ಮೂಡುಬಿದಿರೆ: ಬಿರುಬಿಸಿಲಿಗೆ ಒಣಗಿ ಹೋಗಿರುವ ಫಲ್ಗುಣಿ ನದಿಯ ಹನ್ನೆರಡು ಕವಲು ಪರಿಸರದಲ್ಲಿ ಯಂತ್ರಗಳನ್ನು ಬಳಸಿ ಮರಳುಗಾರಿಕೆ ನಡೆಸುತ್ತಿರುವುದು ಕಂಡುಬಂದಿದ್ದು, ಇದು ಅಕ್ರಮ ಚಟುವಟಿಕೆ ಆಗಿರಬಹುದೇ ಎಂಬ ಸಂಶಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಹನ್ನೆರಡು ಕವಲು ಭಾಗದಲ್ಲಿ ಫಲ್ಗುಣಿ ನದಿಯಲ್ಲಿ ಮಳೆಗಾಲದಲ್ಲಿ ನೀರಿರುವಷ್ಟು ಕಾಲ ಕಾರ್ಯಾಚರಿಸುವ ಬೊಬ್ಬ ಜಲ ವಿದ್ಯುತ್ ಯೋಜನೆಯು ಪ್ರಸ್ತುತ ನೀರು ಬತ್ತಿರುವುದರಿಂದ ಮೌನವಾಗಿದೆ. ಅಣೆಕಟ್ಟು ದುರಸ್ತಿ ನಡೆಯುತ್ತಿದೆ. ಇದೇ ವೇಳೆ ಅದರಾಚೆಗೆ ಹರಡಿಬಿದ್ದಿರುವ ಮರಳು ಮಿಶ್ರಿತ ಹೂಳಿನಲ್ಲಿ ಮರಳ ನಿಧಿ ಶೋಧ ನಡೆಯುತ್ತಿರುವುದು ಸಂಶಯಕ್ಕೆಡೆ ಮಾಡಿದೆ.
ಹೊಳೆಯ ಒಂದು ಬದಿಯಲ್ಲಿ ಹಿಟಾಚಿ ಯಂತ್ರದ ಮೂಲಕ ಬೃಹತ್ ಗಾತ್ರದ ಜಾಲರಿಯ ಮೇಲೆ ಹೂಳನ್ನು ಸುರಿದು ಒಳ್ಳೆಯ ಮರಳನ್ನು ಪ್ರತ್ಯೇಕಿಸುತ್ತಿರುವುದು ಕಾಣಿಸುತ್ತಿದೆ. ಪಕ್ಕದಲ್ಲೇ ಹೊಳೆಯತ್ತ ಹೊಚ್ಚಹೊಸದಾಗಿ ಕೆಂಪು ಮಣ್ಣಿನ ಮಾರ್ಗವೊಂದು ನಿರ್ಮಾಣವಾಗಿರುವುದೂ ಗೋಚರಿಸುತ್ತದೆ.
ಎಷ್ಟು ಮರಳನ್ನು, ಎಷ್ಟು ಆಳಕ್ಕೆ ತೆಗೆಯಬಹುದು? ತೆಗೆಯದೇ ಇದ್ದರೆ ಏನಾಗುತ್ತದೆ? ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಿಗೆ ಮರಳನ್ನು ತೆಗೆದರೆ ಜಲಮಟ್ಟ, ಜಲ ಮೂಲಗಳಿಗೆ ಏನಾಗಬಹುದು? ಇಂತಿಷ್ಟು ತೆಗೆಯುವುದು ಸೂಕ್ತ ಎಂದಾದರೆ ಅದರ ರಾಯಧನ ನಿಗದಿ ಪಡಿಸಿ ಸ್ಥಳೀಯ ಆಡಳಿಕ್ಕೆ ಬಿಟ್ಟುಕೊಟ್ಟರೆ ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲ ಒದಗಿಸಿದಂತಾಗದೆ? ಎಂಬಿತ್ಯಾದಿ ಪ್ರಶ್ನೆಗಳು ಸ್ಥಳೀಯರನ್ನು ಕಾಡುತ್ತಿವೆ.
ಒಟ್ಟಿನಲ್ಲಿ ಮರಳುಗಾರಿಕೆ ಚಟುವಟಿಕೆ ಮೇಲೆ ಸಂಶಯ ವ್ಯಕ್ತಪಡಿಸಿರುವ ಸ್ಥಳೀಯರು ಜನಪ್ರತಿನಿಧಿಗಳು, ಅಧಿಕಾರಿಗಳು, ಭೂಗರ್ಭ ಶಾಸ್ತ್ರಜ್ಞರು ಒಟ್ಟುಗೂಡಿ ಒಂದು ನಿಖರ ಮರಳು ನೀತಿಯನ್ನು ರೂಪಿಸುವಂತೆ ಆಗ್ರಹಿಸಿದ್ದಾರೆ.