಲ ಸುಸ್ತಿಗಾರನಾಗಿ ದೇಶದಿಂದ ಪಲಾಯನಗೈದು ಪ್ರಕೃತ ಲಂಡನ್‌ನಲ್ಲಿ ವಾಸವಾಗಿರುವ ಎನ್‌ಆರ್‌ಐ ಮದ್ಯದೊರೆ ವಿಜಯ್ ಮಲ್ಯ ಅವರಿಂದು ಮಾಡಿರುವ ಸರಣಿ ಟ್ವೀಟ್‌ನಲ್ಲಿ “ಎನ್‌ಡಿಎ ಮತ್ತು ಯುಪಿಎ ಎಂಬ ಎರಡು ಭಯಾನಕ ತಂಡಗಳು ಮಾಧ್ಯಮವನ್ನು ಅಂಗಣವನ್ನಾಗಿ ಮಾಡಿಕೊಂಡು ನನ್ನನ್ನು ಫುಟ್ಬಾಲ್ ಆಗಿ ಬಳಸಿಕೊಂಡು ಆಟವಾಡುತ್ತಿವೆ ‘ ಎಂದು ಆರೋಪಿಸಿದ್ದಾರೆ.
ಏರ್‌ಸೆಲ್ ಹಗರಣದಲ್ಲಿ ಮಾರನ್ ಸಹೋದರರಿಗೆ ಕ್ಲೀನ್ ಚಿಟ್ ಸಿಕ್ಕಿರುವುದನ್ನು ಉಲ್ಲೇಖೀಸಿರುವ ವಿಜಯ್ ಮಲ್ಯ, ಸಿಬಿಐ ತನಿಖೆಯಿಂದ ಸತ್ಯ ಹೊರಬಂತೇ, ಮಾರನ್ ಉಳಿದರೇ, ಸಿಬಿಐ ಉಳಿಯಿತೇ ಎಂದು ಕಟಕಿಯಾಡಿದ್ದಾರೆ.
ವಿಜಯ್ ಮಲ್ಯ ಅವರಿಗೆ ಯುಪಿಎ ಸರಕಾರದಲ್ಲಿ ಅಧಿಕಾರಿ ವರ್ಗದವರು ನಿಯಮ ಮೀರಿ ನೂರಾರು ಕೋಟಿ ರೂ.ಗಳ ಬ್ಯಾಂಕ್ ಸಾಲವನ್ನು ಕೇವಲ 24 ತಾಸುಗಳಲ್ಲಿ ಒದಗಿಸಿದ್ದಾರೆ ಎಂದು ನೆಟ್‌ವರ್ಕ್ 18 ಮಾಡಿರುವ ಎರಡನೇ ಕಂತಿನ ವರದಿಗೆ ಮಲ್ಯ ಈ ರೀತಿಯ ಪ್ರತಿಕ್ರಿಯೆಯನ್ನು ಟ್ವಿಟರ್‌ನಲ್ಲಿ ನೀಡಿದ್ದಾರೆ.
Related Articles
ವಿಜಯ್ ಮಲ್ಯ ಅವರ ಈಗ ಮುಚ್ಚಿಹೋಗಿರುವ ಕಿಂಗ್ ಫಿಶರ್ ಏರ್‌ಲೈನ್ಸ್ ವಿಮಾನ ಸಂಸ್ಥೆಯು ವಿವಿಧ ಬ್ಯಾಂಕುಗಳಿಗೆ 9,000 ಕೋಟಿ ರೂ. ಮೀರಿದ ಸಾಲವನ್ನು ಬಾಕಿ ಇರಿಸಿದೆ.
ತನ್ನ ವಿರುದ್ಧ ಬ್ಯಾಂಕುಗಳು ಕಟ್ಟುನಿಟ್ಟಿನ ಸಾಲ ವಸೂಲಾತಿ ಕ್ರಮಕ್ಕೆ ಮುಂದಾಗುವುದನ್ನು ಮುಂಗಾಣುತ್ತಲೇ ವಿಜಯ್ ಮಲ್ಯ ಅವರು ಕಳೆದ ವರ್ಷ ಮಾರ್ಚ್ 21ರಂದು ದೇಶದಿಂದ ಪಲಾಯನ ಮಾಡಿದ್ದರು.