Advertisement

ಮೂಟೆಗಟ್ಟಲೆ ಕೋಳಿ ತ್ಯಾಜ್ಯ ಎಸೆದ ದುಷ್ಕರ್ಮಿಗಳು

03:30 AM Jul 04, 2018 | Team Udayavani |

ಮುಳ್ಳೇರಿಯ: ಬೆಳ್ಳೂರು ಪಂಚಾಯತ್‌ 1ನೇ ವಾರ್ಡ್‌ ಈಂದುಮೂಲೆಯ ಚಿಪ್ಲುಕೋಟೆಯಲ್ಲಿ ರಾತ್ರಿ ಮರೆಯಲ್ಲಿ ದುಷ್ಕರ್ಮಿಗಳು ಮೂಟೆಗಟ್ಟಲೆ ಕೋಳಿ ತ್ಯಾಜ್ಯ ಎಸೆದು ಅಟ್ಟಹಾಸ ಮೆರೆದಿದ್ದಾರೆ. ಚಿಪ್ಲುಕೋಟೆ ಬಳಿಯಿರುವ ರಾಜೀವ ಗಾಂಧಿ ಕುಡಿಯುವ ನೀರು ಯೋಜನೆ ಟ್ಯಾಂಕ್‌ ಹಾಗೂ ಪಂಪ್‌ ಹೌಸ್‌ ಸಮೀಪ ಮೂಟೆಗಳಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಕಂಡು ಬಂದಿದೆ. ಸ್ಥಳೀಯರು ಆದೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಠಾಣಾಧಿಕಾರಿ ರಾಜೀವ್‌ ಕುಮಾರ್‌ ಹಾಗೂ ಪೊಲೀಸ್‌ ಸಿಬಂದಿ ಪಂಚಾಯತ್‌ ಅಧ್ಯಕ್ಷೆ ಹಾಗೂ ಸದಸ್ಯರ ಸಮ್ಮುಖದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ ತ್ಯಾಜ್ಯವು ಹಲವು ದಿನಗಳ ಮೊದಲಿನದ್ದಾಗಿದ್ದು ಆ ಕುರಿತು, ರಸ್ತೆ ಮೂಲಕ ಸಂಚರಿಸಿದ ವಾಹನಗಳ ವಿವರ ಸಂಗ್ರಹಿಸಿ, ಸಮೀಪ ಪ್ರದೇಶಗಳ ಸಿಸಿಟಿವಿ ಪರಿಶೋಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಂಜೆ ಪಂಚಾಯತ್‌ ಅಧ್ಯಕ್ಷೆ ಲತಾ ಯುವರಾಜ್‌, ಉಪಾಧ್ಯಕ್ಷ ಪುರುಷೋತ್ತಮನ್‌ ಸಿ.ವಿ., ಅಭಿವೃದ್ಧಿ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಮಾಲತಿ ಜೆ. ರೈ, ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ., ವಾರ್ಡ್‌ ಸದಸ್ಯೆ ವಿಶಾಲಾಕ್ಷಿ ಬಿ. ನೇತೃತ್ವದಲ್ಲಿ ಜೆಸಿಬಿ ಬಳಸಿ ತ್ಯಾಜ್ಯ ವಿಲೇವಾರಿ ನಡೆಸಲಾಯಿತು.

Advertisement

ಈ ಮೊದಲು ಮಾಹಿತಿ ಲಭಿಸಿದ ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಜೂ. ಆರೋಗ್ಯಾ ಧಿಕಾರಿ ಹೆ„ದರ್‌ ಶರೀಫ್‌, ತಿರುಮಲೇಶ್ವರ ನಾಯ್ಕ ಸ್ಥಳ ಸಂದರ್ಶಿಸಿದ್ದಾರೆ. ಅಲ್ಲಲ್ಲಿ ತ್ಯಾಜ್ಯ ಎಸೆಯುವುದು ಕಂಡು ಬರುತ್ತಿದ್ದು ಇದರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ. ಸಮಾಜ ಘಾತುಕರ ಕೋಳಿ  ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವ ಕೃತ್ಯ ಇದೇ ಮೊದಲಾಗಿರದೆ ಕಳೆದ ಮೇ ತಿಂಗಳಲ್ಲಿ ಪೆರ್ಲ ಗಾಳಿಗೋಪುರ ಏತಡ್ಕ ರಸ್ತೆಯ ಪೆರಿಯಾಲ್‌ ಎಂಬಲ್ಲಿ  ಮುಂಜಾವಿನ ವೇಳೆ ಕತ್ತಲೆ ಮರೆಯಲ್ಲಿ ಭಾರೀ ಪ್ರಮಾಣದಲ್ಲಿ ಕೋಳಿ ತ್ಯಾಜ್ಯವನ್ನು ರಸ್ತೆಗೆ ಎಸೆದಿದ್ದರು. ವಾಹನಗಳು ಅವುಗಳ ಮೇಲೆ ಸಾಗಿದ್ದು ಚೆಲ್ಲಾಪಿಲ್ಲಿಯಾಗಿ  ಹರಡಿದ್ದವು. ಘಟನೆ ಬಗ್ಗೆ ನಾಗರಿಕರು ದೂರು ನೀಡಿದುದರ ಅನ್ವಯ ಬದಿಯಡ್ಕ ಠಾಣಾ ಫ್ಲೈಯಿಂಗ್‌ ಸ್ಕ್ವಾಡ್‌  ಪೊಲೀಸ್‌ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಲ್ಲಿ ಮಾಹಿತಿ ಪಡೆದುಕೊಂಡಿತ್ತು. ಬಳಿಕ ಪಂಚಾಯತ್‌ ಅಧ್ಯಕ್ಷರ ನೇತೃತ್ವದಲ್ಲಿ ಜೆಸಿಬಿ ಬಳಸಿ ತ್ಯಾಜ್ಯ ವಿಲೇವಾರಿ ನಡೆಸಲಾಗಿತ್ತು.


ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಂಡು ಸಾರ್ವಜನಿಕರು ಅದನ್ನು ಪಾಲಿಸುತ್ತಾ ಬರುವಾಗ ಅದೇ ರೀತಿ  ಜಿಲ್ಲೆ, ಬ್ಲಾಕ್‌ ಹಾಗೂ ಗ್ರಾಮ ಪಂಚಾಯತ್‌ ಮಟ್ಟದಲ್ಲಿ  ಆರೋಗ್ಯ ಜಾಗೃತಿ ಸೆಮಿನಾರ್‌ ಸಾಕ್ಷ್ಯಚಿತ್ರ, ಬೀದಿ ನಾಟಕಗಳ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದು ಹಾಗೂ ಮಳೆಗಾಲ ಪೂರ್ವ ಶುಚಿತ್ವ ಕಾರ್ಯಕ್ರಮಗಳು ನಡೆಯುತ್ತಿರುವ ಈ ವೇಳೆ ಸಮಾಜಘಾತುಕರು ಎಲ್ಲೆಂದರಲ್ಲಿ ಕೋಳಿ ತ್ಯಾಜ್ಯ ಎಸೆಯುತ್ತಿರುವುದು ನಾಗರಿಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಎಡೆ ಮಾಡಿದೆ.

ಬಿಜಂತಡ್ಕ, ನಾರಂಪಾಡಿ, ಉಕ್ಕಿನಡ್ಕ, ಸ್ವರ್ಗ ಸಮೀಪದ ಗೋಳಿಕಟ್ಟೆ,  ವಾಣೀನಗರ, ಪಾಣಾಜೆ-ಕಾಟುಕುಕ್ಕೆ ರಸ್ತೆ, ಧರ್ಮತ್ತಡ್ಕ  ಮೊದಲಾಗಿ ಹಲವೆಡೆ ಎಸೆಯುತ್ತಿದ್ದು ದುರ್ನಾತ ಬೀರುತ್ತಿರುವುದಲ್ಲದೆ ಸಾಂಕ್ರಾಮಿಕ ರೋಗಗಳು ಹರಡುವುದಕ್ಕೂ ಕಾರಣವಾಗುತ್ತಿವೆ. ಸಮೀಪ ಪ್ರದೇಶಗಳ ನಾನಾ ಭಾಗಗಳಿಂದ ಕೋಳಿ ಮಾಂಸ ಮಾರಾಟ ಕೇಂದ್ರಗಳಿಂದ ಕೋಳಿ ತ್ಯಾಜ್ಯ ಸಂಗ್ರಹಿಸಿ ಎಲ್ಲೆಂದರಲ್ಲಿ ಎಸೆಯುವ ಬೃಹತ್‌ ಜಾಲವೇ ಇದರ ಹಿಂದಿದೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next