ಮುದ್ದೇಬಿಹಾಳ: ಜಿಲ್ಲೆಯಲ್ಲಿ ನಾಲ್ಕು ಸ್ತರದ ಪದವಿ ಪೂರ್ವ ಕಾಲೇಜುಗಳು ಇದ್ದು ಇವುಗಳಲ್ಲಿ ಅನುದಾನ ರಹಿತ ಕಾಲೇಜುಗಳ ಹೆಸರಲ್ಲಿ ಅನಧಿಕೃತ ಪಪೂ ಕಾಲೇಜುಗಳು ಅಲ್ಲಲ್ಲಿ ತಲೆ ಎತ್ತುತ್ತಿದ್ದು ಇಂಥ ಕಾಲೇಜುಗಳ ಬಗ್ಗೆ ಪಾಲಕರು ಎಚ್ಚರಿಕೆಯಿಂದ ಇರಬೇಕು ಎಂದು ಪಪೂ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜೆ.ಎಸ್. ಪೂಜಾರಿ ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ.
ಇಲ್ಲಿನ ಅಹಿಲ್ಯಾದೇವಿ ಹೋಳ್ಕರ್ ಸಂಸ್ಥೆಯಡಿ ನಡೆಯುತ್ತಿರುವ ಅಭ್ಯುದಯ ಸೈನ್ಸ್ ಪಿಯು ಕಾಲೇಜಿನಲ್ಲಿ ಪಿಯು ಫಲಿತಾಂಶ ಸುಧಾರಣೆ ಹಿನ್ನೆಲೆ ನಡೆದ ಮುದ್ದೇಬಿಹಾಳ ತಾಲೂಕು ಪಿಯು ಕಾಲೇಜುಗಳ ಪ್ರಾಂಶುಪಾಲರು, ಉಪ ಪ್ರಾಂಶುಪಾಲರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಅನುಮತಿ ಪಡೆಯದೆ ಸರ್ಕಾರದ ಅನುಮತಿ ನಿರೀಕ್ಷೆಯಲ್ಲಿ ಎಂದು ಬೋರ್ಡ್ ಹಾಕುವುದು, ಪ್ರವೇಶ ಪಡೆಯುವುದು, ಬ್ರಿಜ್ ಕೋರ್ಸ್ ನಡೆಸುತ್ತೇವೆ, ವಿದ್ಯಾರ್ಥಿಗಳಿಗೆ ಗೈಡ್ ಮಾಡುತ್ತೇವೆ ಎಂದು ಹೇಳುವಂಥ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸಬಾರದು. ಅಕ್ಕಪಕ್ಕದ ಕಾಲೇಜಿನವರು ಇಂಥ ಕಾಲೇಜುಗಳ ಬಗ್ಗೆ ಇಲಾಖೆಗೆ ಮಾಹಿತಿ ಕೊಡಬೇಕು ಎಂದು ಹೇಳಿದರು.
ಅನುದಾನ ರಹಿತ ಕಾಲೇಜುಗಳು ಅನೇಕ ಬಾರಿ ನಿಯಮ ಮೀರುತ್ತವೆ. ಇಂಥ ಕಾಲೇಜುಗಳಲ್ಲಿ ಅನುಮತಿ ಪಡೆಯುವಾಗ ಇರುವ ಹುರುಪು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆದಾಗ ಇರುವುದಿಲ್ಲ. ಇಂಥ ಕಾಲೇಜುಗಳು ಸರ್ಕಾರದ ಷರತ್ತು ಕಡ್ಡಾಯವಾಗಿ ಪಾಲಿಸಬೇಕು. ದಿಢೀರ್‌ನೆ ಕಾಲೇಜು ಬಂದ್ ಮಾಡುವಂತಿಲ್ಲ. ಸರ್ಕಾರದ ಅನುಮತಿ ಇದ್ದರೆ ಮಾತ್ರ ಕಾಲೇಜು ಪ್ರಾರಂಭಿಸಬೇಕು. ಅನುಮತಿ ಇರುವ ವಿಷಯಗಳನ್ನೇ ಬೋಧಿಸಬೇಕು. ಅನುಮತಿ ಪಡೆದ ಸ್ಥಳದಲ್ಲಿ ಕಾಲೇಜು ನಡೆಸದೆ ಬೇರೆ ಕಡೆ ನಡೆಸುವುದು, ಅನುಮತಿ ಪಡೆದ ಹೆಸರು ಬಿಟ್ಟು ಬೇರೆ ಹೆಸರಲ್ಲಿ ಕಾಲೇಜು ನಡೆಸುವುದು ಕಾನೂನು ಬಾಹಿರ. ಇಂಥ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ತೊಂದರೆ ಆದಲ್ಲಿ ಸಂಸ್ಥೆಯವರೇ ಹೊಣೆಯಾಗಬೇಕಾಗುತ್ತದೆ. ಇಂಥ ಕಾಲೇಜುಗಳ ಮೇಲೆ ಶಿಸ್ತು ಕ್ರಮ, ಕ್ರಿಮಿನಲ್ ಕೇಸ್ ಬುಕ್ ಮಾಡಲು ಅವಕಾಶ ಇದೆ ಎಂದರು.
ಸರ್ಕಾರಿ ಪಪೂ ಕಾಲೇಜಿನಲ್ಲಿ ಸೌಲಭ್ಯ ಕೊರತೆ ಇದೆ. ಇದು ಏಕಾಏಕಿ ಒಂದೇ ಬಾರಿ ಸರಿಹೋಗುವುದಲ್ಲ. ಬಹುತೇಕ ಕಾಲೇಜುಗಳಲ್ಲಿ ಮೂಲಸೌಕರ್ಯ ಬಹಳಷ್ಟು ಸುಧಾರಿಸಿದೆ. ವಿವಿಧ ಅನುದಾನ ಬಳಸಿಕೊಳ್ಳಲು ಅವಕಾಶ ಇದೆ. ಐದಾರು ವರ್ಷಗಳಲ್ಲಿ ಬಹಳ ಪ್ರಗತಿ ಸಾಧಿಸಲಾಗಿದೆ ಎಂದರು.
2020ರ ಪಿಯು ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆ ರಾಜ್ಯದ 10 ಸ್ಥಾನಗಳಲ್ಲಿ ಒಂದು ಸ್ಥಾನ ಪಡೆದುಕೊಳ್ಳುವ ರೀತಿ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಇದಕ್ಕಾಗಿ ಇಲಾಖೆ ಸಿದ್ಧಪಡಿಸಿರುವ ಫಲಿತಾಂಶ ಸುಧಾರಣೆಯ ಅಂಶಗಳ ಮಾಹಿತಿ ಸದುಪಯೋಗ ಪಡೆದುಕೊಳ್ಳಬೇಕು. ಈಗಿನಿಂದಲೇ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಸಭೆಯಲ್ಲಿದ್ದ ಎಲ್ಲರಿಗೂ ಪರೀಕ್ಷಾ ಸುಧಾರಣೆ ಕುರಿತು ಸಿದ್ದಪಡಿಸಿರುವ ಬುಕ್‌ಲೆಟ್ ವಿತರಿಸಿ ಅವುಗಳಲ್ಲಿನ ಅಂಶಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಸೂಚಿಸಲಾಯಿತು. ನಿವೃತ್ತ ಉಪ ನಿರ್ದೇಶಕ ಶಂಕರ ಅಮಾತೆ, ಅಭ್ಯುದಯ ಕಾಲೇಜು ನಿರ್ದೇಶಕ ರವಿ ಜಗಲಿ, ಪ್ರಾಂಶುಪಾಲರಾದ ಎಸ್.ಎಸ್. ಅಂಗಡಿ, ಕೆ.ಎ. ಉಪ್ಪಾರ, ಎಸ್.ಎನ್. ಬಿರಾದಾರ, ಎಸ್.ಎಸ್. ಹೊಸಮನಿ ಮತ್ತಿತರರು ವೇದಿಕೆಯಲ್ಲಿದ್ದರು.
ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಉಪನ್ಯಾಸಕರು ಇದ್ದರು. ಸಾವಿತ್ರಿ ಸಂಗಡಿಗರು ಪ್ರಾರ್ಥಿಸಿದರು. ಅಭ್ಯುದಯ ಕಾಲೇಜು ಆಡಳಿತಾಧಿಕಾರಿ ಎಸ್.ಎಚ್. ಹಾಲ್ಯಾಳ ಸ್ವಾಗತಿಸಿದರು. ಪಿಯು ಡಿಡಿ ಕಚೇರಿ ಅಧಿಧೀಕ್ಷಕ ಬಿ.ಟಿ. ಗೊಂಗಡಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಎಸ್.ಕೆ. ಹರನಾಳ ನಿರೂಪಿಸಿದರು.