ಮುಂಬೈ: ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಆರಂಭದ ಹೊತ್ತಿಗೆ 2023ರಿಂದ 27ವರೆಗಿನ ಐಪಿಎಲ್ ಮಾಧ್ಯಮ ಹಕ್ಕುಗಳಿಗೆ ಬಿಸಿಸಿಐ ಟೆಂಡರ್ ಕರೆಯಲಿದೆ! ಅಲ್ಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹಾಗೂ ಬಿಸಿಸಿಐ ನಡುವೆ ದೊಡ್ಡ ಪೈಪೋಟಿಯೊಂದಕ್ಕೆ ವೇದಿಕೆ ಸಿದ್ಧವಾಗಿದೆ.
ಹೆಚ್ಚು ಕಡಿಮೆ ಇದರ ಆಸುಪಾಸೇ ಐಸಿಸಿ ತನ್ನ 8 ವರ್ಷಗಳ ಅವಧಿಯ ವಿಶ್ವಕೂಟಗಳ ನೇರಪ್ರಸಾರಕ್ಕೆ ಟೆಂಡರ್ ಕರೆಯಲಿದೆ. ಇದರ ಪರಿಣಾಮ, ಟೆಂಡರ್ ಸ್ವೀಕರಿಸಿ ಹಕ್ಕುಗಳಿಗಾಗಿ ಯತ್ನಿಸುವ ಮಾಧ್ಯಮಸಂಸ್ಥೆಗಳ ನಡುವೆಯೂ ಪೈಪೋಟಿ ಹುಟ್ಟಿಕೊಳ್ಳಲಿದೆ.
ಮುಂದಿನ ವರ್ಷದವರೆಗೆ ಐಪಿಎಲ್ ನೇರಪ್ರಸಾರದ ಹಕ್ಕು ಸ್ಟಾರ್ ಸ್ಪೋರ್ಟ್ಸ್ ಬಳಿಯೇ ಇರಲಿದೆ. ಅದಾದ ನಂತರ ನಡೆಯುವ 5 ವರ್ಷಗಳ ಐಪಿಎಲ್‌ಗಾಗಿ ಈಗ ಬಿಸಿಸಿಐ ಬಿಡ್ಡಿಂಗ್ ಕರೆದಿದೆ. ಇಲ್ಲಿ ಪ್ರತೀ ಪಂದ್ಯಗಳಿಗೂ ಕನಿಷ್ಠ 54.1 ಕೋಟಿ ರೂ. ಮೊತ್ತವನ್ನು ನೇರಪ್ರಸಾರ ಮಾಡಲು ನೀಡಬೇಕಾಗಿದೆ. ಹೀಗಾಗಿ ಸ್ಟಾರ್ ಸ್ಪೋರ್ಟ್ಸ್, ಸೋನಿ ಗಳು ದೊಡ್ಡ ಹೋರಾಟವೊಂದಕ್ಕೆ ಸಜ್ಜಾಗಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ವರ್ಷ ದಿಂದ ಐಪಿಎಲ್‌ನಲ್ಲಿ ತಂಡಗಳ ಸಂಖ್ಯೆ 10ಕ್ಕೇರುತ್ತದೆ. ಇಲ್ಲಿ ಪಂದ್ಯಗಳ ಸಂಖ್ಯೆ, ನಡೆಯುವ ದಿನಗಳ ಸಂಖ್ಯೆ ಎಲ್ಲವೂ ಅಧಿಕ. ಇದೂ ಮುಖ್ಯ. ಭಾರತೀಯ ಉಪಖಂಡದಲ್ಲಿ, ವಿದೇಶಗಳಲ್ಲಿ ನೇರಪ್ರಸಾರ, ಹಾಗೆಯೇ ಡಿಜಿಟಲ್ ಮಾಧ್ಯಮಗಳಲ್ಲಿ ನೇರಪ್ರಸಾರಗಳೆಲ್ಲ ಬಿಡ್ಡಿಂಗ್ ವ್ಯಾಪ್ತಿಯಲ್ಲಿ ಬರುತ್ತವೆ.
ಇದನ್ನೂ ಓದಿ:ಐಪಿಎಲ್ ನಿಂದ ಹೊರಬಿದ್ದ ಅರ್ಜುನ್ ತೆಂಡೂಲ್ಕರ್: ಮುಂಬೈಗೆ ಬದಲಿ ಆಟಗಾರನ ಸೇರ್ಪಡೆ
ಬಿಸಿಸಿಐ-ಐಸಿಸಿಗೆ ನಡುವೆ ಯಾಕೆ ಹೋರಾಟ?: ಐಸಿಸಿ ವಿಶ್ವಕೂಟಗಳ ಮೂಲಕ ಆದಾಯ ಗಳಿಸುತ್ತದೆ. ಅದು ಪ್ರತೀ ಬಾರಿ 8 ವರ್ಷಗಳ ಮಟ್ಟಿಗೆ ನೇರಪ್ರಸಾರದ ಹಕ್ಕುಗಳನ್ನು ನೀಡುತ್ತದೆ. ಈ ಅವಧಿಗಳಲ್ಲಿ ನಡೆಯುವ ಟಿ20, ಏಕದಿನ ಪುರುಷ ಹಾಗೂ ಮಹಿಳಾ ವಿಶ್ವಕಪ್ ಗಳು ಐಸಿಸಿಗೆ ಮುಖ್ಯ. ಅದರಲ್ಲೂ ಪುರುಷರ ವಿಶ್ವಕಪ್‌ನಲ್ಲಿ ಐಸಿಸಿಗೆ ಆದಾಯ ಹೆಚ್ಚು. ಬಹುಶಃ ನವೆಂಬರ್ ಅಂತ್ಯದ ಹೊತ್ತಿಗೆ ಐಸಿಸಿ ಬಿಡ್ಡಿಂಗ್ ಕರೆಯಲಿದೆ. ಅದಕ್ಕೂ ಮುನ್ನವೇ ಬಿಸಿಸಿಐ ಬಿಡ್ಡಿಂಗ್ ಕರೆದಿರುತ್ತದೆ. ಇದರಲ್ಲೊಂದು ಸೂಕ್ಷ್ಮವಿದೆ!
ಐಸಿಸಿ ಈಗಲೇ ಬಿಡ್ಡಿಂಗ್ ಕರೆದರೂ, ಅದು ಜಾರಿಗೆ ಬರುವುದು 2024ರಿಂದ. ಬಿಸಿಸಿಐ ಬಿಡ್ಡಿಂಗ್ 2023ರಿಂದ ಆರಂಭವಾಗುವ ಅವಧಿಗೆ. ತಡವಾಗಿ ಜಾರಿಗೆ ಬರಲಿದ್ದರೂ ಐಸಿಸಿ ಯಾಕೆ ಗಡಿಬಿಡಿ ಮಾಡುತ್ತಿದೆ? ಇದರ ಹಿಂದೆ ಐಪಿಎಲ್ ಅನ್ನು ಬಲಿ ಹಾಕುವ ಉದ್ದೇಶವಿದೆಯಾ ಎಂಬ ಪ್ರಶ್ನೆಗಳಿವೆ.