ಗದಗ: ಜಿಲ್ಲೆಯ ಗದಗ ಹಾಗೂ ರೋಣ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಅಂತರ್ಜಲ ಪುನಶ್ಚೇತನಕ್ಕೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಅಂತರ್ಜಲ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂತರ್ಜಲ ಸುರಕ್ಷತೆಗೆ ರಾಜ್ಯ ಸರ್ಕಾರ ಆದೇಶ ಜಾರಿಗೊಳಿಸಿದ್ದು, ತೀವ್ರ ಅಂತರ್ಜಲ ಕುಸಿತ ವಲಯದಲ್ಲಿ ಗದಗ ಜಿಲ್ಲೆಯ ಗದಗ ಮತ್ತು ರೋಣ ತಾಲೂಕುಗಳನ್ನು ಅಂತರ್ಜಲ ಅತೀ ಬಳಕೆಯ ತಾಲೂಕುಗಳೆಂದು ಅಧಿಸೂಚಿಸಿದೆ. ವೈಯಕ್ತಿಕ ಅಥವಾ ಸರ್ಕಾರದ ಇಲಾಖೆ ಸಂಸ್ಥೆಗಳು ಸೇರಿದಂತೆ ಸಮುದಾಯದ ಬಳಕೆಯ ಉದ್ದೇಶಕ್ಕಾಗಿ ಕೊಳವೆ ಬಾಯಿ ಕೊರೆಯಿಸಲು ಜಿಲ್ಲಾ ಅಂತರ್ಜಲ ಪ್ರಾಧಿಕಾರದ ಅನುಮತಿ ಕಡ್ಡಾಯ ಮಾಡಲಾಗಿದೆ.
ಕೊಳವೆ ಬಾವಿ ಕೊರೆಯುವ ಯಂತ್ರವನ್ನು ಹೊಂದಿರುವ ಮಾಲೀಕರು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ನೋಂದಣಿ ಹೊಂದಿರುವುದು ಹಾಗೂ ನೋಂದಣಿಯ ಷರತ್ತು ಮತ್ತು ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜೊತೆಗೆ ಅಧಿಸೂಚನೆಗಿಂತ ಮುಂಚಿತವಾಗಿ ಕೊರೆದ ಕೊಳವೆ ಬಾವಿಗಳನ್ನು ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಕೈಗಾರಿಕೆ, ವಾಣಿಜ್ಯ, ಮನರಂಜನೆ ಉದ್ದೇಶಕ್ಕಾಗಿ ಅಂತರ್ಜಲ ಬಳಸಲು ಪ್ರಾಧಿಕಾರದಿಂದ ನಿರಪೇಕ್ಷಣಾ ಪತ್ರ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಂತರ್ಜಲ ಕುಸಿತ ತಪ್ಪಿಸಲು ರಾಜ್ಯ ಸರ್ಕಾರ ಈಗಾಗಲೇ ಜಾರಿ ಮಾಡಿರುವ ಜಲಾಮೃತ ಯೋಜನೆ ಹಾಗೂ ಕೇಂದ್ರ ಸರ್ಕಾರ ಗದಗ ಹಾಗೂ ರೋಣ ತಾಲೂಕಿನಲ್ಲಿ ಜಾರಿಗೊಳಿಸಲು ಯೋಜಿಸುವ ಜಲಶಕ್ತಿ ಅಭಿಯಾನವನ್ನು ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ತಮ್ಮ ವ್ಯಾಪ್ತಿಯ ಪ್ರತಿಯೊಂದು ಸರ್ಕಾರಿ ಕಟ್ಟಡಗಳಿಗೆ ಮತ್ತು ಪ್ರತಿ ಮನೆಗೂ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಲು ಕ್ರಮ ಜರುಗಿಸಬೇಕು.
ಜಲ ಸಂರಕ್ಷಣೆಗಾಗಿ ಕೆರೆ ನಿರ್ಮಾಣ, ಈಗಾಗಲೇ ಇರುವ ಕೆರೆಗಳ ಹೂಳೆತ್ತುವುದು, ಚೆಕ್ ಡ್ಯಾಂ ಹಾಗೂ ಕೃಷಿ ಹೊಂಡಗಳ ನಿರ್ಮಾಣ ಹಾಗೂ ನಿರ್ವಹಣೆ ಸೇರಿದಂತೆ ಜಲ ಮರುಪೂರಣಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳು ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರೂ ಸ್ವಯಂ ಪ್ರೇರಿತರಾಗಿ ಜಲ ಸಂರಕ್ಷಣೆ ಹಾಗೂ ಮರುಪೂರಣ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎನ್.ಎಸ್., ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ, ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ಹಿರಿಯ ಅಧಿಕಾರಿಗಳು ಇದ್ದರು.