ಗದಗ: ದೇಶದ ಶಾಸಕಾಂಗ, ಕಾರ್ಯಾಂಗಕ್ಕಿಂತ ನ್ಯಾಯಾಂಗ ಹಾಗೂ ಮಾಧ್ಯಮಗಳ ಮೇಲೆ ಸಾರ್ವಜನಿಕರಿಗೆ ಅಪಾರ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಸಮಸ್ಯೆಗಳ ನಿವಾರಣೆಯೊಂದಿಗೆ ಸಮಗ್ರ, ಸಮೃದ್ಧ ಭಾರತ ನಿರ್ಮಾಣಕ್ಕೆ ಮಾಧ್ಯಮಗಳು ಸಕಾರಾತ್ಮಕವಾಗಿ ಕ್ರಿಯಾಶೀಲಗೊಳ್ಳಬೇಕಿದೆ ಎಂದು ಭೂಪಾಲ್ ನ ನಿವೃತ್ತ ಪ್ರಾಧ್ಯಾಪಕ ಪ್ರೊ| ಕಮಲ ದೀಕ್ಷಿತ ಹೇಳಿದರು.
ಇಲ್ಲಿನ ಬಸವೇಶ್ವರ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಈಶ್ವರೀಯ ವಿಶ್ವ ವಿದ್ಯಾಲಯದ ಮಿಡಿಯಾ ವಿಂಗ್ ಸಹಯೋಗದಲ್ಲಿ ಪತ್ರಕರ್ತರಿಗೆ ಆಯೋಜಿಸಿದ್ದ ‘ಸಮಾಜದ ಸಕಾರಾತ್ಮಕ ಪರಿವರ್ತನೆಗೆ ಮಾಧ್ಯಮಗಳ ಪಾತ್ರ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಸೇರಿದಂತೆ ಜಾಗತಿಕ ಮಟ್ಟದಲ್ಲಿ ನಡೆದ ಅದೆಷ್ಟೋ ಭ್ರಷ್ಟಾಚಾರ, ಹಗರಣ ಹಾಗೂ ಅಕ್ರಮಗಳನ್ನು ಬಯಲಿಗೆಳೆಯುವಲ್ಲಿ ಮಾಧ್ಯಮಗಳು ಮಹತ್ವದ ಪಾತ್ರ ನಿರ್ವಹಿಸಿವೆ. ಮಾಧ್ಯಮಗಳು ಸಮಾಜ ಕಾಯುವ ನಾಯಿಯಿದ್ದಂತೆ. ಸಮಾಜ ಹಾಗೂ ಆಡಳಿತ ವಲಯದಲ್ಲಿ ನಡೆಯುವ ತಪ್ಪುಗಳನ್ನು ಹಿರಿಯರು, ಹಿತೈಷಿಗಳ ಸ್ಥಾನದಲ್ಲಿ ನಿಂತು ಸರಿಪಡಿಸಿ, ಸನ್ಮಾರ್ಗವನ್ನು ತೋರಬೇಕಾದ ಜವಾಬ್ದಾರಿಯೂ ಮಾಧ್ಯಮಗಳ ಮೇಲಿದೆ ಎಂದು ಕಿವಿಮಾತು ಹೇಳಿದರು.
ಸೇವಾ ಕ್ಷೇತ್ರವಾಗಿದ್ದ ಮಾಧ್ಯಮ ಇತ್ತೀಚಿನ ವರ್ಷಗಳಲ್ಲಿ ಉದ್ಯಮದ ರೂಪ ಪಡೆದಿದ್ದು, ಸೇವಾ ಮನೋಭಾವ ಕ್ಷೀಣಿಸುತ್ತಿದೆ. ಸಮಾಜ ಸೇವೆಯೇ ಮುಖ್ಯ ಧ್ಯೇಯವನ್ನಾಗಿಸಿಕೊಂಡಿದ್ದ ಪತ್ರಕರ್ತರು ನೌಕರಿಗೆ ಸೀಮಿತವಾಗುತ್ತಿದ್ದಾರೆ. ಅದಕ್ಕಿರುವ ನಾನಾ ಕಾರಣಗಳನ್ನೂ ಕಡೆಗಣಸುವಂತಿಲ್ಲ. ಕೆಲ ಮಾಧ್ಯಮಗಳು ಏಕ ವ್ಯಕ್ತಿ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಸಿಲುಕಿ ನಲಗುತ್ತಿದೆ ಎಂದು ಕಳವಳ ವ್ಯಕ್ತಿಪಡಿಸಿದ ಅವರು, ಇಂದು ಉದ್ಯಮವಾಗಿ ಬೆಳೆದಿದೆ. ಸ್ವಾತಂತ್ರ್ಯ ಪಡೆಯುವಾಗಿನಿಂದ ಹಿಡಿದು ಇಂದಿನವರೆಗೂ ಮಾಧ್ಯಮಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಎಲ್ಲ ಅಡೆತಡೆಗಳನ್ನು ಮೀರಿ, ಸಮಾಜಮುಖೀ ವರದಿಗಳನ್ನು ನೀಡುವ ನಿಟ್ಟಿನಲ್ಲಿ ಪತ್ರಕರ್ತರು ಶ್ರಮಿಸಬೇಕು ಎಂದು ಸಲಹೆ ನೀಡಿದರು. ಈಶ್ವರೀಯ ವಿಶ್ವ ವಿದ್ಯಾಲಯದ ಮಿಡಿಯಾ ವಿಂಗ್‌ನ ನ್ಯಾಷನಲ್ ಕೋ-ಆರ್ಡಿನೇಟರ್ ದೆಹಲಿಯ ಬಿ.ಕೆ. ಸುಶಾಂತ ಮಾತನಾಡಿ, ಸಕರಾತ್ಮಕ ಪರಿವರ್ತನೆಗೆ ಮಾಧ್ಯಮದ ಪಾತ್ರ ಕುರಿತು ಮಾತನಾಡಿದರು.
ದೆಹಲಿ ಮಿಡಿಯಾ ವಿಂಗ್‌ನ ಝೋನಲ್ ಕೋ-ಆರ್ಡಿನೇಟರ್ ಬಿ.ಕೆ. ಸುನಿತಾ ಮಾತನಾಡಿ, ಪ್ರತಿಯೊಬ್ಬರಲ್ಲಿ ಯೋಗ ಜ್ಞಾನ ಪ್ರಮುಖವಾಗಿದೆ. ಆದ್ದರಿಂದ ಆತ್ಮಶಾಂತಿಗಾಗಿ ಯೋಗ ಜ್ಞಾನ ಪ್ರಮುಖವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಯೋಗದ ಮೋರೆ ಹೋಗಬೇಕು ಎಂದರು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ. ಜಯಂತಿ ಅಕ್ಕನವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ವಿವಿಧ ಗ್ರಾಮೀಣ ಹಾಗೂ ತಾಲೂಕಿನ ಪತ್ರಕರ್ತರು ಭಾಗವಹಿಸಿದ್ದರು.