ಬೆಂಗಳೂರು: ಕಳೆದ ಕೆಲ ದಿನಗಳಿಂದ ಸುದ್ದಿಯಾಗುತ್ತಿರುವ ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಅವರು ”ಕೆಲವರು ತನ್ನನ್ನು ಹಿಂಬಾಲಿಸಿ ಮನಃಶಾಂತಿ ಕೆಡಿಸಿದ್ದಾರೆ” ಎಂದು ಸೈಬರ್ ಕ್ರೈಂ ಇಲಾಖೆಗೆ ದೂರು ನೀಡಿದ್ದಾರೆ.
ಕೆಲವು ಮಾಧ್ಯಮ ಪ್ರತಿನಿಧಿಗಳು ನನ್ನನ್ನು ನಿರಂತರವಾಗಿ ಹಿಂಬಾಲಿಸುತ್ತಿದ್ದು, ಮನಃಶಾಂತಿ ಹಾಳು ಮಾಡುತ್ತಿದ್ದಾರೆ ಎಂದು ಪವಿತ್ರಾ ಲೋಕೇಶ್ ಹೇಳಿಕೆ ನೀಡಿದ್ದಾರೆ. ಇದು ತನಗೆ ಅಪಾರವಾದ ಮಾನಸಿಕ ಆಘಾತ ಉಂಟು ಮಾಡಿದೆ ಎಂದೂ ವಿವರಿಸಿದ್ದಾರೆ. ಈ ಕೃತ್ಯದಲ್ಲಿ ತೊಡಗಿರುವ ಮಾಧ್ಯಮ ಸಂಸ್ಥೆಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಿವಾದದ ನಡುವೆ ಭಾನುವಾರ ಪವಿತ್ರಾ ಲೋಕೇಶ್ ಮತ್ತು ನರೇಶ್ ಅವರು ಮೈಸೂರಿನ ಹೋಟೆಲ್ ನ ಒಂದೇ ಕೋಣೆಯಲ್ಲಿ ತಂಗಿದ್ದು, ನರೇಶ್ ಪತ್ನಿ ರಮ್ಯಾ ಹೈಡ್ರಾಮಾ ನಡೆಸಿದ್ದಾರೆ. ರೂಂ ಬಾಗಿಲ ಬಳಿ ಇಬ್ಬರಿಗಾಗಿ ಗಂಟೆಗಳ ಕಾಲ ಕಾದು ಕುಳಿತು, ಚಪ್ಪಲಿಯಲ್ಲಿ ಹೊಡೆಯಲು ಯತ್ನಿಸಿದ್ದಾರೆ. ಪೊಲೀಸರು ಸ್ಥಳದಲ್ಲಿ ಇದ್ದುದರಿಂದ ಅವರಿಗೆ ಹಲ್ಲೆ ನಡೆಸಲು ಸಾಧ್ಯವಾಗಲಿಲ್ಲ. ಈ ಎಲ್ಲಾ ವಿದ್ಯಾಮಾನಗಳನ್ನು ಕೆಲ ಮಾಧ್ಯಮಗಳು ನೇರ ಪ್ರಸಾರ ಮಾಡಿವೆ.
ಪವಿತ್ರಾ ಲೋಕೇಶ್ ಈಗಾಗಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ತನ್ನ ಹೆಸರಿನಲ್ಲಿ ಅನೇಕ ನಕಲಿ ಖಾತೆಗಳನ್ನು ರಚಿಸಲಾಗಿದೆ ಮತ್ತು ಆ ಖಾತೆಗಳಲ್ಲಿ ಮಾನಹಾನಿಕರ ಪೋಸ್ಟ್‌ಗಳು ಬಂದಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ನಕಲಿ ಖಾತೆಗಳನ್ನು ಸೃಷ್ಟಿಸಿದ ನಂತರ ದುಷ್ಕರ್ಮಿಗಳು ತನ್ನ ಬಗ್ಗೆ ವದಂತಿಗಳು ಮತ್ತು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ನಟಿ ಹೇಳಿದ್ದಾರೆ.ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಪವಿತ್ರಾ ಅವರು ತೆಲುಗು ಚಿತ್ರ ರಂಗದ ನರೇಶ್ ಅವರೊಂದಿಗಿನ ವೈವಾಹಿಕ ಸಂಬಂಧದ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದ್ದು, ಈಗಾಗಲೇ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ವಂಚನೆ ಮತ್ತು ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪವಿತ್ರಾ ಲೋಕೇಶ್ ನನ್ನ ಮಾರ್ಗದರ್ಶಕಿ, ತತ್ವಜ್ಞಾನಿ ಮತ್ತು ಆತ್ಮೀಯ ಸ್ನೇಹಿತೆ ಎಂದು ನರೇಶ್ ಸ್ಪಷ್ಟಪಡಿಸಿದ್ದಾರೆ. ಆಕೆಯ ಬೆಂಬಲದಿಂದ ಖಿನ್ನತೆಯ ಆಳದಿಂದ ತನ್ನನ್ನು ಮೇಲೆತ್ತಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ತಾನು ನರೇಶ್‌ರನ್ನು ಮದುವೆಯಾಗಿಲ್ಲ, ತಮ್ಮ ಸಂಬಂಧವನ್ನು ಅಪಾರ್ಥ ಮಾಡಿಕೊಳ್ಳಬಾರದು ಎಂದು ಪವಿತ್ರಾ ಹೇಳಿದ್ದಾರೆ.
ತನ್ನ ಗೌಪ್ಯತೆ ಮತ್ತು ವೈಯಕ್ತಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಯಾರೂ ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದ್ದು, ನರೇಶ್ ಮತ್ತು ರಮ್ಯಾ ರಘುಪತಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.