Advertisement

ಸರ್ಕಾರಗಳ ಯೋಜನೆ ತಲುಪಿಸುವಲ್ಲಿ ಮಾಧ್ಯಮ ಪ್ರಮುಖ ಪಾತ್ರ

07:16 AM Mar 02, 2019 | Team Udayavani |

ತುಮಕೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ತಿಳಿಸಿದರು.

Advertisement

ತುಮಕೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಜಿಲ್ಲಾ ಮಾಧ್ಯಮ ಪ್ರತಿನಿಧಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ,

ಮಾಧ್ಯಮಗಳು ಇಲ್ಲದಿದ್ದರೆ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಕಷ್ಟಸಾಧ್ಯವಾಗುತ್ತಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶದ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳಿಗಾಗಿ ಲಕ್ಷಾಂತರ, ಕೋಟಿ ರೂ.ಗಳನ್ನು ವ್ಯಯಿಸುತ್ತಿದ್ದು, ಅರ್ಹ ಫ‌ಲಾನುಭವಿಗಳಿಗೆ ಈ ಯೋಜನೆಗಳ ಲಾಭ ತಲುಪಿದಾಗ ಮಾತ್ರ ಸರ್ಕಾರದ ಮಹತ್ತರ ಉದ್ದೇಶ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಕ್ಷಣಾರ್ಧದಲ್ಲಿ ಸುದ್ದಿ: ಮಾಧ್ಯಮಗಳು ಮೌಖೀಕ, ಬರವಣಿಗೆ, ಮುದ್ರಣ, ದೃಶ್ಯ, ಸಾಮಾಜಿಕ ಜಾಲತಾಣ ಹೀಗೆ ಹಂತಹಂತವಾಗಿ ಬೆಳೆದು ಬಂದಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿಯನ್ನು ಕ್ಷಣಾರ್ಧದಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಇದನ್ನು ಮನಗಂಡು ಪ್ರಸಕ್ತ ವರ್ಷದಲ್ಲಿ ವಿಶ್ವವಿದ್ಯಾನಿಲಯದ ಎಂಬಿಎ ಹಾಗೂ ಎಂಕಾಂ ತರಗತಿಗಳಲ್ಲಿ ಮಾಹಿತಿ ತಂತ್ರಜ್ಞಾನ ವಿಷಯ ಪರಿಚಯಿಸಲಾಗಿದೆ ಎಂದರು.

ಅಭಿನಂದನಾರ್ಹ: ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಅಧ್ಯಕ್ಷೆ ಎಂ.ಲತಾ ರವಿಕುಮಾರ್‌ ಮಾತನಾಡಿ, ಮಾಧ್ಯಮಗಳು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಿಲ್ಲೆಯ ಎಲ್ಲಾ ಕುಟುಂಬಗಳಿಗೂ ತಲುಪಿಸುವ ಕೆಲಸವನ್ನು ನಿರ್ವಹಿಸುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು. 

Advertisement

ಜನರಿಗೆ ಮುಟ್ಟಿಸಲು ಕಾರ್ಯಾಗಾರ: ಪಿಐಬಿ ಪ್ರಾದೇಶಿಕ ಜನಸಂಪರ್ಕ ಕಾರ್ಯಾಲಯದ ಹೆಚ್ಚುವರಿ ಮಹಾನಿರ್ದೇಶಕ ಎಂ.ನಾಗೇಂದ್ರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರದ ಸ್ವತ್ಛಭಾರತ್‌ ಮಿಷನ್‌ ಹಾಗೂ ಆಯುಷ್ಮಾನ್‌ ಭಾರತ್‌ ಯೋಜನೆಗಳ ರೂಪುರೇಷೆಗಳನ್ನು ಮಾಧ್ಯಮಗಳ ಮೂಲಕ ಬಡವರು, ರೈತರು, ಯುವಕರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಮುಟ್ಟಿಸಲು ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆ ಸಂಪೂರ್ಣವಾಗಿ ಅನುಷ್ಠಾನವಾದರೆ ವಿಶ್ವದಲ್ಲೇ ಬೃಹತ್‌ ಯೋಜನೆಯಾಗಿ ಹೊರಹೊಮ್ಮಲಿದೆ. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೂ ವಾರ್ಷಿಕ 5 ಲಕ್ಷ ರೂ.ಗಳವರೆಗೂ ಆರೋಗ್ಯ ವಿಮೆ ಒದಗಿಸುವ ಮೂಲಕ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್‌, ಜಿಪಂ ಮುಖ್ಯ ಯೋಜನಾಧಿಕಾರಿ ಬಾಲರಾಜು, ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಡಾ.ಬಿ.ಟಿ.ಮುದ್ದೇಶ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಿಕಾ ಮಾತನಾಡಿದರು. ಈ ಕಾರ್ಯಾಗಾರದಲ್ಲಿ ಶ್ರೀಕಾಂತ್‌, ಅಕ್ಷತಾ ಸೇರಿದಂತೆ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next