Advertisement

ದೇವಾಲಯಗಳ ಆಧ್ಯಾತ್ಮಿಕ ವಾತಾವರಣ ಇನ್ನಷ್ಟು ಸುಧಾರಣೆಗೆ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ

03:13 PM Oct 15, 2021 | Team Udayavani |

ಬೆಂಗಳೂರು: ದುಷ್ಟ ಶಕ್ತಿಗಳ ಸಂಹಾರದ ಪ್ರತೀಕವಾಗಿ ಆಚರಿಸುವ ವಿಜಯದಶಮಿಯ ಸುಸಂದರ್ಭದಲ್ಲಿ, ಕೋವಿಡ್ ಸೋಂಕಿನಿಂದ ನಮ್ಮ ನಾಡಿನ ಜನತೆಗೆ ಯಾವುದೇ ತೊಂದರೆಯಾಗದಂತೆ ಪ್ರಾರ್ಥಿಸಲು ರಾಜ್ಯದ ದೇವಾಲಯಗಳಲ್ಲಿ ವಿಜಯದಶಮಿಯ ಶುಭ ದಿನಂದು ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

Advertisement

ರಾಜ್ಯದ ಪ್ರಮುಖ ಶ್ರದ್ಧಾಕೇಂದ್ರವಾದ ಬೆಳಗಾವಿ ಜಿಲ್ಲೆಯ ಶ್ರೀಕ್ಷೇತ್ರ ಸವದತ್ತಿ ಶ್ರೀ ಯಲ್ಲಮ್ಮದೇವಿ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆ ರಾಜ್ಯದ ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವೆ ಶಶಿಕಲಾ ಅ. ಜೊಲ್ಲೆಯವರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ನಾಡಿನಾದ್ಯಂತ ನಡೆಯುವ ವಿಶೇಷ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಿದರು.

ಪ್ರಾತಃಕಾಲ ಆರು ಗಂಟೆಗೆ ಯಲ್ಲಮ್ಮನ ದೇವಾಲಯಕ್ಕೆ ಆಗಮಿಸಿದ ಸಚಿವರು ದೇವಾಲಯದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ನಮ್ಮ ನಾಡಿನ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಅನುಗ್ರಹಿಸಬೇಕೆಂದು ದೇವಿಯಲ್ಲಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.

ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗೊಳಗಾಗಿದ್ದು, ನಮ್ಮ ಮಕ್ಕಳು ಶಾಲೆಯತ್ತ ಮುಖ ಮಾಡದೇ ಮನೆಯಲ್ಲೇ ಇರುವಂತಾಗಿದೆ. ಈಗ ಮಕ್ಕಳು ಶಾಲೆಯತ್ತ ಮುಖ ಮಾಡಿರುವ ಈ ಸಂದರ್ಭದಲ್ಲಿ ಅವರಿಗೆ ಯಾವುದೇ ತೊಂದರೆಯಾಗದಂತೆ ದೇವಿ ಆರ್ಶೀವದಿಸಬೇಕೆಂದು ಕೋರಿದರು. ಕೋವಿಡ್ ಸೋಂಕಿನಿಂದ ತೊಂದರೆಯಾಗಿರುವ ನಾಡಿನ ಜನರು ಸುಭಿಕ್ಷ ವಾತಾವರಣದಲ್ಲಿ ಜೀವಿಸುವಂತೆ ಅನುಗ್ರಹಿಸಬೇಕೆಂದು ಪ್ರಾರ್ಥನೆ ಸಲ್ಲಿಸಿದರು.

ನಂತರ ದೇವಾಲಯದ ಅಧಿಕಾರಿಗಳು ಹಾಗೂ ಅರ್ಚಕರೊಂದಿಗೆ ಚರ್ಚಿಸಿದ ಅವರು, ದೇವಾಲಯದ ಅಗತ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಸವದತ್ತಿ ಶ್ರೀಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಲೋಚನೆ ನಡೆಸಿ ವಿಸ್ತೃತ ಪ್ರಸ್ತಾವನೆ ಮತ್ತು ಕ್ರಿಯಾ ಯೋಜನೆ ರೂಪಿಸಲು ಸೂಚನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆ ವ್ಯಾಪ್ತಿಯ ರಾಜ್ಯದ ಎಲ್ಲ ದೇವಾಲಯಗಳಲ್ಲಿ ಶುಕ್ರವಾರ ವಿಜಯ ದಶಮಿ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆಯಾಗದಂತೆ , ನಾಡಿನ ಜನತೆಯ ಒಳಿತಿಗಾಗಿ ಪ್ರಾರ್ಥಿಸಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗಿದೆ ಎಂದು ಸಚಿವರು ಹೇಳಿದರು.

ರಾಜ್ಯದ ಎಲ್ಲ ದೇವಾಲಯಗಳಲ್ಲಿ ಶ್ರದ್ಧಾಳು ಭಕ್ತ ಸಮೂಹಕ್ಕೆ ಅತ್ಯುತ್ತಮ ಸೌಕರ್ಯ ಒದಗಿಸುವುದು ಹಾಗೂ ಉತ್ತಮ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ತಾವು ಸಚಿವರಾದ ನಂತರ ಇಲಾಖೆಗೆ ಸಂಬಂಧಿಸಿದಂತೆ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದೇವಾಲಯಗಳ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವುದು, ಮತ್ತು ತ್ವರಿತಗತಿಯಲ್ಲಿ ದೇವಾಲಯಗಳ ಸೇವೆ ದೊರೆಯುವಂತೆ ಮಾಡಲು  ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ  ಎಂದು ಶಶಿಕಲಾ ಜೊಲ್ಲೆಯವರು ಹೇಳಿದರು.

ವಿಶೇಷ ಪೂಜೆಗೆ ಸಚಿವರನ್ನು ದೇವಾಲಯದ ಅಧಿಕಾರಿಗಳು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಚಿಕ್ಕೋಡಿ ಸಂಸದರಾದ ಅಣ್ಣಾ ಸಾಹೇಬ ಜೊಲ್ಲೆ, ಸ್ಥಳೀಯ ಶಾಸಕರಾದ ಆನಂದ ಮಾಮನಿ, ದೇವಾಲಯದ ಪ್ರಮುಖರಾದ ಕೋಟರಗಸ್ತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next