ನವದೆಹಲಿ:”ಟಿವಿ ಚರ್ಚೆಗಳು ಮತ್ತು ಸಾಮಾಜಿಕ ಜಾಲತಾಣಗಳು ತಮ್ಮ ಮೂಗಿನ ನೇರಕ್ಕೆ “ಕಾಂಗರೂ ಕೋರ್ಟ್’ಗಳು ನಮ್ಮ ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದೆ’ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸಿ.ಜೆ.ರಮಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಇಂಥ ಪಕ್ಷಪಾತೀಯ, ತಪ್ಪು-ಮಾಹಿತಿಯ ಮತ್ತು ಅಜೆಂಡಾ-ಆಧರಿತ ವರ್ತನೆಯು ದೇಶದ ಭವಿಷ್ಯಕ್ಕೆ ಮಾರಕ ಎಂದೂ ಅವರು ಕಿವಿಮಾತು ಹೇಳಿದ್ದಾರೆ.
ರಾಂಚಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಮಾಧ್ಯಮಗಳು ಪ್ರಸಾರ ಮಾಡುವ ಪಕ್ಷಪಾತೀಯ ನಿಲುವುಗಳು ದೇಶದ ಜನರ ಮೇಲೆ ಪರಿಣಾಮ ಬೀರುತ್ತಿದೆ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಮತ್ತು ಇಡೀ ವ್ಯವಸ್ಥೆಯನ್ನೇ ಅಪಾಯಕ್ಕೆ ನೂಕುತ್ತಿದೆ. ಇದು ನ್ಯಾಯ ವಿತರಣೆ ವ್ಯವಸ್ಥೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮಾಧ್ಯಮಗಳು ತಮ್ಮ ಹೊಣೆಗಾರಿಕೆಯನ್ನು ಗಾಳಿಗೆ ತೂರುವ ಮೂಲಕ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಎರಡು ಹೆಜ್ಜೆ ಹಿಂದಕ್ಕೆ ಕೊಂಡೊಯ್ಯುತ್ತಿವೆ’ ಎಂದಿದ್ದಾರೆ.
ನವ ಮಾಧ್ಯಮವು ಜನರನ್ನು ತಲುಪುವ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದ್ದರೂ, ನ್ಯಾಯಾಲಯ ಗಳಲ್ಲಿರುವ ಪ್ರಕರಣಗಳಲ್ಲಿ ಯಾವ ರೀತಿ ತೀರ್ಪು ಬರಬೇಕು ಎಂಬರ್ಥದಲ್ಲಿ ವಿಚಾರಗಳನ್ನು ಮಂಡಿಸುವುದು ಸಮ್ಮತವಲ್ಲ ಎಂದಿದ್ದಾರೆ.
ಮುದ್ರಣ ಮಾಧ್ಯಮ ಬಗ್ಗೆ ಮೆಚ್ಚುಗೆ
ಮುದ್ರಣ ಮಾಧ್ಯಮಗಳೂ ಈಗಲೂ ಸ್ವಲ್ಪಮಟ್ಟಿಗೆ ಹೊಣೆಗಾರಿಕೆಯನ್ನು ಉಳಿಸಿಕೊಂಡು ಬಂದಿವೆ. ಆದರೆ, ವಿದ್ಯುನ್ಮಾನ ಮಾಧ್ಯಮಗಳು ಹೊಣೆಗಾರಿಕೆಯನ್ನೇ ಪ್ರದರ್ಶಿಸುತ್ತಿಲ್ಲ. ಇನ್ನು ಸಾಮಾಜಿಕ ಜಾಲತಾಣಗಳ ಪರಿಸ್ಥಿತಿಯಂತೂ ಹೇಳತೀರದಂತಾಗಿದೆ ಎಂದೂ ಸಿಜೆಐ ಅಭಿಪ್ರಾಯಪಟ್ಟಿದ್ದಾರೆ. ಇನ್ನಾದರೂ ಟಿವಿ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿ ಮೆರೆಯಬೇಕು ಎಂದಿದ್ದಾರೆ.