Advertisement

ನನ್ನ ಜೀವನದೊಂದಿಗೆ ಮಾಧ್ಯಮಗಳ ಚೆಲ್ಲಾಟ:ಎಚ್ಡಿಕೆ

06:00 AM Oct 27, 2018 | |

ಮಂಡ್ಯ: ಮಾಧ್ಯಮಗಳು ನನ್ನ ಜೀವನದ ಜತೆ ಚೆಲ್ಲಾಟ ಆಡುತ್ತಿವೆ. ನಾನು ಮಾಧ್ಯಮಗಳಿಗೆ ಹೆದರುವುದಿಲ್ಲ. ನನ್ನನ್ನು ಹೆದರಿಸೋಕೂ ಅವರಿಂದ ಸಾಧ್ಯವಿಲ್ಲ ಎಂದು ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದರು. ನಗರದಲ್ಲಿ ಮಾತನಾಡಿ, ನನ್ನನ್ನು ಯಾರೂ ಹಂಗಿನಲ್ಲಿ ಇಟ್ಟುಕೊಳ್ಳಲು ಆಗೋಲ್ಲ. ನಾನು ಏನೇ ಮಾತಾಡಿದ್ರು ತಿರುಚಿ ಬರೆಯುತ್ತಾರೆ. ಎಲ್ಲರ ಬಗ್ಗೆ ಹೇಳಲ್ಲ, ಬೆಂಗಳೂರಿನ ಕೆಲವು ಮಾಧ್ಯಮಗಳು ಎಂದು ಕಿಡಿಕಾರಿದರು. ಮಾಧ್ಯಮಗಳು ನನ್ನ ಜೀವನದ ಜತೆ ಚೆಲ್ಲಾಟವಾಡುತ್ತಿವೆ. ನಿಮ್ಮ ಮನೆ ಟಿವಿ ತೆಗೆದಾಕಿ ಅಂತಾ ಕೆಲವು ಡಾಕ್ಟರ್‌ಗಳು ನನಗೆ ಸಲಹೆ ನೀಡಿದ್ದಾರೆ ಎಂದರು. 

Advertisement

ಮಾಧ್ಯಮಗಳು ಜನರನ್ನು ನನ್ನ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿವೆ. ನನ್ನನ್ನು ಬೆದರಿಸುವ ಪ್ರಯತ್ನ ಮಾಡುತ್ತಿವೆ. ಇದಕ್ಕೆಲ್ಲಾ ಹೆದರುವವನು ನಾನಲ್ಲ. ನನ್ನನ್ನು ಹೆದರಿಸಲು ಬಂದರೆ ನಿಮ್ಮ ಬಂಡವಾಳ ಏನಿದೆ ಅನ್ನೋದನ್ನೂ ತೆಗೆಯಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾ ಸ್ವಾತಂತ್ರಕ್ಕೆ ನಾನು ಚ್ಯುತಿ ತರುವುದಿಲ್ಲ.  ಬರೆಯಬೇಕಿದ್ರೆ ಸತ್ಯ ಬರೆಯಿರಿ. ನಿಮಗೆ ಇಷ್ಟ ಬಂದಂತೆ ಬರೆಯಬೇಡಿ. ನಾನು ಭಂಡ ರಾಜಕಾರಣಿ ಅಲ್ಲ ಎಂದರು.

ಯಾವಾಗ ಸಾಯುತ್ತೇನೋ ಗೊತ್ತಿಲ್ಲ
ಬಳಿಕ, ಮಳವಳ್ಳಿಯಲ್ಲಿ ಮಾತನಾಡಿ, ನಾನು ಇಸ್ರೇಲಿಗೆ ಹೋಗಿದ್ದಾಗಲೇ ಸಾಯಬೇಕಾಗಿತ್ತು. ಮೊನ್ನೆಯೂ ಕೂಡ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದೆ. ಎರಡು ಬಾರಿಯೂ ದೇವರ ದಯೆಯಿಂದ ಬದುಕಿ ಬಂದಿದ್ದೇನೆ. ಮತ್ತೆ ಯಾವಾಗ ಸಾಯುತ್ತೇನೆ ಗೊತ್ತಿಲ್ಲ ಎಂದು ತಮ್ಮ ದೇಹಾರೋಗ್ಯದ ಸ್ಥಿತಿ ಬಗ್ಗೆ ನೋವು ತೋಡಿಕೊಂಡರು.ನಾನು ಅಧಿಕಾರದಲ್ಲಿರುವವರೆಗೂ ನನ್ನನ್ನು ನಂಬಿದ ಜನರನ್ನು ಕೈ ಬಿಡುವುದಿಲ್ಲ. ಜನರ ಹಣವನ್ನು ಕೊಳ್ಳೆ ಹೊಡೆದು ಹೋಗುವ ದರಿದ್ರ ನನಗೆ ಬಂದಿಲ್ಲ. ನಾನು ಜನರಿಗೆ ಕೊಟ್ಟಿರುವ ಯಾವ ಮಾತನ್ನೂ ವಾಪಸ್‌ ಪಡೆಯುವುದಿಲ್ಲ. ನನ್ನ ಅಧಿಕಾರಾವಧಿಯೊಳಗೆ ಆ ಎಲ್ಲಾ ಭರವಸೆಗಳನ್ನು ಈಡೇರಿಸಿಯೇ ತೀರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next