ಧಾರವಾಡ: ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ|ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೇಬಲ್ ಟಿವಿ ಪ್ರಸಾರಕರು, ಮೊಬೈಲ್ ನೆಟ್‌ವರ್ಕ್ ಹಾಗೂ ಬಲ್ಕ್ ಎಸ್.ಎಂ.ಎಸ್.ಪೂರೈಕೆದಾರರಿಗೆ ಮಾಧ್ಯಮ ಪ್ರಮಾಣೀಕರಣ ಕುರಿತು ಅರಿವು ಮೂಡಿಸುವ ಕುರಿತಂತೆ
ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜಕೀಯ ಪ್ರಚಾರದ ಪತ್ರಿಕಾ ಜಾಹೀರಾತು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತು ಹಾಗೂ ಸಾಮಾಜಿಕ ಜಾಲತಾಣಗಳು, ಮೊಬೈಲ್ ಎಸ್.ಎಂ.ಎಸ್, ಇ-ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಪರವಾನಗಿ ಕಡ್ಡಾಯವಾಗಿದೆ. ಇದನ್ನು ಯಾರು ಪಡೆಯುವುದಿಲ್ಲವೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಚುನಾವಣೆ ವೆಚ್ಚ ವಿಭಾಗದ ನೋಡಲ್ ಅಧಿಕಾರಿ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಎಸ್.ಉದಯಶಂಕರ್ ಮಾತನಾಡಿ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ತನ್ನ ಚುನಾವಣಾ ಖರ್ಚು ವೆಚ್ಚದಲ್ಲಿ ಜಾಹೀರಾತಿನ ಮೊತ್ತವನ್ನು ತೋರಿಸದೇ ಹೋದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಎಂಸಿಎಂಸಿ ನೋಡಲ್ ಅಧಿಕಾರಿಯಾಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಜಿಲ್ಲಾ ಎನ್‌ಐಸಿ ಅಧಿಕಾರಿ ಮೀನಾಕುಮಾರಿ, ಆಕಾಶವಾಣಿಯ ಸತೀಶ ಪರ್ವತೀಕರ್ ಇತರರಿದ್ದರು.
ವಾಟ್ಸ್‌ಆ್ಯಪ್‌ಗೆ ಬೇಕು ಪರವಾನಗಿ
ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಮಹೇಶಕುಮಾರ್ ಮಾತನಾಡಿ, ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟರ್ ಮತ್ತು ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ಮತ್ತು ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವುದಕ್ಕಿಂತ ಮುಂಚೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ವತಿಯಿಂದ ಮಾಧ್ಯಮ ಪ್ರಮಾಣೀಕರಣ ಪತ್ರ ಪಡೆಯುವುದು ಕಡ್ಡಾಯ. ಒಂದು ವೇಳೆ ಅದನ್ನು ಉಲ್ಲಂಘಿಸಿ ಪ್ರಚಾರ ಮಾಡಿದರೆ ಚುನಾವಣಾ ನೀತಿ ಸಂಹಿತೆ ಮತ್ತು ಐಟಿ ಕಾಯ್ದೆ ಉಲ್ಲಂಘನೆ ಅಡಿ ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.