Advertisement

ಪದಕ ಸೋತರೂ ಶ್ರೇಯಾಂಕ ಏರಿತು!

10:07 AM Feb 25, 2017 | Team Udayavani |

ಬೆಂಗಳೂರು: ಹಂಗೇರಿನಲ್ಲಿ ನಡೆದ ಅಂಗವಿಕಲರ ವಿಶ್ವ ವೀಲ್‌ಚೇರ್‌ ಫೆನ್ಸಿಂಗ್‌ನಲ್ಲಿ ರಾಜ್ಯದ ಸ್ಪರ್ಧಿ ಎನ್‌. ವೆಂಕಟೇಶ್‌ ಬಾಬು ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಕಂಡಿದ್ದಾರೆ. ಹೀಗಿದ್ದರೂ ವಿಶ್ವ ಅಂಗವಿಕಲರ ಫೆನ್ಸಿಂಗ್‌ ಶ್ರೇಯಾಂಕದಲ್ಲಿ 43ನೇ ಸ್ಥಾನಕ್ಕೆ ಏರಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಎನ್ನುವ ಗೌರವಕ್ಕೆ ವೆಂಕಟೇಶ್‌ ಪಾತ್ರರಾಗಿದ್ದಾರೆ. ಅಲ್ಲದೆ ತಂಡ ವಿಭಾಗದಲ್ಲಿ 16ನೇ ಸ್ಥಾನ ಪಡೆದು ವೆಂಕಟೇಶ್‌ ತವರಿಗೆ ಆಗಮಿಸಿದ್ದಾರೆ.

Advertisement

ಕೈಕೊಟ್ಟ ವೀಲ್‌ಚೇರ್‌: ಹಂಗೇರಿನಲ್ಲಿ ಪದಕ ಗೆಲ್ಲಬೇಕು ಎಂದು ಕನಸು ಹೊಂದಿದ್ದ ವೆಂಕಟೇಶ್‌ಗೆ ವೀಲ್‌ಚೇರ್‌ನಲ್ಲಾದ ತಾಂತ್ರಿಕ ಸಮಸ್ಯೆ ಅಡಚಣೆ ಉಂಟುಮಾಡಿತು.ಇದರಿಂದ ಕ್ವಾರ್ಟರ್‌ಫೈನಲ್‌ನಲ್ಲಿ ಸರಿಯಾಗಿ ಪ್ರದರ್ಶನ ನೀಡಲು ವೆಂಕಟೇಶ್‌ಗೆ ಸಾಧ್ಯವಾಗಿಲ್ಲ. ವೆಂಕಟೇಶ್‌ ಸೇರಿದಂತೆ ಭಾರತದಿಂದ ಒಟ್ಟು ನಾಲ್ವರು ಸ್ಪರ್ಧಿಗಳು ಕೂಟದಲ್ಲಿ ಭಾಗವಹಿಸಿದ್ದರು.

ಯಾರಿವರು ವೆಂಕಟೇಶ್‌?: ವೆಂಕಟೇಶ್‌ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನವರು. ಅವರಿಗೆ 28 ವರ್ಷ ವಯಸ್ಸು.ನಾರಾಯಣ ರೆಡ್ಡಿ, ಲಕ್ಷ್ಮೀ ದೇವಿ ದಂಪತಿಗಳಪುತ್ರ. 5 ವರ್ಷದ ಮಗುವಾಗಿದ್ದಾಗ ವೆಂಕಟೇಶ್‌ ಎತ್ತಿನ ಗಾಡಿ ಅಪಘಾತದಲ್ಲಿ ಬಲಗಾಲನ್ನು ಕಳೆದುಕೊಂಡಿದ್ದರು. ಇದಾದ
ಬಳಿಕ ಮಾನಸಿಕವಾಗಿ ಕುಗ್ಗದೆ ವೀಲ್‌ಚೇರ್‌ ಫೆನ್ಸಿಂಗ್‌ ಆಯ್ದುಕೊಂಡು ರಾಜ್ಯ,ರಾಷ್ಟ್ರೀಯ ಮಟ್ಟದಲ್ಲಿ ಹತ್ತು ಹಲವು ಸಾಧನೆ ಮಾಡಿದ್ದಾರೆ.

ವೆಂಕಟೇಶ್‌ ಸಾಧನೆ ಏನು?: 2013 ರಾಷ್ಟ್ರೀಯ ವೀಲ್‌ಚೇರ್‌ ಫೆನ್ಸಿಂಗ್‌ ಚಾಂಪಿ ಯನ್‌ಶಿಪ್‌ನಲ್ಲಿ ಕಂಚಿನ ಪದಕ, 2014ರಲ್ಲಿ ಚತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ವೀಲ್‌ಚೇರ್‌ ಫೆನ್ಸಿಂಗ್‌ನಲ್ಲಿ 1 ಬೆಳ್ಳಿ ಮತ್ತು 2 ಕಂಚಿನ ಪದಕ ಪಡೆದರು. ಹರ್ಯಾಣದಲ್ಲಿ ನಡೆದ ರಾಷ್ಟ್ರೀಯ ವೀಲ್‌ಚೇರ್‌ ಫೆನ್ಸಿಂಗ್‌ನಲ್ಲಿ ಬೆಳ್ಳಿ ಮತ್ತು 2 ಕಂಚಿನ ಪದಕ ಗೆದ್ದರು. ಇತ್ತೀಚೆಗೆ ಚತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ವೀಲ್‌ಚೇರ್‌ ಫೆನ್ಸಿಂಗ್‌ ಕೂಟದಲ್ಲಿ 2 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಪಡೆದಿದ್ದಾರೆ. ಅಲ್ಲದೆ ಕೆನಡಾ ಹಾಗೂ ಯುಎಇನಲ್ಲಿ ನಡೆದ ವಿಶ್ವಕಪ್‌ ವೀಲ್‌ ಚೇರ್‌ ಫೆನ್ಸಿಂಗ್‌ನಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ಹಾಂಕಾಂಗ್‌ನಲ್ಲಿ ನಡೆದ ಏಷ್ಯನ್‌ ವೀಲ್‌ಚೇರ್‌ ಫೆನ್ಸಿಂಗ್‌ ಚಾಂಪಿಯನ್‌ಶಿಪ್‌, ಹಂಗೇರಿಯಾದಲ್ಲಿ ನಡೆದ ಐವಾಸ್‌ ವೀಲ್‌ಚೇರ್‌ ಫೆನ್ಸಿಂಗ್‌ ವಿಶ್ವಕಪ್‌ನಲ್ಲಿ ಭಾಗವಹಿಸಿ ಕ್ವಾರ್ಟರ್‌ಫೈನಲ್‌ ತನಕ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.

ಏನಿದು ವೀಲ್‌ಚೇರ್‌ ಫೆನ್ಸಿಂಗ್‌?
ಲಾಕ್‌ ಆಗಿರುವ ಎರಡು ಪ್ರತ್ಯೇಕ ವೀಲ್‌ಚೇರ್‌ ಮೇಲೆ ಕುಳಿತು ಅಂಗವಿಕಲ ಕ್ರೀಡಾಪಟುಗಳು ಪರಸ್ಪರ ಸ್ಪರ್ಧಿಸಬೇಕು. ಇದನ್ನು ವೀಲ್‌ಚೇರ್‌ ಫೆನ್ಸಿಂಗ್‌ ಎನ್ನಲಾಗುತ್ತದೆ. ಈಪಿ, ಫಾಯಿನ್‌, ಸಬೇರ್‌ ಎಂಬ ಮೂರು ಆಯುಧಗಳನ್ನು ಇಲ್ಲಿ ಬಳಸಲಾಗುತ್ತದೆ. ಇದರಲ್ಲಿ ಸ್ಪರ್ಧಿಗಳು ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು. ಲೀಗ್‌ನಲ್ಲಿ ಸ್ಪರ್ಧೆಯಲ್ಲಿ 5 ನಿಮಿಷದ ಮಿತಿ ಇರುತ್ತದೆ.ಇಲ್ಲಿ ಎದುರಾಳಿಗೆ ಯಾರು ಹೆಚ್ಚು ಬಾರಿ ಆಯುಧವನ್ನು ತಾಗಿಸುತ್ತಾರೋ ಅವರು ವಿಜೇತರಾಗಿ ಮುಂದಿನ ಸುತ್ತಿಗೆ ಆಯ್ಕೆಯಾಗುತ್ತಾರೆ. ಅಂಕರಹಿತವಾಗಿ ಪಂದ್ಯ ಡ್ರಾಗೊಂಡರೆ ಹೆಚ್ಚುವರಿ 1 ನಿಮಿಷ ಅವಧಿ ನೀಡಲಾಗುತ್ತದೆ. ಮತ್ತೆ ಡ್ರಾಗೊಂಡರೆ ಟಾಸ್‌ ಹಾಕಲಾಗುತ್ತದೆ. ಟಾಸ್‌ ಗೆದ್ದವರಿಗೆ ಹೆಚ್ಚುವರಿಯಾಗಿ 1 ಅಂಕ ಸಿಗುತ್ತದೆ. ಹೀಗಾಗಿ ಮುಂದಿನ ಪೂರ್ಣಾವಧಿಯಲ್ಲಿ ಎದುರಾಳಿ ಅಂಕಗಳಿಸದಂತೆ ನೋಡಿಕೊಂಡರೆ ಟಾಸ್‌ ಗೆದ್ದವನು ವಿಜೇತನಾಗುತ್ತಾನೆ. ಎದುರಾಳಿ ಅಂಕಗಳಿಸಿದರೆಪಂದ್ಯ ಮುಂದುವರಿಯುತ್ತದೆ. ಹೆಚ್ಚು ಅಂಕಗಳಿಸಿದವನು ವಿಜೇತನಾಗುತ್ತಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next