ಹೊಸದಿಲ್ಲಿ : ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಂಸ ರಫ್ತು ಉದ್ಯಮಿ ಮೊಯಿನ್ ಕುರೇಶಿ ಯನ್ನು ಬಂಧಿಸಿದ್ದಾರೆ.
ಎಎನ್‌ಐ ವರದಿಗಳ ಪ್ರಕಾರ ಕುರೇಶಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು.
ಬಿಲಿಯಾಧಿಪತಿ ಆಗಿರುವ ಕುರೇಶಿ ಅಕ್ರಮ ಹಣ ವರ್ಗಾವಣೆ ಬಗ್ಗೆ ಖಚಿತ ಮಾಹಿತಿಗಳನ್ನು ಪಡೆದ ಜಾರಿ ನಿರ್ದೇಶನಾಲಯ ಸಿಬಂದಿಗಳು, ದಕ್ಷಿಣ ದಿಲ್ಲಿಯಲ್ಲಿ ಕುರೇಶಿಗೆ ಸೇರಿರುವ ಎರಡು ಲಾಕರ್‌ಗಳನ್ನು ಶೋಧಿಸಿದ್ದರು.
ಹಣ ಬದಲಿಗಾರರ ಮೂಲಕ ಕುರೇಶಿ ಕೋಟ್ಯಂತರ ರೂ. ಹಣವನ್ನು ಹವಾಲಾ ಮಾರ್ಗ ಬಳಸಿಕೊಂಡು ವರ್ಗಾವಣೆ ಮಾಡಿರುವುದಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.
ವಿದೇಶಗಳೊಂದಿಗೆ ನಡೆಸಲಾಗಿರುವ ಹಲವಾರು ಶಂಕಿತ ಹಣ ವರ್ಗಾವಣೆಗೆ ಸಂಬಂಧಿಸಿದ ದಾಖಲೆ ಪತ್ರಗಳು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಶೋಧ ಕಾರ್ಯಾಚರಣೆ ವೇಳೆ ಜಾರಿ ನಿರ್ದೇಶನಲಾಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ ಕುರೇಶಿ ಮತ್ತು ತನಿಖಾ ದಳದ ಇಬ್ಬರು ಮಾಜಿ ನಿರ್ದೇಶಕರ ವಿರುದ್ಧದ ಕೇಸುಗಳನ್ನು ಸಿಬಿಐಗೆ ಉಲ್ಲೇಖೀಸಿತ್ತು.