ಬಂಟ್ವಾಳ: ಸರಕಾರಿ ಆಸ್ಪತ್ರೆಯನ್ನು ಸುಸಜ್ಜಿತವನ್ನಾಗಿಸಲು ದೃಷ್ಟಿಯಿಂದ ರಾಜ್ಯ ಆರೋಗ್ಯ ಇಲಾಖೆಯಿಂದ ಸುಮಾರು 1.66 ಕೋ.ರೂ.ಗಳಲ್ಲಿ ಐಸಿಯು ಹಾಸಿಗೆಗಳ ಸಂಖ್ಯೆಯನ್ನು 25ಕ್ಕೆ ಏರಿಸಲಾಗುತ್ತಿದೆ. ಶೀಘ್ರದಲ್ಲಿ ಹೊಸ ಐಸಿಯು ಘಟಕ ಆರೋಗ್ಯ ಸೇವೆಗೆ ಲಭ್ಯವಾಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದರು.
ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಐಸಿಯು ಬೆಡ್‌ಗಳ ಅನುಷ್ಠಾನ ಕಾರ್ಯವನ್ನು ಪರಿಶೀಲಿಸಿ ಪತ್ರಕರ್ತರ ಜತೆ ಮಾತನಾಡಿದರು. ಆಸ್ಪತ್ರೆಯಲ್ಲಿ ಈ ಹಿಂದೆ ಕೇವಲ 3 ಐಸಿಯು ಬೆಡ್‌ಗಳಿದ್ದು, 22 ಹೆಚ್ಚುವರಿ ಬೆಡ್‌ಗಳ ಮೂಲಕ ಅದನ್ನು 25ಕ್ಕೆ ಏರಿಸಲಾಗುತ್ತಿದೆ. ಆಸ್ಪತ್ರೆಗೆ ಗುಣಮಟ್ಟದ ವಿದ್ಯುತ್ ಪೂರೈಕೆಯ ದೃಷ್ಟಿಯಿಂದ 250 ಕೆ.ವಿ. ವಿದ್ಯುತ್ ಪರಿವರ್ತಕ ಹಾಗೂ 250 ಕೆ.ವಿ. ಜನರೇಟರ್ ವ್ಯವಸ್ಥೆಯೂ ಬಂದಿದೆ ಎಂದು ತಿಳಿಸಿದರು.
ಆಸ್ಪತ್ರೆಯ ಎಲ್ಲ 100 ಬೆಡ್‌ಗಳಿಗೂ ಆಮ್ಲಜನಕ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ. ಜತೆಗೆ ಆಕ್ಸಿಜನ್ ಲಿಕ್ವಿಡ್ ಘಟಕ ಮಂಜೂರಾಗಿದ್ದು, ಟ್ಯಾಂಕರ್ ಹೋಗುವ ವ್ಯವಸ್ಥೆಯನ್ನು ಮಾಡಿಕೊಂಡು ಸ್ಥಳಾವಕಾಶ ಒದಗಿಸಲಾಗುವುದು ಎಂದರು.
ಪಿಎಚ್‌ಸಿ ಅಭಿವೃದ್ಧಿಗೆ 1 ಕೋ.ರೂ.
ಬೆಂಜನಪದವು, ದೈವಸ್ಥಳ, ನಾವೂರು, ರಾಯಿ ಹಾಗೂ ಪುಣಚ ಸೇರಿ ಒಟ್ಟು 5 ಪಿಎಚ್‌ಸಿಗಳ ಅಭಿವೃದ್ಧಿಗೆ 1 ಕೋ.ರೂ. ಮಂಜೂರಾಗಿದೆ ಎಂದರು. ಆಡಳಿತ ವೈದ್ಯಾಧಿಕಾರಿ ಡಾ| ಪುಷ್ಪಲತಾ ಮಾತನಾಡಿ, ಆಸ್ಪತ್ರೆಗೆ ಸಿಸಿ ಕೆಮರಾ ವ್ಯವಸ್ಥೆ, ಹಾಸಿಗೆ, ಕಾಟ್, ಬೆಡ್ ಸೈಟ್ ಲಾಕರ್, ಹೆಮಟಾಲಜಿ ಅನಲೈಸರ್, ಶಸ್ತ್ರಚಿಕಿತ್ಸೆಗೆ ಟೇಬಲ್ಸ್, ಒಟಿ ಲೈಟ್ಸ್, ಎಕ್ಸ್‌ರೇ ಮೆಷಿನ್ಸ್, ಅಲ್ಟ್ರಾಸೌಂಡ್ ಮೆಷಿನ್, ಇಎನ್‌ಟಿ ಶಸ್ತ್ರ ಚಿಕಿತ್ಸೆ ಪರಿಕರ, ಆ್ಯಂಬುಲೆನ್ಸ್, ವೆಂಟಿಲೇಟರ್, ಇಸಿಜಿ ಮೆಷಿನ್ಸ್, ಪಲ್ಸ್ ಆಕ್ಸಿ ಮೀಟರ್, 7 ಡಯಾಲಿಸಿಸ್ ಮೆಷಿನ್, ಆಕ್ಸಿಜನ್ ಘಟಕ, ಫೈಯರ್ ಸೇಪ್ಟಿ ಸಿಸ್ಟಂ, ಲಾಂಡ್ರಿ ಮೆಷಿನ್ಸ್, ಸೋಲಾರ್ ಸಿಸ್ಟಂ ಇತ್ಯಾದಿ ಮಂಜೂರಾಗಿವೆ ಎಂದು ಹೇಳಿದರು.
ಐಸಿಯು ಬೆಡ್ ವ್ಯವಸ್ಥೆ ಅನುಷ್ಠಾನದ ಕುರಿತು ಆರೋಗ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಇ.ಕೆ. ಶೆಟ್ಟಿ, ಸಹಾಯಕ ಎಂಜಿನಿಯರ್ ವಿವರಿಸಿದರು.
ಆಕ್ಸಿಜನ್ ಲಿಕ್ವಿಡ್ ಘಟಕದ ಸ್ಥಳಾವಕಾಶ ಕುರಿತು ಶಾಸಕರು ಆಸ್ಪತ್ರೆಯ ಆವರಣದಲ್ಲಿ ಪರಿಶೀಲನೆ ನಡೆಸಿದರು. ತಾ| ಆರೋಗ್ಯಾಧಿಕಾರಿ ಡಾ| ಜಯಪ್ರಕಾಶ್, ಪ್ರಮುಖರಾದ ವಿಶ್ವನಾಥ ಚಂಡ್ತಿಮಾರ್, ಹರಿಪ್ರಸಾದ್, ಪ್ರಮೋದ್ ಕುಮಾರ್, ಪ್ರಕಾಶ್ ಅಂಚನ್ ಉಪಸ್ಥಿತರಿದ್ದರು.