ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆಯಲ್ಲಿ ಮಾಧ್ಯಮದವರ ಅನುಕೂಲಕ್ಕಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದೆ.
ವಾರ್ತಾಸೌಧದಲ್ಲಿ ಸ್ಥಾಪಿಸಲಾಗಿರುವ ಈ ಮಾಧ್ಯಮ ಕೇಂದ್ರವನ್ನು ಬುಧವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಉದ್ಘಾಟಿಸಿದರು. ಮತ ಎಣಿಕೆ ದಿನವಾದ ಮೇ 23ರ ಬೆಳಗ್ಗೆಯಿಂದ ಈ ಮಾಧ್ಯಮ ಕೇಂದ್ರ ಕಾರ್ಯಾರಂಭ ಮಾಡಲಿದ್ದು, ಮತ ಎಣಿಕೆ ಕಾರ್ಯ ಪೂರ್ಣಗೊಳ್ಳುವವರೆಗೆ ತೆರೆದಿರುತ್ತದೆ.
ಮತ ಎಣಿಕೆಯ ಸಮಗ್ರ ಹಾಗೂ ನಿಖರ ಮಾಹಿತಿ ಪಡೆದುಕೊಳ್ಳಲು ಮಾಧ್ಯಮ ಕೇಂದ್ರದಲ್ಲಿ 30 ಕಂಪ್ಯೂಟರ್, 12 ಟಿವಿ ಸೆಟ್ ಹಾಗೂ 2 ದೊಡ್ಡ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಈ ಮಾಧ್ಯಮ ಕೇಂದ್ರಕ್ಕೆ ಎನ್‌ಐಸಿ ತಾಂತ್ರಿಕ ನೆರವು ನೀಡಲಿದ್ದು, ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗಿದೆ. ಮಾಧ್ಯಮ ಕೇಂದ್ರದ ನಿರ್ವಹಣೆ ಮತ್ತು ಮಾಧ್ಯಮದವರಿಗೆ ಮಾಹಿತಿ ನೀಡಲು ವಾರ್ತಾ ಇಲಾಖೆಯ 100ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.
ರಾಜಕೀಯ ಪಕ್ಷಗಳು ಮುಖಂಡರು, ಪ್ರತಿನಿಧಿಗಳು ಕೇಂದ್ರಕ್ಕೆ ಬಂದು ಮಾಹಿತಿ ಪಡೆದುಕೊಳ್ಳುವ ಮತ್ತು ಫಲಿತಾಂಶದ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡಲೂ ಸಹ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಚುನಾವಣಾ ಆಯೋಗದ ಅಧಿಕಾರಿಗಳೂ ಇಲ್ಲಿಗೆ ಬಂದು ಮಾಹಿತಿಗಳನ್ನು ಕೊಡಬಹುದು. ರಾಜ್ಯದ ವಿವಿಧ ಜಿಲ್ಲೆಗಳ ಮಾಹಿತಿಯನ್ನೂ ಈ ಮಾಧ್ಯಮ ಕೇಂದ್ರದಲ್ಲಿ ಪಡೆದುಕೊಳ್ಳಬಹುದು.
ಮಾಧ್ಯಮ ಕೇಂದ್ರ ಉದ್ಘಾಟಿಸಿ ಮಾತನಾಡಿದ ಟಿ.ಎಂ. ವಿಜಯಭಾಸ್ಕರ್, ಮಾಧ್ಯಮದವರ ಮೂಲಕ ರಾಜ್ಯದ ಜನತೆಗೆ ಚುನಾವಣಾ ಫಲಿತಾಂಶದ ನಿಖರ ಮಾಹಿತಿಗಳನ್ನು ನೀಡಲು ಈ ಮಾಧ್ಯಮ ಕೇಂದ್ರ ಸ್ಥಾಪಿಸಲಾಗಿದೆ. ಫಲಿತಾಂಶದ ದಿನ ಗಣತಂತ್ರದ ಹಬ್ಬದ ದಿನ ಇದ್ದಂತೆ. ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಂಡು ಸಂಭ್ರಮಿಸಬೇಕು. ಮಾಧ್ಯಮ ಕೇಂದ್ರದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ವಾರ್ತಾ ಇಲಾಖೆ ನಿರ್ದೇಶಕ ಎನ್.ಭೃಂಗೇಶ್, ಉಪ ನಿರ್ದೇಶಕರಾದ ಡಿ.ಪಿ. ಮುರಳೀಧರ, ಪುಟ್ಟಸ್ವಾಮಯ್ಯ ಮತ್ತಿತರರು ಇದ್ದರು.