Advertisement

ಯಾಂತ್ರಿಕ ಕಟಾವಿನ “ಸೋಯಾ’ತಳಿ ಅಭಿವೃದ್ಧಿ!

02:25 PM May 26, 2018 | |

ಬೀದರ: ಕಾಲ ಬದಲಾದಂತೆ ಕೃಷಿಯಲ್ಲೂ ಬದಲಾವಣೆ ಕಂಡುಬರುತ್ತಿದೆ. ಪ್ರತಿ ಬೆಳೆಗಳ ರಾಶಿಗೆ ಎದುರಾಗುತ್ತಿದ್ದ
ಕಾರ್ಮಿಕರ ಕೊರತೆಯನ್ನು ಯಾಂತ್ರಿಕ ಕಟಾವು ನೀಗಿಸಿದ್ದರೂ ಸೋಯಾಬಿನ್‌ ಬೆಳೆಗಾರರಿಗೆ ಮಾತ್ರ ಈ ಸಮಸ್ಯೆ ತಪ್ಪಿರಲಿಲ್ಲ. ಆದರೆ, ಈಗ ಯಂತ್ರದಿಂದ ಕಟಾವು ಮಾಡಬಹುದಾದ ಸೋಯಾಬಿನ್‌ ನೂತನ ತಳಿಯನ್ನು ಜಿಲ್ಲೆಯಲ್ಲಿ ಪರಿಚಯಿಸಲಾಗಿದೆ.

Advertisement

ಸೋಯಾಬಿನ್‌ ಬಿತ್ತನೆ ಮಾಡಿ ಕಟಾವು ಸಂದರ್ಭದಲ್ಲಿ ಕಾರ್ಮಿಕರ ಸಮಸ್ಯೆ ಎದುರಿಸುತ್ತಿದ್ದ ರೈತರಿಗೆ ಖುಷಿ ತಂದಿದ್ದು, ಹಲವು ವರ್ಷಗಳ ಆಶಯ ಈಡೇರಿದಂತಾಗಿದೆ. ಮಹಾರಾಷ್ಟ್ರದ ಅಕೋಲಾ ಡಾ.ಪಂಜಾಬ್‌ರಾವ್‌ ದೇಶಮುಖ ಕೃಷಿ ವಿಶ್ವವಿದ್ಯಾಲಯ ಎಂಎಸಿಎಸ್‌-162 ಈ ಹೊಸ ತಳಿಯನ್ನು ಕಂಡು ಹಿಡಿದಿದ್ದು, ಮಹಾರಾಷ್ಟ್ರದ ರೈತರು ನೂತನ ತಳಿ ಬೆಳೆದು ಯಂತ್ರದ ಮೂಲಕ ಕಟಾವು ಮಾಡುತ್ತಿದ್ದಾರೆ. ಈಗ ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಜನವಾಡಾ ಕೃಷಿ ವಿಜ್ಞಾನ ಕೇಂದ್ರವು ಹೊಸ ತಳಿಯನ್ನು ಕೆವಿಕೆ ಫಾರ್ಮ್‌ನಲ್ಲಿ ಪ್ರಯೋಗ ಮಾಡಿದ್ದು, ಯಶಸ್ಸು ಕಂಡಿದೆ.

ಗಡಿ ಜಿಲ್ಲೆ ಬೀದರನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಸೋಯಾಬಿನ್‌ ಬೆಳೆ ಬಿತ್ತಲಾಗುತ್ತದೆ. ಜೋಳ, ತೊಗರಿ ಕಣಜ ಎನಿಸಿಕೊಳ್ಳುತ್ತಿದ್ದ ಬೀದರನಲ್ಲಿ ಈಗ ಪಾರಂಪರಿಕ ಬೆಳೆಯನ್ನು ರೈತರು ಕೈ ಬಿಟ್ಟು ಮಳೆ ಅಭಾವದಲ್ಲೂ ಉತ್ತಮ ಫಸಲು ಕೊಡುವ ಸೋಯಾದತ್ತ ಮುಖ ಮಾಡಿದ್ದಾರೆ. ಜಿಲ್ಲೆಯ ಒಟ್ಟು 3.39 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಪೈಕಿ ಶೇ. 40ರಷ್ಟು ಅಂದರೆ 1.35 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾ ಬೆಳೆ ಬಿತ್ತನೆ ಮಾಡಲಾಗುತ್ತದೆ.

ಆದರೆ, ಸೋಯಾಬಿನ್‌ ಬೆಳೆ ಕಟಾವಿಗೆ ಬರುತ್ತಿದ್ದಂತೆ ರೈತರಿಗೆ ಸಮಸ್ಯೆಗಳು ಎದುರಾಗುತ್ತಿದ್ದವು. ಮುಖ್ಯವಾಗಿ
ಕಾರ್ಮಿಕರ ಕೊರತೆ ಅನ್ನದಾತರನ್ನು ಕಾಡುತ್ತಿತ್ತು. ಸುಗ್ಗಿಯ ಕಾಲದಲ್ಲಿ ಕೃಷಿ ಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆ. ಸಿಕ್ಕರೂ ಅಧಿ ಕ ಕೂಲಿ ಕೊಡಬೇಕು. ಕೈಯಿಂದ ಕಟಾವು ಮಾಡಿದ ಬಳಿಕ ಸೋಯಾಬಿನ್‌ ಬೆಳೆಯನ್ನು ರಾಶಿಗಾಗಿ ಯಂತ್ರಕ್ಕೆ ಹಾಕಬೇಕಾಗುತ್ತಿತ್ತು. ಕೂಲಿ ಮತ್ತು ಯಂತ್ರದ ವೆಚ್ಚ ರೈತರಿಗೆ ಆರ್ಥಿಕ ಲಾಭದಲ್ಲಿ ಕುಸಿಯುವಂತೆ ಮಾಡುತ್ತಿತ್ತು. ಆದರೆ, ಈಗ ಬೆಳೆಯ ಹೊಸ ತಳಿಯಿಂದ ಇವೆಲ್ಲವುಗಳನ್ನು ನೀಗಿಸಲು ಮತ್ತು ಸಮಯ, ಹಣ ಉಳಿತಾಯ ಮಾಡಲು ಸಹ ಸಾಧ್ಯವಾಗಲಿದೆ.

ಸೋಯಾಬಿನ್‌ ನೂತನ ಎಂಎಸಿಎಸ್‌-162 ತಳಿಯನ್ನು ಬಿತ್ತಿದರೆ ಎಕೆರೆಗೆ 10 ರಿಂದ 12 ಕ್ವಿಂಟಲ್‌ ಉತ್ಪಾದನೆ ಪಡೆಯಬಹುದು. ಇತರ ತಳಿಗಳು 1.5 ಅಡಿ ಎತ್ತರ ಇದ್ದರೆ, ಹೊಸ ತಳಿ 2 ಅಡಿ ಎತ್ತರ ಬೆಳೆಯುತ್ತದೆ. ಈ ತಳಿಗೆ ಕಾಯಿಗಳು ಗಿಡದ ಮೇಲೆ ಕಟ್ಟಿಕೊಳ್ಳುತ್ತವೆ. ಹಾಗಾಗಿ ಇತರ ಬೆಳೆಗಳಂತೆ ಸೋಯಾಬಿನ್‌ ಬೆಳೆಯನ್ನು ಸಹ ಯಂತ್ರದ ಮೂಲಕ ಕಟಾವು ಮಾಡಬಹುದು.

Advertisement

ಕಾರ್ಮಿಕರಿಂದ ಪ್ರತಿ ದಿನ 2 ಎಕರೆ ಕಟಾವು ಮಾಡಬಹುದು. ಆದರೆ, ಯಾಂತ್ರಿಕ ಕಟಾವುದಿಂದ 20ರಿಂದ 25 ಎಕರೆ ಬೆಳೆಯನ್ನು ಕಟಾವು ಮಾಡಿ ರಾಶಿ ಮಾಡಬಹುದಾಗಿದೆ. ಬೀದರ ಸಮೀಪದ ಜನವಾಡಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೂತನ ತಳಿ ಎಂಎಸಿಎಸ್‌ -162 ಬೀಜ ಲಭ್ಯವಿದ್ದು, ಹಲವು ರೈತರು ಖರೀದಿಗೆ ಮುಂದಾಗಿದ್ದಾರೆ. ಆಸಕ್ತ ರೈತರು ಹೊಸ ತಳಿಯ ಪ್ರಯೋಗ ಮಾಡಿ ಸಮಯ-ಹಣ ಉಳಿಸಬಹುದು

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next