ಚಾಮರಾಜನಗರ: ವಿಕೋಪಗಳ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಜೊತೆಗೆ ಮಾಧ್ಯಮಗಳ ಸಹಕಾರ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹೇಳಿದರು. ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಡಳಿತ ಹಾಗೂ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ವಿಕೋಪ ನಿರ್ವಹಣಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ವಿಕೋಪ ನಿರ್ವಹಣೆಯಲ್ಲಿ ಮಾಧ್ಯಮದ ಪಾತ್ರ ಎಂಬ ವಿಷಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜನರ ಆತಂಕ ನಿವಾರಣೆ: ವಿಪತ್ತುಗಳು ಎದುರಾದ ಸಂದರ್ಭದಲ್ಲಿ ಮಾಧ್ಯಮಗಳು ಆಡಳಿತ ವರ್ಗದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ನಿಖರ ಮಾಹಿತಿ ಪಡೆಯುವುದರಿಂದ ಸುದ್ದಿಯು ಸಹ ಜನರಿಗೆ ಸರಿಯಾದ ದಿಕ್ಕಿನಲ್ಲಿ ತಲುಪಲಿದೆ. ಮಾಧ್ಯಮಗಳು ಸರಿಯಾದ ಮಾಹಿತಿಯನ್ನು ನೀಡುವ ಮೂಲಕ ಜನರ ಆತಂಕವು ನಿವಾರಣೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಲಹೆ: ವಿಪತ್ತು ನಿರ್ವಹಣೆಗೆ ವಿವಿಧ ಇಲಾಖೆಯ ಸಹಭಾಗಿತ್ವ ಪ್ರಮುಖ ಪಾತ್ರವಹಿಸುತ್ತದೆ. ಪ್ರಾಮಾಣಿಕತೆ, ಪರಿಶ್ರಮ, ದಕ್ಷತೆಯಿಂದ ಕಾರ್ಯ ನಿರ್ವಹಿಸಿದರೆ ಎಂತಹ ವಿಕೋಪವನ್ನು ಸಮರ್ಥವಾಗಿ ಎದರಿಸಬಹುದು. ವಿಕೋಪ ಎದುರಾಗಬಹುದಾದ ದುರ್ಬಲ ಪ್ರದೇಶಗಳ ಮೇಲೆ ಮುನ್ನೆಚ್ಚರಿಕೆ ಇರಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.
ಸಕರಾತ್ಮಕ ವರದಿ ಮಾಡಿ: ಮಾಧ್ಯಮಗಳು ಸಕರಾತ್ಮಕ ವರದಿಗಳನ್ನು ಮಾಡಬೇಕಿದೆ. ಜತೆಗೆ ಆಡಳಿತ ವರ್ಗವನ್ನು ಎಚ್ಚರಿಸುವ ಕೆಲಸವನ್ನು ಮಾಧ್ಯಮಗಳು ಮಾಡುವ ಹೊಣೆಗಾರಿಕೆ ಇದೆ. ಪರಸ್ಪರ ಸಹಕಾರ ಸಮನ್ವಯ, ಸಂಪರ್ಕದಿಂದ ವಿಪತ್ತುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಸಂಭವಿಸಿದ ದಾಸನಪುರ ಪ್ರವಾಹ ದುರಂತ, ಸುಳ್ವಾಡಿ ವಿಷ ಪ್ರಸಾದ ಪ್ರಕರಣಗಳನ್ನು ಜಿಲ್ಲಾಡಳಿತ ನಿಭಾಯಿಸುವಲ್ಲಿ ಮಾಧ್ಯಮಗಳು ಪೂರಕ ಸಹಕಾರ ನೀಡಿವೆ ಎಂದು ಜಿಲ್ಲಾಧಿಕಾರಿ ಸ್ಮರಿಸಿದರು.
ಋಣಾತ್ಮಕ ಸಂದೇಶ ತಡೆಗಟ್ಟಿ: ವಿಕೋಪ ನಿರ್ವಹಣಾ ಕೇಂದ್ರದ ತರಬೇತಿ ನಿರ್ದೇಶಕ ಡಾ.ದಿಲೀಪ್ ಕುಮಾರ್ ಮಾತನಾಡಿ, ವಿಕೋಪ ನಡೆದ ಸಂದರ್ಭದಲ್ಲಿ ಮಾಧ್ಯಮಗಳ ವರದಿ ಅಧಿಕಾರಿಗಳಿಗೆ ವಿಕೋಪ ನಿರ್ವಹಣಾ ಕಾರ್ಯನಿರ್ವಹಿಸಲು ಸಹಕಾರಿಯಾಗುತ್ತದೆ. ಅನಾಹುತಗಳ ಕುರಿತು ಋಣಾತ್ಮಕ ಸಂದೇಶಗಳನ್ನು ಮಾಧ್ಯಮಗಳಿಂದ ತಡೆಗಟ್ಟ ಬಹುದಾಗಿದೆ ಎಂದರು.
ಜನರ ಮನಸ್ಸಿನ ಆತಂಕ ಹೋಗಲಾಡಿಸಿ: ವಿಕೋಪದ ಮುನ್ನ, ವಿಕೋಪದ ಸಂದರ್ಭ, ವಿಕೋಪದ ನಂತರದ ಸಮಯದಲ್ಲಿ ಸರಿಯಾದ ಮಾಹಿತಿ ವಿಸ್ತರಣೆ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಜನರ ಮನಸ್ಸಿನ ಆತಂಕಗಳನ್ನು ಹೋಗಲಾಡಿಸಲು ಮಾಧ್ಯಮದ ವರದಿಗಳು ಪ್ರಮುಖ ಪಾತ್ರವಹಿಸುತ್ತದೆ ಎಂದು ತರಬೇತಿ ನಿರ್ದೇಶಕ ದಿಲೀಪ್ ತಿಳಿಸಿದರು. ವಿಕೋಪ ನಿರ್ವಹಣಾ ಕೆಂದ್ರದ ಬೋಧಕ ಚಂದ್ರನಾಯಕ್ ಮಾತನಾಡಿ, ವಿಕೋಪ ನಿರ್ವಹಣೆಯ ಯೋಜನೆಯು ಪೂರ್ಣಪ್ರಮಾಣವಾಗಿ ಅನುಷ್ಠಾನವಾಗಬೇಕು. ಶೈಕ್ಷಣಿಕ ಮಟ್ಟದಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂದರು.
ಪರಿಹಾರ ಕಾರ್ಯವು ತ್ವರಿತವಾಗಿ ನಡೆಯಬೇಕು: ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಹಿರಿಯ ಸಹಾಯ, ನಿರ್ದೇಶಕ ರಾಜು ಮಾತನಾಡಿ, ಪ್ರಕೃತಿ ವಿಕೋಪಗಳು ಯಾವಾಗ ಬೇಕಾದರೂ ಸಂಭವಿಸಬಹುದು. ರಕ್ಷಣೆ ಮತ್ತು ಪರಿಹಾರ ಕಾರ್ಯವು ತ್ವರಿತವಾಗಿ ನಡೆಯಬೇಕು. ಇದರಲ್ಲಿ ಅಧಿಕಾರಿಗಳು ಮಾಧ್ಯಮಗಳ ಸಮನ್ವಯ ಪಾತ್ರ ಪ್ರಮುಖವಾಗಿದೆ ಎಂದರು. ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲರಾದ ವಿನುತಾ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.