Advertisement

ಕೆಜಿಗೆ 200ರ ಗಡಿದಾಟಿದ ಕೋಳಿ ಮಾಂಸ; ನೀರೂರಿಸಿದರೂ ಕೈಗೆಟುಕದ ಅಂಜಲ್‌

04:45 AM May 24, 2018 | Karthik A |

ಮಹಾನಗರ: ಮಾಂಸ ಪ್ರಿಯರ ಪಾಲಿಗೆ ಕಹಿ ಸುದ್ದಿ. ಕಳೆದೆರಡು ತಿಂಗಳಿನಿಂದ ಏರಿಕೆಯಾಗುತ್ತಿದ್ದ ಕೋಳಿ ಮಾಂಸ ಮತ್ತು ಮೀನಿನ ಬೆಲೆ ಗಗನಕ್ಕೇರಿದೆ. ಕಿ.ಗ್ರಾಂಗೆ ಸುಮಾರು 90 ರೂ. ಇದ್ದ ದರ ಈಗ 200 ರೂ. ಗಡಿ ದಾಟಿದೆ. ಕೆಲವು ಮೀನುಗಳ ಬೆಲೆ 300 ರೂ. ಗೂ ಹೆಚ್ಚಿದೆ. ಇದು ಮಾಂಸಾಹಾರಿಗಳಲ್ಲಿ ನಿರಾಶೆ ಮೂಡಿಸಿದೆ.

Advertisement

ಬ್ರಾಯ್ಲರ್‌ ಕೋಳಿಗೆ 220 ರೂ. !
ಸಾಮಾನ್ಯವಾಗಿ ಬ್ರಾಯ್ಲರ್‌ ಕೋಳಿ ಮಾಂಸದ ಬೆಲೆ ಕಿ.ಗ್ರಾಂಗೆ 90 ರೂ.ನಿಂದ 100 ರೂ.ಗಳಷ್ಟಿರುತ್ತದೆ. ಏರಿಕೆ ಆದರೂ 10 ರೂ. ಮಾತ್ರ. ಆದರೆ ಕಳೆದ ಎರಡು ತಿಂಗಳಿಂದ ದರ ಏರಿಕೆಯಷ್ಟೇ ವಿನಾ ಇಳಿಯುತ್ತಿಲ್ಲ. ಚರ್ಮ ತೆಗೆದ ಕೋಳಿ ಮಾಂಸ ಕೆ.ಜಿ.ಗೆ ರವಿವಾರ 150 ರೂ. ನಿಂದ 160 ರೂ. ಇದ್ದರೆ, ಎರಡೇ ದಿನದಲ್ಲಿ ಸುಮಾರು 50- 60 ರೂ. ಏರಿಕೆಯಾಗಿದೆ.

ಬುಧವಾರ ನಗರದ ಕೆಲವು ಚಿಕನ್‌ ಮಳಿಗೆಗಳಲ್ಲಿ ಕೆ.ಜಿ.ಗೆ 220 ರೂ. ನಿಗದಿಪಡಿಸಲಾಗಿತ್ತು. ಅದೇ ರೀತಿ 140 ರೂ. ಇದ್ದ ಚರ್ಮ ಸಹಿತ ಮಾಂಸಕ್ಕೆ ಬುಧವಾರ 200 ರೂ.ಗೆ ಏರಿದೆ. 140 ರೂ. ಗಳಿದ್ದ ಟೈಸನ್‌ ಕೋಳಿ ಕೆಲವೆಡೆ 150 ರೂ. ನಿಂದ 210 ರೂ.ವರೆಗೆ ಕೆಲವೆಡೆ ಮಾರಾಟವಾಗುತ್ತಿದೆ. ಏರಿದ ದರದಲ್ಲಿಯೂ ನಗರದ ಕೋಳಿ ಮಾಂಸ ಅಂಗಡಿಗಳಲ್ಲಿ ಏಕರೂಪತೆ ಇಲ್ಲ.

ಮೀನು ಗಗನಕ್ಕೆ
ತಿಂಗಳ ಹಿಂದೆ 100 ರೂ.ಗೆ 10 ಬಂಗುಡೆ ಸಿಗುತ್ತಿದ್ದರೆ, ಈಗ ಐದಕ್ಕೆ ಇಳಿದಿದೆ. 50 ರೂ. ಗೆ 20 ಬೂತಾಯಿ ಸಿಗುತ್ತಿದ್ದರೆ, ಈಗ 100 ರೂ. ತೆರಬೇಕು. ಕೆ.ಜಿ.ಗೆ 500 ರೂ. ಇದ್ದ ದೊಡ್ಡ ಎಟ್ಟಿಗೆ ಈಗ 800 ರೂ. ಇದೆ. 600 ರೂ.ಗಳ ಅಂಜಲ್‌ ಮೀನಿಗೆ ಪ್ರಸ್ತುತ 800ರಿಂದ 850 ರೂ. ಇದೆ. ಕೆ.ಜಿ.ಗೆ 150 ರೂ.ಇದ್ದ ದೊಡ್ಡ ಗಾತ್ರದ ಏಡಿಯ ಬೆಲೆ 350 ರೂ. ಆಗಿದೆ. ಆದರೂ ಖರೀದಿ ಪ್ರಮಾಣ ಇಳಿದಿಲ್ಲ. ರಜೆ, ಸಮಾರಂಭಗಳಿಗೆ ಕೋಳಿ ಮಾಂಸ ಅಗತ್ಯ. ಈ ಹಿನ್ನೆಲೆಯಲ್ಲಿ ಬೇಡಿಕೆ ಇದೆ ಎನ್ನುತ್ತಾರೆ  ಚಿಕನ್‌ ಅಂಗಡಿಯೊಂದರ ಮ್ಯಾನೇಜರ್‌ ದಿನೇಶ್‌. ಬೇಡಿಕೆ ಹೆಚ್ಚಿರುವುದರಿಂದ ದರ ಏರಿಕೆ ಆಗಿದೆ ಎನ್ನುತ್ತಾರೆ ಚಿಕನ್‌ ಸ್ಟಾಲ್‌ ಸಿಬಂದಿ.

ಮೀನು ಅಲಭ್ಯತೆ ಕಾರಣ
ಕೋಳಿ ಮಾಂಸದ ದರ ಏರಿಕೆಗೆ ಮೀನು ಅಲಭ್ಯತೆಯೂ ಕಾರಣ. ಈಗ ಮೀನು ಲಭ್ಯತೆ ಕಡಿಮೆಯಾಗಿದೆ. ಇದರಿಂದಾಗಿ ಮೀನು ದರ ಏರಿದೆ, ಜನರು ಕೋಳಿ ಮಾಂಸದ ಮೊರೆ ಹೊಗುತ್ತಿದ್ದಾರೆ.

Advertisement

ಡಿಸೆಂಬರ್‌ನಲ್ಲಿ ಬೆಲೆ ಏರಿತ್ತು
ಡಿಸೆಂಬರ್‌ನಲ್ಲಿ ಬೀಸಿದ ಒಖೀ ಚಂಡಮಾರುತದಿಂದಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದೆ ಮೀನಿನ ಬೆಲೆ ದುಪ್ಪಟ್ಟಾಗಿತ್ತು. ಆಗಿನಿಂದಲೂ ಕೋಳಿ ಮಾಂಸದ ದರ ಏರಿಕೆಯಾಗಿತ್ತು. ಆದರೆ ಆಗ ಏರಿಕೆಯಾದದ್ದು ಕೇವಲ 25ರಿಂದ 30 ರೂ. ಮಾತ್ರ. ಡಿಸೆಂಬರ್‌ನಲ್ಲಿ 90-95 ರೂ.ಗಳಿದ್ದ ಬ್ರಾಯ್ಲರ್‌ ಕೋಳಿ ಮಾಂಸದ ಬೆಲೆ ಒಖೀ ಚಂಡಮಾರುತದ ಬಳಿಕ 110 ರೂ.ಗೆ, 120 ರೂ. ಇದ್ದ ಟೈಸನ್‌ ಬೆಲೆ 135 ರೂ., ಮೀನುಗಳಲ್ಲಿ ಅಂಜಲ್‌- 800 ರೂ., ಎಟ್ಟಿ -550 ರೂ.ಗಳಿಗೆ ತಲುಪಿದ್ದನ್ನು ಇಲ್ಲಿ ಸ್ಮರಿಸಬಹುದು. 

ಕೋಳಿ ಘಟ್ಟದಿಂದ ಆಮದು
ಕರಾವಳಿ ಭಾಗದಲ್ಲಿ ಬಿಸಿಲಿನ ತಾಪಕ್ಕೆ ಮತ್ತು ನೀರಿನ ಕೊರತೆಯಿಂದಾಗಿ ಕೋಳಿಗಳು ಸಾಯುತ್ತಿವೆ. ಇದರಿಂದ ಇಲ್ಲಿ ಉತ್ಪಾದನೆ ಕಡಿಮೆಯಾಗಿ ಶಿವಮೊಗ್ಗ ಮತ್ತಿತರ ಘಟ್ಟ ಪ್ರದೇಶಗಳಿಂದ ಕೋಳಿಗಳನ್ನು ತರಿಸಬೇಕಾಗುತ್ತದೆ. ಹೀಗಾಗಿ ಕೋಳಿ ಬೆಲೆ ಏರಿಕೆಯಾಗಿದೆ. ಪ್ರತಿದಿನ ಒಂದೇ ರೀತಿಯ ಬೆಲೆ ಇರುವುದಿಲ್ಲ. ಏರಿಳಿಕೆಗಳು ಆಗುತ್ತಿರುತ್ತವೆ.
– ಜೇಮ್ಸ್‌, ಕಾರ್ಯದರ್ಶಿ, ಮಂಗಳೂರು ಕೋಳಿ ಮಾರಾಟಗಾರರ ಸಂಘ

— ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next